ಬೆಂಗಳೂರು:ಬೋಧಕ ಸಿಬ್ಬಂದಿಯನ್ನು ಸಚಿವರು ಹಾಗೂ ಶಾಸಕರ ಶಿಫಾರಸಿನ ಮೇರೆಗೆ ವಿವಿಧ ಇಲಾಖೆಗಳ ಕಾಯರ್ಕಾರಿ ಹಾಗೂ ಆಡಳಿತಾತ್ಮಕ ಹುದ್ದೆಗಳಿಗೆ ನಿಯೋಜಿಸುತ್ತಿರುವುದನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಈ ಕುರಿತು ಮಾಹಿತಿ ಹಕ್ಕು ಕಾರ್ಯಕರ್ತ ಕೆ.ಸಿ. ರಾಜಣ್ಣ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ. ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಕೆಲ ಕಾಲ ಅರ್ಜಿದಾರರ ಪರ ವಕೀಲ ಎಸ್. ಉಮಾಪತಿ ಅವರ ವಾದ ಆಲಿಸಿದ ಪೀಠ, ಪ್ರತಿವಾದಿಗಳಾದ ಸಮಾಜ ಕಲ್ಯಾಣ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಆಯುಕ್ತರು, ಹಿಂದುಳಿದ ವರ್ಗಗಳ ಇಲಾಖೆ ಕಾರ್ಯದರ್ಶಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ, ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರು ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಿಗೆ ನೋಟಿಸ್ ಜಾರಿ ಮಾಡಿ, ವಿಚಾರಣೆ ಮುಂದೂಡಿತು.
ಅರ್ಜಿದಾರರ ಕೋರಿಕೆ: ಶಿಕ್ಷಕರನ್ನು ಎರವಲು ಸೇವೆ ಮೇಲೆ ಸರ್ಕಾರದ ಇತರೆ ಇಲಾಖೆಗಳಿಗೆ ಕಳುಹಿಸಲಾಗುತ್ತದೆ. ನಂತರ ಯಾವುದೇ ನಿಯಮಗಳು ಇಲ್ಲದೇ ಹೋದರೂ ಕೇವಲ ಸಚಿವರು ಹಾಗೂ ಶಾಸಕರ ಶಿಫಾರಸು ಆಧರಿಸಿ ಅದೇ ಇಲಾಖೆ ಕಾಯರ್ಕಾರಿ ಹಾಗೂ ಆಡಳಿತಾತ್ಮಕ ಹುದ್ದೆಗಳಿಗೆ ನಿಯೋಜಿಸಲಾಗುತ್ತಿದೆ. ಅನೇಕ ಶಿಕ್ಷಕರು ಹಾಗೂ ಇತರ ಬೋಧಕ ವರ್ಗದವರು, ಸಮಾಜ ಕಲ್ಯಾಣ ಇಲಾಖೆಯಲ್ಲಿ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ, ಸಹಾಯಕ ನಿರ್ದೇಶಕರು ಮತ್ತು ತಾಲೂಕು ಅಧಿಕಾರಿಗಳಾಗಿದ್ದಾರೆ. ಆ ಹುದ್ದೆಗಳಿಗೂ ಶಿಕ್ಷಕರಿಗೂ ಯಾವುದೇ ಸಂಬಂಧ ಇಲ್ಲ. ಇದರಿಂದ ಶಾಲಾ ಮತ್ತು ಕಾಲೇಜುಗಳಲ್ಲಿ ಬೋಧಕ ಸಿಬ್ಬಂದಿ ಪ್ರಮಾಣ ಕಡಿಮೆಯಾಗುತ್ತಿದೆ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.
ಅಲ್ಲದೆ, ಎಲ್ಲ ಬೋಧಕ ಸಿಬ್ಬಂದಿಗೆ ನೀಡಲಾಗಿರುವ ಕಾರ್ಯಕಾರಿ ಮತ್ತು ಆಡಳಿತ ಹುದ್ದೆಗಳನ್ನು ಹಿಂಪಡೆದು, ಶಾಲಾ ಮತ್ತು ಕಾಲೇಜುಗಳಿಗೆ ವಾಪಸ್ ಕರೆಸಿಕೊಳ್ಳಬೇಕು. ವಿವಿಧ ಇಲಾಖೆಗಳ ಕಾರ್ಯಕಾರಿ ಮತ್ತು ಆಡಳಿತ ಹುದ್ದೆಗಳಿಗೆ ಶಿಕ್ಷಕರನ್ನು ವರ್ಗಾವಣೆ ಮಾಡಿರುವ ಆದೇಶ ರದ್ದುಪಡಿಸಬೇಕು. ಭವಿಷ್ಯದಲ್ಲಿ ವರ್ಗಾವಣೆ ಅಥವಾ ಎರವಲು ಸೇವೆ ಮೇಲೆ ಬೋಧಕೇತರ ಉದ್ದೇಶಗಳಿಗೆ ಯಾವುದೇ ಬೋಧಕ ಸಿಬ್ಬಂದಿಯನ್ನು ನಿಯೋಜಿಸದಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.