ಬೆಂಗಳೂರು: ದಾವಣಗೆರೆ ಮೇಯರ್, ಉಪಮೇಯರ್ ಹಾಗೂ 4 ಸ್ಥಾಯಿ ಸಮಿತಿ ಸದಸ್ಯ ಸ್ಥಾನಗಳ ಆಯ್ಕೆ ಚುನಾವಣೆಯಲ್ಲಿ ಮತದಾನ ಮಾಡದಂತೆ ಸಚಿವ ಆರ್. ಶಂಕರ್ ಹಾಗೂ ಎಂಎಲ್ಸಿ ಎಂ. ಚಿದಾನಂದ ಅವರನ್ನು ನಿರ್ಬಂಧಿಸಬೇಕು ಎಂದು ಕೋರಿ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ. ಇದರಿಂದಾಗಿ ಇದೇ ಫೆ. 24ರಂದು ನಡೆಯಲಿರುವ ದಾವಣೆಗೆರೆ ಮೇಯರ್ ಚುನಾವಣೆಯಲ್ಲಿ ಸಚಿವ ಆರ್. ಶಂಕರ್ ಹಾಗೂ ಎಂಎಲ್ಸಿ ಎಂ. ಚಿದಾನಂದ ಅವರು ಮತದಾನ ಮಾಡಬಹುದಾಗಿದೆ.
ಆರ್. ಶಂಕರ್ ಹಾಗೂ ಎಂ. ಚಿದಾನಂದ ಅವರ ಹೆಸರನ್ನು ಅಕ್ರಮವಾಗಿ ದಾವಣೆಗೆರೆ ಮತದಾರರ ಪಟ್ಟಿಯಲ್ಲಿ ಸೇರಿಸಿದ್ದು, ಅವರನ್ನು ಪಟ್ಟಿಯಿಂದ ಕೈಬಿಡುವಂತೆ ನಿರ್ದೇಶಿಸಿಬೇಕು ಹಾಗೂ ಮತದಾನಕ್ಕೆ ಅವಕಾಶ ನೀಡಬಾರದು ಎಂದು ಕೋರಿ ಪಾಲಿಕೆಯ ಕಾಂಗ್ರೆಸ್ ಸದಸ್ಯ ದೇವರಮನಿ ಶಿವಕುಮಾರ್ ಹಾಗೂ ಇತರರು ಸಲ್ಲಿಸಿದ್ದ ಅರ್ಜಿಯನ್ನು ಇಂದು ನ್ಯಾ. ಎಸ್.ಜಿ. ಪಂಡಿತ್ ಅವರಿದ್ದ ಪೀಠ ವಿಚಾರಣೆ ನಡೆಸಿತು. ಕೆಲ ಕಾಲ ವಾದ-ಪ್ರತಿವಾದ ಆಲಿಸಿದ ಪೀಠ, ಈಗಾಗಲೇ ಚುನಾವಣಾ ಪ್ರಕ್ರಿಯೆ ಆರಂಭವಾಗಿದೆ ಹಾಗೂ ಮತದಾರರ ಪಟ್ಟಿಯಲ್ಲಿ ಶಂಕರ್ ಹಾಗೂ ಚಿದಾನಂದ ಅವರ ಹೆಸರಿದೆ. ಈ ಹಂತದಲ್ಲಿ ಅವರಿಬ್ಬರನ್ನು ಮತದಾನ ಮಾಡದಂತೆ ಕೋರಿ ಸಲ್ಲಿಸಿರುವ ಮಧ್ಯಂತರ ಅರ್ಜಿಯನ್ನು ಪುರಸ್ಕರಿಸಲಾಗದು ಎಂದು ತಿಳಿಸಿ ಅರ್ಜಿ ವಜಾಗೊಳಿಸಿತು.
ಈ ಸುದ್ದಿಯನ್ನೂ ಓದಿ:ಬೆಣ್ಣೆನಗರಿ ಪಾಲಿಕೆ ಗದ್ದುಗೆಗೆ ಗುದ್ದಾಟ.. ತಂತ್ರ ಪ್ರತಿತಂತ್ರ ಹೆಣೆಯುತ್ತಿವೆ ಪಕ್ಷಗಳು