ಬೆಂಗಳೂರು: ಹಿಜಾಬ್ ಸಂಬಂಧ ಹೈಕೋರ್ಟ್ ಆದೇಶ ಬಂದ ನಂತರವೂ ಅದನ್ನು ಧಿಕ್ಕರಿಸಿ ಪ್ರತಿಭಟನೆ ಮಾಡುತ್ತಿರುವವರ ಮೇಲೆ ಕಾನೂನು ಕ್ರಮ ಜರುಗಿಸಬೇಕು. ಇದರ ಜೊತೆಗೆ, ಕಳೆದ ಬಾರಿ ಪರೀಕ್ಷೆ ತಪ್ಪಿಸಿಕೊಂಡಿದ್ದು, ಈಗ ಹಿಜಾಬ್ ತೆಗೆದಿಟ್ಟು ಹೋಗಲು ಮುಂದಾಗುವ ವಿದ್ಯಾರ್ಥಿನಿಯರಿಗೆ ಮತ್ತೊಮ್ಮೆ ಪರೀಕ್ಷೆ ಬರೆಯಲು ಅವಕಾಶ ಕೊಡಬಹುದು ಎಂದು ಬಿಜೆಪಿ ಶಾಸಕ ರಘುಪತಿ ಭಟ್ ವಿಧಾನಸಭೆಯಲ್ಲಿ ಸರ್ಕಾರಕ್ಕೆ ಮನವಿ ಮಾಡಿದರು.
ಹಿಜಾಬ್ ವಿವಾದದ ಕುರಿತು ಇಂದು ಸದನದಲ್ಲಿ ಪ್ರಸ್ತಾಪಿಸಿದ ಅವರು, ಹಿಜಾಬ್ ಬಗ್ಗೆ ತೀರ್ಪು ಬಂದಿದೆ. ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್ಗೆ ಹೋಗಲು ಅವಕಾಶ ಇದೆ, ಅವರು ಹೋಗಬಹುದು. ಆದರೆ ಈಗ ಬಂದ್ ಮಾಡೋದು ಕೋರ್ಟ್ ತೀರ್ಪಿನ ಮೇಲೆ ಪ್ರಭಾವ ಬೀರಿದಂತಾಗುತ್ತದೆ. ಇಂತಹವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಇದಕ್ಕೆ ಬೆಂಬಲ ವ್ಯಕ್ತಪಡಿಸಿದ ಮಾಜಿ ಸಚಿವ ಜಗದೀಶ್ ಶೆಟ್ಟರ್, ಕೋರ್ಟ್ ತೀರ್ಪಿನ ವಿರುದ್ದ ಪ್ರತಿಭಟನೆ ಬಂದ್ ಮಾಡುವುದು ಸರಿಯಲ್ಲ. ಹೈಕೋರ್ಟ್ ನಿರ್ಧಾರವನ್ನು ಸುಪ್ರೀಂಕೋರ್ಟ್ನಲ್ಲಿ ಪ್ರಶ್ನಿಸಲು ಅವಕಾಶ ಇದೆ. ರಘುಪತಿ ಬಟ್ ಅಭಿಪ್ರಾಯಕ್ಕೆ ಸಂಪೂರ್ಣ ಬೆಂಬಲ ಇದೆ. ಆದರೆ ತೀರ್ಪನ್ನು ಬಹಿರಂಗವಾಗಿ ವಿರೋಧಿಸುವುದು, ಬಂದ್ ಕರೆ ಕೊಡುತ್ತಾರೆ ಅಂದರೆ ನ್ಯಾಯಾಲಯದ ಆದೇಶಕ್ಕೆ ಕಿಮ್ಮತ್ತು ಇಲ್ಲವೇ? ಎಂದು ಪ್ರಶ್ನಿಸಿದರು.
ಇದನ್ನೂ ಓದಿ:ನಟ ದಿಲೀಪ್ ಮೇಲಿನ ಕೊಲೆ ಸಂಚು ಪ್ರಕರಣದ ತನಿಖೆಗೆ ತಡೆ ನೀಡಲು ಕೇರಳ ಹೈಕೋರ್ಟ್ ನಕಾರ
ಸರ್ಕಾರ ನಿರ್ಧಾರದ ವಿರುದ್ಧ ಹೋರಾಟ ಬೇರೆ. ಆದರೆ ನ್ಯಾಯಾಲಯದ ತೀರ್ಪಿಗೂ ಹೋರಾಟ ಮಾಡುತ್ತಾರೆ ಎಂದರೆ ಇದಕ್ಕೆ ಅಂತ್ಯ ಇಲ್ಲ. ಅರಾಜಕತೆ ಸೃಷ್ಟಿ ಆಗುತ್ತದೆ. ಇದಕ್ಕೆ ಯಾರೂ ಬೆಂಬಲ ಸೂಚಿಸಬಾರದು. ಸರ್ಕಾರ ಬಿಗಿ ಕ್ರಮ ಕೈಗೊಳ್ಳಬೇಕು. ಹೈಕೋರ್ಟ್ ತೀರ್ಪು ಪಾಲನೆ ಮಾಡಬೇಕು. ಪ್ರತಿಭಟನೆ, ಬಂದ್ ಸರಿಯಲ್ಲ. ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದರು.
ಶಾಂತಿಯುತ ಪ್ರತಿಭಟನೆ ಸಾಂವಿಧಾನಿಕ ಹಕ್ಕು- ಸಿದ್ಧರಾಮಯ್ಯ: ಈ ವೇಳೆ ಪ್ರತಿಭಟನಾಕಾರರ ಸಮರ್ಥನೆಗೆ ಮುಂದಾದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು, ಕೋರ್ಟ್ ತೀರ್ಪಿನ ಬಗ್ಗೆ ಅಸಮಾಧಾನ ಇದ್ದರೆ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ. ಅದರ ಜೊತೆಗೆ ಶಾಂತಿಯುತವಾಗಿ ಬಂದ್, ಪ್ರತಿಭಟನೆ ಮಾಡುವುದು ಅವರ ಸಂವಿಧಾನಾತ್ಮಕ ಹಕ್ಕು. ಅದನ್ನು ಸರ್ಕಾರ ಹೇಗೆ ತಡೆಯಲು ಸಾಧ್ಯ. ಬಂದ್, ಪ್ರತಿಭಟನೆ ಮಾಡಲು ಬಿಡಿ ಎಂದು ಹೇಳಿದರು.