ಬೆಂಗಳೂರು:ನಷ್ಟದಿಂದ ಲಾಭದ ಹಳಿಗೆ ಬರುತ್ತಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಅಕ್ಟೋಬರ್ 10 ರಂದು ಸಾರಿಗೆ ಸಂಸ್ಥೆ ಇತಿಹಾಸದಲ್ಲಿಯೇ ಅತ್ಯಧಿಕ ಆದಾಯ ಗಳಿಸಿದ ದಾಖಲೆ ಬರೆದಿದೆ. ಒಂದೇ ದಿನ 22.64 ಕೋಟಿ ಹಣವನ್ನು ಗಳಿಸಿದೆ.
ದಸರಾ ಹಬ್ಬದ ಹಿನ್ನೆಲೆ ತಮ್ಮ-ತಮ್ಮ ಸ್ವಗ್ರಾಮಕ್ಕೆ ತೆರಳಿದ್ದ ಜನರು ರಜೆ ಮುಗಿಸಿ ವಾಪಸ್ ಬರಲು ಅಕ್ಟೋಬರ್ 10 ರಂದು ಮುಗಿಬಿದ್ದಿದ್ದರು. ಆ ದಿನ ಪ್ರಯಾಣಿಕರ ಸಂಖ್ಯೆಯೂ ಹೆಚ್ಚಾಗಿದ್ದು, ವಿಶೇಷ ಬಸ್ಗಳ ಕಾರ್ಯಾಚರಣೆ ನಡೆಸಲಾಗಿತ್ತು. ಪ್ರತಿ ಬಾರಿಯೂ ಹಬ್ಬ, ಸರಣಿ ರಜೆ ಇದ್ದಾಗಲೂ ಪ್ರಯಾಣಿಕರ ದಟ್ಟಣೆ ಇದ್ದೇ ಇರುತ್ತದೆ. ಆದರೆ ಈ ಬಾರಿ ಮಾತ್ರ ಸಾರಿಗೆ ಸಂಸ್ಥೆ ದಿನವೊಂದರ ಆದಾಯ ಸಂಗ್ರಹದಲ್ಲಿ ದಾಖಲೆ ಬರೆದಿದ್ದು, ರೂ. 22.64 ಕೋಟಿಗಳನ್ನು ದಾಖಲಿಸಿದೆ.
ಕೋವಿಡ್ ಕಾರಣದಿಂದಾಗಿ ಸಂಸ್ಥೆಯು ಕಳೆದೆರಡು ವರುಷಗಳಿಂದ ಯಾವುದೇ ಹೊಸ ಬಸ್ಗಳನ್ನು ಸೇರ್ಪಡೆಗೊಳಿಸಿರುವುದಿಲ್ಲ ಹಾಗೂ ನಿವೃತ್ತಿ/ ವರ್ಗಾವಣೆ ಗೊಂಡ ಸಿಬ್ಬಂದಿಗಳಿಗೆ ಬದಲಾಗಿ ಹೊಸ ನೇಮಕಾತಿಯನ್ನು ಮಾಡಿರುವುದಿಲ್ಲ. ಆದಾಗ್ಯೂ ಸಮಸ್ತ ಸಿಬ್ಬಂದಿಯ ಪರಿಶ್ರಮ ದಕ್ಷತೆಯಿಂದ ಇಂದು ದಾಖಲೆಯ ಆದಾಯವನ್ನು ಗಳಿಸಿದೆ ಎಂದು ಕೆಎಸ್‌ಆರ್‌ಟಿಸಿ ಅಧ್ಯಕ್ಷ ಎಂ. ಚಂದ್ರಪ್ಪ ಮತ್ತು ಎಂಡಿ ವಿ.ಅನ್ಬುಕುಮಾರ್ ಸಮಸ್ತ ಸಿಬ್ಬಂದಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಸಾರ್ವಜನಿಕ ಪ್ರಯಾಣಿಕರ ಅಗತ್ಯಗಳಿಗೆ ಸ್ಪಂದಿಸುವಲ್ಲಿ ಸಂಸ್ಥೆ ಸದಾ ಕಾರ್ಯ ನಿರತವಾಗಿದ್ದು, ಜನರ ಜೀವನಾಡಿ ಎಂಬುದು ಮತ್ತೊಮ್ಮೆ ಸಾಬೀತಾಗಿದೆ ಎಂದು ಪತ್ರಿಕಾ ಹೇಳಿಕೆ ಮೂಲಕ ತಿಳಿಸಿದ್ದಾರೆ.
ಓದಿ:ಸಿಲಿಕಾನ್ ಸಿಟಿಯಲ್ಲಿ ತಲೆ ಎತ್ತಲಿದೆ ಬಿಲ್ಲಿಂಗ್ ಕೌಂಟರ್ ಲೆಸ್ ಡಯಾಲಿಸಿಸ್ ಕೇಂದ್ರ