ಕರ್ನಾಟಕ

karnataka

ETV Bharat / state

ಬಿಎಸ್​ವೈ ಸರ್ಕಾರದ ವಿರುದ್ಧ ಹೈಕೋರ್ಟ್ ಗರಂ: ಕಾರಣ? - "ಮುಖ್ಯಮಂತ್ರಿ ನವ ಬೆಂಗಳೂರು ಯೋಜನೆ" ಲೇಟೆಸ್ಟ್​​ ನ್ಯೂಸ್​

"ಮುಖ್ಯಮಂತ್ರಿ ನವ ಬೆಂಗಳೂರು ಯೋಜನೆ" ಅಭಿವೃದ್ಧಿ ಕಾಮಗಾರಿಗಳಿಗೆ ತಡೆ ನೀಡಿರುವ ರಾಜ್ಯ ಸರ್ಕಾರದ ಕ್ರಮದ ವಿರುದ್ಧ ಹೈಕೋರ್ಟ್ ಗರಂ ಆಗಿದೆ.

highcourt outrage on cm bs yadiyurappa
ಸರ್ಕಾರದ ವಿರುದ್ಧ ಹೈಕೋರ್ಟ್ ಆಕ್ರೋಶ

By

Published : Jan 28, 2020, 4:21 PM IST

ಬೆಂಗಳೂರು: ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಟಿಪ್ಪಣಿ ಆಧರಿಸಿ ಹಿಂದಿನ ಮೈತ್ರಿ ಸರ್ಕಾರ ಘೋಷಿಸಿದ್ದ ಎಂಟು ಸಾವಿರ ಮೊತ್ತದ "ಮುಖ್ಯಮಂತ್ರಿ ನವ ಬೆಂಗಳೂರು ಯೋಜನೆ" ಅಭಿವೃದ್ಧಿ ಕಾಮಗಾರಿಗಳಿಗೆ ತಡೆ ನೀಡಿರುವ ಸರ್ಕಾರದ ಕ್ರಮದ ವಿರುದ್ಧ ಹೈಕೋರ್ಟ್ ಗರಂ ಆಗಿದೆ.

ನಗರಾಭಿವೃದ್ಧಿ ಕಾಮಗಾರಿಗಳ ಟೆಂಡರ್​​ಗಳಿಗೆ ತಡೆ ನೀಡಿರುವ ಸರ್ಕಾರದ ಕ್ರಮ ಪ್ರಶ್ನಿಸಿ ಕೆರೆ ಅಭಿವೃದ್ಧಿ ಟ್ರಸ್ಟ್​​ಗಳು ದಾಖಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಅರ್ಜಿದಾರರ ಪರ ವಾದಿಸಿದ ಹಿರಿಯ ವಕೀಲ ಪೊನ್ನಣ್ಣ ಅವರು, ಬಿಬಿಎಂಪಿ ಮನವಿ ಹಾಗೂ ಸಚಿವ ಸಂಪುಟದ ನಿರ್ಧಾರದ ಬಳಿಕವೇ ಅಭಿವೃದ್ಧಿ ಕಾಮಗಾರಿಗಳ ಟೆಂಡರ್ ಕರೆಯಲಾಗಿತ್ತು. ಆದ್ರೆ ಸಿಎಂ ಇದೀಗ ಕಾಮಗಾರಿಗಳಿಗೆ ಕಾನೂನು ಬಾಹಿರವಾಗಿ ತಡೆ ನೀಡಿದ್ದಾರೆ ಎಂದು ಆರೋಪಿಸಿದರು.

ವಿವರಣೆ ಆಲಿಸಿದ ಪೀಠ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ಮುಖ್ಯಮಂತ್ರಿ ಯಾವ ಅಧಿಕಾರ ಬಳಸಿ ಈ ಆದೇಶ ಹೊರಡಿಸಿದ್ದಾರೆ? ಟಿಪ್ಪಣಿ ಬರೆದು ಎಲ್ಲಾ ಕಾಮಗಾರಿಗಳನ್ನು ನಿಲ್ಲಿಸುವುದು ಸರಿಯೇ? ಬಿಬಿಎಂಪಿಗೆ ನಿರ್ದೇಶನ ನೀಡುವ ಅಧಿಕಾರ ಸರ್ಕಾರಕ್ಕೆ ಇರಬಹುದು. ಆದರೆ,‌‌ ಇದು ಸರಿಯಾದ ವಿಧಾನ ಅಲ್ಲ. ಕಾಮಗಾರಿ ವಿಳಂಬದಿಂದ ಕಾಮಗಾರಿ ವೆಚ್ಚ ಹೆಚ್ಚಾದರೆ ಅದಕ್ಕೆ ಹೊಣೆ ಯಾರು? ಹಿಂದಿನ ಸರ್ಕಾರದ ಯೋಜನೆಗಳನ್ನು ಹೊಸ ಸಿಎಂ ಅಧಿಕಾರಕ್ಕೆ ಬಂದ ತಕ್ಷಣ ಹೀಗೆ ತಡೆಹಿಡಿಯಬಹುದೇ? ಯಾವ ಕಾನೂನಿನಡಿ ಸಿಎಂ ಈ‌ ಆದೇಶ ಮಾಡಿದ್ದಾರೆ? ಎಂದು ಖಾರವಾಗಿ‌ ಪ್ರಶ್ನಿಸಿದ ಪೀಠ, ಸರ್ಕಾರ ಈ ಕುರಿತು ಸೂಕ್ತ ವಿವರಣೆ ನೀಡಬೇಕು. ಇಲ್ಲವೇ ಆದೇಶವನ್ನು ಹಿಂಪಡೆಯಬೇಕು ಎಂದು ತಾಕೀತು ಮಾಡಿತು.

ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ "ಮುಖ್ಯಮಂತ್ರಿ ನವ ಬೆಂಗಳೂರು ಯೋಜನೆ" ಅಡಿ ಬಿಬಿಎಂಪಿ ವ್ಯಾಪ್ತಿಯಲ್ಲಿ ನಗರಾಭಿವೃದ್ಧಿ ಇಲಾಖೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಇರುವ 88 ಕೆರೆಗಳ ಅಭಿವೃದ್ಧಿ, ಪಾದಚಾರಿ ಮಾರ್ಗ ನವೀಕರಣ, ರಾಜಕಾಲುವೆ ನಿರ್ಮಾಣ ಸೇರಿದಂತೆ ಹಲವು ಮೂಲ ಸೌಕರ್ಯ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿತ್ತು. ಆದ್ರೆ ಸಿಎಂ ಆಗಿ ಯಡಿಯೂರಪ್ಪ ಅಧಿಕಾರ ವಹಿಸಿಕೊಂಡ ಬಳಿಕ, ಬಿಬಿಎಂಪಿ ವ್ಯಾಪ್ತಿಯಲ್ಲಿ ಕೈಗೊಳ್ಳಲು ಉದ್ದೇಶಿಸಿದ್ದ ಕಾಮಗಾರಿಗಳ ಟೆಂಡರ್​​​​ಗಳಿಗೆ ಜಾಬ್​​​ಕೋಡ್ ನೀಡಲು ನಗರಾಭಿವೃದ್ಧಿ ಇಲಾಖೆ ನಿರಾಕರಿಸಿದೆ‌. ಯಡಿಯೂರಪ್ಪ ನೀಡಿದ ಟಿಪ್ಪಣಿ ಆಧರಿಸಿ ನಗರಾಭಿವೃದ್ಧಿ ಇಲಾಖೆ ಅಧೀನ ಕಾರ್ಯದರ್ಶಿ ಕಾಮಗಾರಿಗಳಿಗೆ ತಡೆ ನೀಡಿದ್ದಾರೆ. ಸಿಎಂ ಆಗಿ ಬಿಎಸ್​​ವೈ ಅಧಿಕಾರ ವಹಿಸಿಕೊಂಡ ವೇಳೆ ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದು ಹೇಳಿದ್ದರು. ಆದರೆ ಇದೀಗ ಅಭಿವೃದ್ಧಿ ಕಾಮಗಾರಿಗಳಿಗೆ ತಡೆ ನೀಡಿರುವ ಪ್ರಕರಣ ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ.

ABOUT THE AUTHOR

...view details