ಬೆಂಗಳೂರು: ಮ್ಯಾನೇಜ್ಮೆಂಟ್ ಕೋಟಾದ ಎಂಜಿನಿಯರಿಂಗ್ ಪ್ರವೇಶಕ್ಕೆ ಎಲ್ಲ ವಿವಿಗಳೂ ಒಪ್ಪುವುದಾದರೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದಲೇ ರಾಷ್ಟ್ರಮಟ್ಟದಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ನಡೆಸಲು ಸರ್ಕಾರ ಸಿದ್ಧ ಇದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ ತಿಳಿಸಿದರು.
ವಿಕಾಸಸೌಧದಲ್ಲಿ ನಡೆದ ಎಂಜಿನಿಯರಿಂಗ್ ಕಾಲೇಜುಗಳನ್ನು ಹೊಂದಿರುವ ರಾಜ್ಯದ ಎಲ್ಲ ಖಾಸಗಿ ವಿಶ್ವವಿದ್ಯಾಲಯಗಳ ಕುಲಪತಿಗಳು, ಕುಲಾಧಿಪತಿಗಳು ಮತ್ತು ರಿಜಿಸ್ಟ್ರಾರ್ಗಳ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದ ಎಲ್ಲ ಖಾಸಗಿ ವಿಶ್ವವಿದ್ಯಾಲಯಗಳು, ತಮ್ಮ ಮ್ಯಾನೇಜ್ಮೆಂಟ್ ಕೋಟಾದ ಎಂಜಿನಿಯರಿಂಗ್ ಸೀಟುಗಳ ಭರ್ತಿಗೆ ಸದ್ಯ ಪ್ರತ್ಯೇಕವಾದಂತಹ ಪ್ರವೇಶ ಪರೀಕ್ಷೆಗಳನ್ನು ನಡೆಸುತ್ತಿದ್ದು, ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆ ಆಗಿದೆ ಎಂದರು.
ಸರ್ಕಾರಿ ಕೋಟಾದ ಎಂಜಿನಿಯರಿಂಗ್ ಸೀಟುಗಳನ್ನು ಸಿಇಟಿ ರ್ಯಾಂಕ್ ಮೇಲೆ ಖಾಸಗಿ ವಿವಿಗಳು ಭರ್ತಿ ಮಾಡಿಕೊಳ್ಳುತ್ತಿವೆ. ಆದರೆ, ಶೇ 60ರಷ್ಟು ಮ್ಯಾನೇಜ್ಮೆಂಟ್ ಸೀಟುಗಳನ್ನು ತಮ್ಮದೇ ಪ್ರತ್ಯೇಕ ಸಿಇಟಿ ಮೂಲಕ ವಿವಿಗಳು ಭರ್ತಿ ಮಾಡಿಕೊಳ್ಳುತ್ತಿವೆ. ಈ ರೀತಿ ಪ್ರತ್ಯೇಕ ಸಿಇಟಿಗಳಿಂದ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತದೆ. ಇದರ ಜತೆಗೆ ಒಂದೇ ಸಿಇಟಿ ಮಾಡಿ ಎನ್ನುವ ಅಭಿಪ್ರಾಯವನ್ನು ಸುಪ್ರೀಂಕೋರ್ಟ್ ಕೂಡ ವ್ಯಕ್ತಪಡಿಸಿದೆ. ಹೀಗಾಗಿ ನೀವೇ ಬೇಕಾದರೆ ಎಲ್ಲ ವಿವಿಗಳು ಸೇರಿಕೊಂಡು ಪ್ರತ್ಯೇಕ ಸಿಇಟಿ ಮಾಡಿಕೊಳ್ಳಿ ಎಂದು ಸಚಿವರು ಸಲಹೆ ನೀಡಿದರು.
ಸಭೆಯಲ್ಲಿ ಭಾಗವಹಿಸಿದ್ದ ಪಿಇಎಸ್ ವಿಶ್ವವಿದ್ಯಾಲಯದ ಕುಲಾಧಿಪತಿ ಪ್ರೊ.ಜವಾಹರ, ಕೆಇಎ ಅವರು ರಾಷ್ಟ್ರಮಟ್ಟದ ಪರೀಕ್ಷೆ ನಡೆಸದ ಕಾರಣಕ್ಕೆ ನಾವು ನಮ್ಮದೇ ಆದಂತಹ ಪ್ರತ್ಯೇಕ ವ್ಯವಸ್ಥೆ ಮಾಡಿಕೊಂಡಿದ್ದೇವೆ. ಈಗ ಕೆಇಎಯಿಂದಲೇ ರಾಷ್ಟ್ರ ಮಟ್ಟದಲ್ಲಿ ಒಂದೇ ಸಿಇಟಿ ಮಾಡುವುದಾದರೆ ನಮ್ಮದೇನೂ ಅಭ್ಯಂತರ ಇಲ್ಲ ಎಂದರು. ಆಗ ಸಚಿವರು ಕೂಡ ಅದಕ್ಕೆ ಒಪ್ಪಿಗೆ ಸೂಚಿಸಿದರು. ಆದರೆ, ಈ ಬಗ್ಗೆ ಎಲ್ಲ ವಿಶ್ವವಿದ್ಯಾಲಯಗಳು ಒಂದೇ ವೇದಿಕೆಯಲ್ಲಿ ಸೇರಿ ಸಮಾಲೋಚನೆ ಮಾಡಿ ಸೂಕ್ತ ನಿರ್ಧಾರಕ್ಕೆ ಬಂದರೆ ಸೂಕ್ತ ಎನ್ನುವ ಸಲಹೆಯನ್ನು ಸಚಿವರು ನೀಡಿದರು.