ಬೆಂಗಳೂರು:ಶನಿವಾರ ಎಲ್ಲೆಡೆ ವೈಕುಂಠ ಏಕಾದಶಿಯನ್ನು ಅದ್ಧೂರಿಯಾಗಿ ಆಚರಿಸಲಾಗಿದ್ದು, ನಗರದ ದೇವಾಲಯಗಳಲ್ಲಿ ಹಬ್ಬದ ವಾತಾವರಣ ಮನೆ ಮಾಡಿತ್ತು.
ಮಲ್ಲೇಶ್ವರದ ಟಿಟಿಡಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತವಾಗಿಯೇ ದೇವಸ್ಥಾನದ ಸುತ್ತಲೂ ದಕ್ಷಿಣ ಶೈಲಿಯ ಚಪ್ಪರ ಹಾಕಿ ಹೂವಿನಿಂದ ಅಲಂಕಾರ ಮಾಡಲಾಗಿತ್ತು. ನಿನ್ನೆ ಬೆಳಗ್ಗೆ 6 ಗಂಟೆ ಸುಮಾರಿಗೆ ವಿಶೇಷ ಪೂಜೆ ಆರಂಭವಾಗಿ, ವೆಂಕಟೇಶ್ವರನಿಗೆ ಪಂಚಾಭಿಷೇಕ, ಪುಷ್ಪಾಭಿಷೇಕಗಳ ನಂತರ ವಿಶೇಷ ಅಲಂಕಾರ ಮಾಡಿ ಭಕ್ತಾದಿಗಳಿಗೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು.
ರಾಜಾಜಿನಗರದ ವೈಕುಂಠ ಮಹಾಕ್ಷೇತ್ರದಲ್ಲೂ ವೈಕುಂಠ ಏಕಾದಶಿಯನ್ನು ಆಚರಿಸಲಾಗಿದ್ದು, ದೇವಸ್ಥಾನಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ನೂಕುನುಗ್ಗಲಾಗದಂತೆ ದೇವಸ್ಥಾನದ ಸುತ್ತಲೂ ಬ್ಯಾರಿಕೇಟ್ ಅಳವಡಿಸಲಾಗಿತ್ತು. ಅಲ್ಲದೆ, ಹಲವು ದೇಗುಲಗಳಲ್ಲಿ ವೈಕುಂಠನಿಗೆ ಬೆಳಗ್ಗೆಯಿಂದ ಮಧ್ಯರಾತ್ರಿ 12 ಗಂಟೆಯವರೆಗೂ ವಿಶೇಷ ಪೂಜೆ, ಹೊಮ, ಹವನಗಳು ನೆರವೇರಿತು. ಮಧ್ಯರಾತ್ರಿಯವರೆಗೂ ಜನರಿಗೆ ದೇವಸ್ಥಾನಕ್ಕೆ ಬರಲು ದೇವಾಲಯ ಆಡಳಿತ ಮಂಡಳಿ ಅವಕಾಶ ಮಾಡಿಕೊಟ್ಟಿದ್ದರು. ವೈಕುಂಠ ಏಕಾದಶಿ ದಿನದಂದು ದೇವಸ್ಥಾನಕ್ಕೆ ಬಂದು ವೈಕುಂಠ ದರ್ಶನ ಮಾಡಿದರೆ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆ ಭಕ್ತರದ್ದು. ಆದ್ದರಿಂದ ವಿವಿಧ ದೇಗುಲಗಳಲ್ಲಿ ವೈಕುಂಠ ದ್ವಾರ ನಿರ್ಮಾಣ ಮಾಡಿ ಆರಾಧನೆ ನಡೆಸಲಾಗಿದೆ.
ಡಾ. ಎಂ.ಎಸ್.ಸುಬ್ಬುಲಕ್ಷ್ಮಿ ಅಳಿಯ, ಮಗಳು, ಮೊಮ್ಮಕ್ಕಳು ಡಾ. ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಮೊಮ್ಮಕ್ಕಳಿಂದ ಗೀತೆ ಗಾಯನ:ಭಕ್ತಿ ಸಂಗೀತದಲ್ಲಿ ಅದರಲ್ಲೂ ವಿಶೇಷವಾಗಿ ಸುಪ್ರಭಾತದಲ್ಲಿ ಬೆರಗು ಮೂಡಿಸಿದ್ದ ಭಾರತ ರತ್ನ ಡಾ. ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಮೊಮ್ಮಕ್ಕಳು ವೈಕುಂಠ ಏಕಾದಶಿ ಪ್ರಯುಕ್ತ ಸುಪ್ರಭಾತ ಗೀತೆಗಳನ್ನು ಹಾಡಿದರು. ಮೊಮ್ಮಕ್ಕಳಾದ ಎಸ್. ಐಶ್ವರ್ಯ ಮತ್ತು ಎಸ್. ಸೌಂದರ್ಯ ಸಹೋದರಿಯರು ಜೆಪಿ ನಗರದ ಎರಡನೇ ಹಂತದ ತಿರುಮಲಗಿರಿ ವೆಂಕಟೇಶ್ವರಸ್ವಾಮಿ ದೇವಾಲಯದಲ್ಲಿ ಸುಶ್ರಾವ್ಯವಾಗಿ ಹಾಡಿ ಭಕ್ತಾದಿಗಳು ಭಾವಪರವಶರಾಗುವಂತೆ ಮಾಡಿದರು.
ಇದೇ ಸಂದರ್ಭದಲ್ಲಿ ದೇವಾಲಯದ ಆವರಣದಲ್ಲಿ ಎ2 ಕ್ಲಾಸಿಕಲ್ ಮ್ಯೂಸಿಕ್ ಸಂಸ್ಥೆಯ ಸಂಸ್ಥಾಪಕ, ಚಿತ್ರನಿರ್ಮಾಪಕ, ಗೀತ ರಚನೆಕಾರ ಪಿ. ಕೃಷ್ಣಪ್ರಸಾದ್ ಅವರ ಸಂಸ್ಥೆಯ ಮಾಲೀಕತ್ವದ “ವೆಂಕಟೇಶ್ವರ ಸುಬ್ರಹ್ಮಣ್ಯ” ಭಕ್ತಿ ಸಂಗೀತದ ಸಿಡಿಯನ್ನು ಈ ಸಹೋದರಿಯರು ಬಿಡುಗಡೆ ಮಾಡಿದರು. ಎ2 ಕ್ಲಾಸಿಕಲ್ ಮ್ಯೂಸಿಕ್ ಸಂಸ್ಥೆ ಜೋಗಿ, ಪ್ರೀತಿ ಏಕೆ ಭೂಮಿ ಮೇಲಿದೆ ಸೇರಿದಂತೆ ಹಲವಾರು ಚಿತ್ರ ಗೀತೆಗಳಿಗೆ ಖ್ಯಾತಿ ಪಡೆದಿದೆ. ವೈಕುಂಠ ಏಕಾದಶಿಯನ್ನು ಸ್ಮರಣೀಯವಾಗಿಸಲು ಡಾ. ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಮೊಮ್ಮಕ್ಕಳ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿತ್ತು ಎಂದು ಪಿ. ಕೃಷ್ಣಪ್ರಸಾದ್ ತಿಳಿಸಿದರು.
ಇದನ್ನೂ ಓದಿ:ವೈಕುಂಠ ಏಕಾದಶಿ ಸಂಭ್ರಮ: ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ನಿವೃತ್ತ ಸಿಜೆಐ ರಮಣ, ರಾಜ್ಯಪಾಲ ಗೆಹ್ಲೋಟ್