ಬೆಂಗಳೂರು: ಪ್ರಕರಣದಲ್ಲಿ ಸೋತೆವು ಎಂದು ತನ್ನದೇ ವಿಶ್ವವಿದ್ಯಾಲಯ ವಕೀಲರ ಸಮಿತಿಯಲ್ಲಿದ್ದ ವಕೀಲರ ವಿರುದ್ಧ ವಂಚನೆಯ ಕ್ರಿಮಿನಲ್ ಮೊಕದ್ದಮೆ ಹೂಡಿದ್ದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (ಆರ್‌ಜಿಯುಹೆಚ್‌ಎಸ್) ಮತ್ತು ಅದರ ರಿಜಿಸ್ಟ್ರಾರ್ ಕ್ರಮಕ್ಕೆ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಜೊತೆಗೆ, ಆ ವಕೀಲರೊಬ್ಬರ ವಿರುದ್ಧ ಹೂಡಿದ್ದ ಕ್ರಿಮಿನಲ್ ಪ್ರಕರಣ ರದ್ದುಗೊಳಿಸಿದೆ.
ಧಾರವಾಡದಲ್ಲಿ ಕಳೆದ 15 ವರ್ಷಗಳಿಂದ ಆರ್‌ಜಿಯುಹೆಚ್‌ಎಸ್ ಪರ ವಾದ ಮಂಡಿಸುತ್ತಿದ್ದ ವಕೀಲ ಶಿವಕುಮಾರ ಎಸ್.ಬಾಡವಾಡಗಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ, ಅರ್ಜಿದಾರರ ವಿರುದ್ಧ ವಿವಿ ಹೂಡಿದ್ದ ಎಫ್‌ಐಆರ್ ರದ್ದು ಮಾಡಿದೆ. ಅಲ್ಲದೆ, ಇಂತಹ ಅಜಾಗರೂಕ ದೂರು ದಾಖಲಿಸುವಾಗ ಎಚ್ಚರಿಕೆ ವಹಿಸುವಂತೆ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ ಮತ್ತು ಅದರ ರಿಜಿಸ್ಟ್ರಾರ್ ಎ.ಆರ್.ರವಿಕುಮಾರ್‌ಗೆ ನಿರ್ದೇಶನ ನೀಡಿದೆ. ಅಂತಹ ಯಾವುದೇ ಕ್ರಮ ಪುನರಾವರ್ತನೆ ಆದರೆ ಅದನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ ಎಂದೂ ನ್ಯಾಯಪೀಠ ಎಚ್ಚರಿಕೆಯನ್ನೂ ನೀಡಿದೆ.
ವಾದ-ಪ್ರತಿವಾದ ಆಲಿಸಿದ ಬಳಿಕ ಪ್ರಕರಣದ ದಾಖಲೆಗಳನ್ನು ಪರಿಶೀಲಿಸಿ ನ್ಯಾಯಪೀಠ, ವ್ಯಾಜ್ಯದಲ್ಲಿ ಸೋಲುಂಟಾದ ಮಾತ್ರಕ್ಕೆ ಕಕ್ಷಿದಾರರೊಂದಿಗೆ ವಕೀಲರು ಶಾಮೀಲಾಗಿದ್ದಾರೆ ಮತ್ತು ಅವರನ್ನು ಪ್ರತಿನಿಧಿಸುತ್ತಿದ್ದಾರೆ ಎಂದು ಆರೋಪ ಮಾಡುವುದು ಸರಿಯಲ್ಲ. ಅಂತಹ ಅಧಿಕಾರವು ವಿವಿಗೆ ಇಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.