ನೆಲಮಂಗಲ:ರಾಜ್ಯ ಹೆದ್ದಾರಿಗಳ ಬಳಿ ದರೋಡೆಗೆ ಹೊಂಚು ಹಾಕುತ್ತಿದ್ದ ದರೋಡೆಕೊರರನ್ನು ಬಂಧಿಸುವಲ್ಲಿ ನೆಲಮಂಗಲ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ.
ನೆಲಮಂಗಲ ತಾಲೂಕು ಮಲ್ಲರಬಾಣವಾಡಿಯಿಂದ ಸೊಂಡೇಕೊಪ್ಪ ಮುಖ್ಯ ರಸ್ತೆಯಲ್ಲಿ ಸಂಚಾರ ಮಾಡುವ ಜನರಿಗೆ ಮಾರಕಾಸ್ತ್ರಗಳನ್ನು ತೋರಿಸಿ ಬೆದರಿಕೆ ಹಾಕಿ ದರೋಡೆ ಮಾಡುತ್ತಿದ್ದರು. ಈ ಕುರಿತು ಸ್ಥಳೀಯರು ನೆಲಮಂಗಲ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು.
ದೂರನ್ನು ಆಧರಿಸಿ ಕಾರ್ಯಾಚರಣೆ ನಡೆಸಿದ ವೃತ್ತ ನಿರೀಕ್ಷಕ ಎ.ವಿ.ಕುಮಾರ್ ಹಾಗೂ ಎಸ್‌ಐ ಟಿ.ಹೆಚ್.ವಸಂತ್ ನೇತೃತ್ವದ ತಂಡ ನಾಲ್ಕು ಮಂದಿ ದರೋಡೆಕೋರರನ್ನು ಬಂಧಿಸಿದ್ದಾರೆ. ಒಬ್ಬ ಆರೋಪಿ ಪೊಲೀಸರಿಂದ ತಪ್ಪಿಸಿಕೊಂಡಿದ್ದಾನೆ.
ಗಿರೀಶ್ (23), ಬಿ.ಎಸ್ ಗೋವಿಂದರಾಜು (22), ಅನೂಪ್ ಮೋಹನ್ (23) ಹಾಗೂ ಹೆಚ್.ಪಿ.ಪುನೀತ್ ಕುಮಾರ್ ಬಂಧಿತ ಆರೋಪಿಗಳಾಗಿದ್ದು, ಮತ್ತೊಬ್ಬ ಆರೋಪಿ ರಘುಕುಮಾರ್(23) ಪರಾರಿಯಾಗಿದ್ದಾನೆ. ಬಂಧಿತರಿಂದ ಕೃತ್ಯಕ್ಕೆ ಬಳಸುತ್ತಿದ್ದ 6 ಬೈಕ್ಗಳು, 1 ಕಾರು, 7 ವಿವಿಧ ಬಗೆಯ ಮಾರಕಾಸ್ತ್ರಗಳು, ಖಾರದ ಪುಡಿ ಹಾಗೂ 4 ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಅಕ್ಟೋಬರ್ 19ರಂದು ರಾತ್ರಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಬೆಂಗಳೂರಿಗೆ ಸಂಚಾರ ಮಾಡುತ್ತಿದ್ದ ಕಾರಿನಲ್ಲಿದ್ದವರಿಗೆ ಮಾರಾಕಾಸ್ತ್ರಗಳನ್ನು ತೋರಿಸಿ 3 ಮೊಬೈಲ್ ಹಾಗೂ 11 ಸಾವಿರ ನಗದು ಕದ್ದು ಪರಾರಿಯಾಗಿದ್ದಾಗಿ ಪೊಲೀಸರು ನಡೆಸಿದ ವಿಚಾರಣೆ ವೇಳೆ ಆರೋಪಿಗಳು ಬಾಯ್ಬಿಟ್ಟಿದ್ದಾರೆ ಎನ್ನಲಾಗಿದೆ.
ಘಟನೆಯ ಪ್ರಮುಖ ಆರೋಪಿಗಳಾದ ಗಿರೀಶ್ ಮತ್ತು ಅನೂಪ್ ಈಗಾಗಲೇ ಕಳ್ಳತನ, ದರೋಡೆ, ಹಲ್ಲೆ ಸೇರಿದಂತೆ ಹಲವು ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಅವರ ಮೇಲೆ ಮಾದನಾಯಕನಹಳ್ಳಿ ಹಾಗೂ ಪೀಣ್ಯ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದು, ತನಿಖೆ ಮುಂದುವರೆದಿದೆ.