ಬೆಂಗಳೂರು: ಪರಿಸರ ಸಂರಕ್ಷಣೆ ಕಾಯ್ದೆ ರೂಪಿಸುವಾಗ ದೇಶದ ಸಂಸತ್ತು ವಿದೇಶಿ ಪ್ರಭಾವಕ್ಕೆ ಒಳಗಾಗಿತ್ತು ಎಂಬ ಹೇಳಿಕೆ ನೀಡಿದ್ದಕ್ಕಾಗಿ ದಂಡದ ರೂಪದಲ್ಲಿ ಪರಿಸರ ಮತ್ತು ವನ್ಯಜೀವಿಗಳಿಗಾಗಿ ಕೆಲಸ ಮಾಡುವ ಎರಡು ಸಂಸ್ಥೆಗಳಿಗೆ 5 ಲಕ್ಷ ರೂ. ದೇಣಿಗೆ ನೀಡಲಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹೈಕೋರ್ಟ್ಗೆ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಎನ್‌ಹೆಚ್‌ಎಐಗೆ ತನ್ನ ವಿವಾದಾತ್ಮಕ ಅಫಿಡವಿಟ್ ವಾಪಸ್ ಪಡೆಯಲು ಹೈಕೋರ್ಟ್ ಅನುಮತಿ ನೀಡಿದೆ.
ಪರಿಸರ ಪರಿಣಾಮ ಅಧ್ಯಯನ ನಿಯಮ ಬದಿಗಿಟ್ಟು ಕೆಲ ರಾಷ್ಟ್ರೀಯ ಹೆದ್ದಾರಿಗಳನ್ನು ವಿಸ್ತರಿಸಲು ಮುಂದಾಗಿರುವ ಹೆದ್ದಾರಿ ಪ್ರಾಧಿಕಾರದ ಕ್ರಮ ಪ್ರಶ್ನಿಸಿ ಯುನೈಟೆಡ್ ಕನ್ಸರ್ವೇಷನ್ ಟ್ರಸ್ಟ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮಂಗಳವಾರ ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಅರ್ಜಿ ವಿಚಾರಣೆ ವೇಳೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪರ ಹಿರಿಯ ವಕೀಲರು, ಡೆಹ್ರಾಡೂನ್‌ನ ಭಾರತೀಯ ಅರಣ್ಯ ಮತ್ತು ಶಿಕ್ಷಣ ಸಂಶೋಧನಾ ಪರಿಷತ್ತು ಮತ್ತು ವನ್ಯಜೀವಿ ಸಂಶೋಧನಾ ಸಂಸ್ಥೆಗೆ ತಲಾ 2.50 ಲಕ್ಷ ರೂ.ದೇಣಿಗೆ ನೀಡಲಾಗಿದೆ ಎಂದು ಪೀಠಕ್ಕೆ ತಿಳಿಸಿದರು. ಹೇಳಿಕೆ ದಾಖಲಿಸಿಕೊಂಡ ಪೀಠ, ಪ್ರಾಧಿಕಾರ ಸಲ್ಲಿಸಿದ್ದ ವಿವಾದಾತ್ಮಕ ಅಕ್ಷೇಪಣೆಯನ್ನು ಹಿಂಪಡೆಯಲು ಅನುಮತಿಸಿ, ಅರ್ಜಿ ವಿಚಾರಣೆ ಮುಂದೂಡಿತು.