ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ರಾಜಕೀಯ, ಕಾನೂನು, ಆರ್ಥಿಕ ಕಾರ್ಯದರ್ಶಿ ಮತ್ತು ಮಾಧ್ಯಮ ಸಲಹೆಗಾರ ಹುದ್ದೆಗಳಿಗೆ ಶಾಸಕರು ಹಾಗೂ ಪತ್ರಕರ್ತರನ್ನು ನೇಮಕ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಮಾಡಿದೆ.
ಈ ಕುರಿತು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್. ಹಿರೇಮಠ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಕೆಲಕಾಲ ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ಪೀಠ, ಪ್ರತಿವಾದಿಗಳಾದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಕಾರ್ಯದರ್ಶಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಎಂ.ಪಿ. ರೇಣುಕಾಚಾರ್ಯ, ಶಂಕರ್ಗೌಡ ಐ. ಪಾಟೀಲ್, ಮಾಧ್ಯಮ ಸಂಚಾಲಕ ಜಿ.ಎಸ್. ಸುನಿಲ್, ಮಾಧ್ಯಮ ಸಲಹೆಗಾರ (ಐಟಿ, ಇ-ಆಡಳಿತ) ಬೇಳೂರು ಸುದರ್ಶನ್, ಆರ್ಥಿಕ ಸಲಹೆಗಾರರ ಲಕ್ಷ್ಮಿ ನಾರಾಯಣ, ಕಾನೂನು ಸಲಹೆಗಾರ ಮೋಹನ್ ಲಿಂಬಿಕಾಯಿ, ಮಾಜಿ ರಾಜಕೀಯ ಕಾರ್ಯದರ್ಶಿ ಎಂ.ಬಿ. ಮರಮಕಲ್ ಮತ್ತು ಮಾಜಿ ಮಾಧ್ಯಮ ಸಲಹೆಗಾರ ಮಹದೇವ ಪ್ರಕಾಶ್‌ಗೆ ನೋಟಿಸ್ ಜಾರಿ ಮಾಡಿತು.
ಅರ್ಜಿದಾರರ ಆರೋಪ: ಸರ್ಕಾರ ರಚನೆಗೆ ಸಹಕರಿಸಿರುವ ಬೆಂಬಲಿಗರನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಮ್ಮ ರಾಜಕೀಯ ಮತ್ತು ಮಾಧ್ಯಮ ಸಲಹೆಗಾರರು, ಕಾರ್ಯದರ್ಶಿಗಳ ಸೇರಿ ವಿವಿಧ ಹುದ್ದೆಗಳಿಗೆ ನೇಮಕ ಮಾಡಿ, ಸಂಪುಟ ದರ್ಜೆ ಸ್ಥಾನಮಾನ ನೀಡಿದ್ದಾರೆ. ಜತೆಗೆ, ಸರ್ಕಾರದಿಂದ ವೇತನ ಹಾಗೂ ಭತ್ಯೆ ನೀಡಲಾಗುತ್ತಿದೆ. ಈ ರೀತಿ ನೇಮಕ ಮಾಡಿಕೊಳ್ಳಲು ಸಂವಿಧಾನ ಮತ್ತು ಯಾವುದೇ ಕಾನೂನಿನಲ್ಲಿ ಅವಕಾಶವಿಲ್ಲ. ಇದು ಸಂವಿಧಾನ ಬಾಹಿರ ಕ್ರಮ ಎಂದು ಅರ್ಜಿದಾರರು ದೂರಿದ್ದಾರೆ.
ಸರ್ಕಾರದ ಆಡಳಿತದಲ್ಲಿ ರಾಜಕೀಯ, ಕಾನೂನು, ಆರ್ಥಿಕ ಕಾರ್ಯದರ್ಶಿ ಹಾಗೂ ಮಾಧ್ಯಮ ಸಲಹೆಗಾರರ ಪಾತ್ರವೇನು ಇರುವುದಿಲ್ಲ. ಇದು ಕೇವಲ ಹೈಬ್ರಿಡ್ ಹುದ್ದೆಗಳಾಗಿದ್ದು, ಅವುಗಳನ್ನು ಸೃಷ್ಟಿಸಲು ಸರ್ಕಾರಕ್ಕೆ ಶಾಸನಬದ್ಧ ಅಧಿಕಾರ ಇಲ್ಲ. ಪ್ರತಿವಾದಿಗಳ ನೇಮಕ ಆದೇಶದಲ್ಲಿ ಮುಖ್ಯಮಂತ್ರಿಗಳ ಸಲಹೆಗಾರರು ಎಂಬ ಅಂಶ ಬಿಟ್ಟರೆ, ಆ ಹುದ್ದೆಗಳಿಗೆ ವಹಿಸಿರುವ ಕರ್ತವ್ಯ ಮತ್ತು ಜವಾಬ್ದಾರಿಗಳೇನು ಎಂಬುದನ್ನು ತಿಳಿಸಿಲ್ಲ. ಮತ್ತೊಂದೆಡೆ ವೇತನ ಹಾಗೂ ಭತ್ಯೆ ಪಾವತಿಯಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗುತ್ತಿದೆ. ಆದ್ದರಿಂದ ಪ್ರತಿವಾದಿಗಳ ನೇಮಕ ಆದೇಶಗಳನ್ನು ಸಂವಿಧಾನ ಬಾಹಿರ ಮತ್ತು ಏಕಪಕ್ಷೀಯ ನಿರ್ಧಾರ ಎಂದು ಘೋಷಿಸಬೇಕು. ನೇಮಕಾತಿ ಆದೇಶಗಳನ್ನು ರದ್ದುಪಡಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.