ಕರ್ನಾಟಕ

karnataka

ETV Bharat / state

ಸಾಲ ಮಾಡುತ್ತೀರೋ ಕಳ್ಳತನ ಮಾಡುತ್ತೀರೋ ನಿಮಗೇ ಬಿಟ್ಟದ್ದು, ಅನುದಾನ ಕೊಡಲೇಬೇಕು: ಹೈಕೋರ್ಟ್ ಕಟ್ಟಪ್ಪಣೆ - fund to repair dasarahalli roads

ಮೂಲ ಸೌಕರ್ಯಗಳಿಗೆ ಅನುದಾನ ನೀಡುವುದು ಸರ್ಕಾರದ ಜವಾಬ್ದಾರಿ, ಸಾಲ ಮಾಡುತ್ತೀರೋ ಅಥವಾ ಕಳ್ಳತನ ಮಾಡುತ್ತೀರೋ ನಿಮಗೆ ಬಿಟ್ಟದ್ದು. ಆದರೆ, ಅಭಿವೃದ್ಧಿ ಕಾಮಾಗಾರಿಗಳಿಗೆ ಅನುದಾನ ನೀಡಲೇಬೇಕು ಎಂದು ಹೈಕೋರ್ಟ್​ ಸರ್ಕಾರಕ್ಕೆ ತಾಕೀತು ಮಾಡಿದೆ.

fund
ಹೈಕೋರ್ಟ್

By

Published : Oct 25, 2021, 9:16 PM IST

ಬೆಂಗಳೂರು:ನೀವು ಕಳ್ಳತನ ಮಾಡುತ್ತೀರೋ ಅಥವಾ ಸಾಲ ಮಾಡುತ್ತೀರೋ ಅದು ನಿಮಗೆ ಬಿಟ್ಟದ್ದು. ಆದರೆ, ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ನೀಡುವುದು ನಿಮ್ಮ ಜವಾಬ್ದಾರಿ ಎಂದು ಹೈಕೋರ್ಟ್ ದಾಸರಹಳ್ಳಿ ಅಭಿವೃದ್ಧಿ ಕಾಮಗಾರಿಗಳಿಗೆ ಹಣ ನೀಡಲು ವಿಳಂಬ ಮಾಡುತ್ತಿರುವ ಸರ್ಕಾರಕ್ಕೆ ಚಾಟಿ ಬೀಸಿದೆ.

ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ವಾರ್ಡ್​ಗಳಲ್ಲಿನ ರಸ್ತೆಗಳನ್ನು ದುರಸ್ತಿ ಮಾಡಲು ಸಂಬಂಧಪಟ್ಟ ಪ್ರಾಧಿಕಾರಗಳಿಗೆ ನಿರ್ದೇಶಿಸಬೇಕು ಎಂದು ಕೋರಿ ವಕೀಲ ಅಶ್ವತ್ಥ್ ನಾರಾಯಣ ಚೌಧರಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಈ ವೇಳೆ ಪಾಲಿಕೆ ಪರ ವಕೀಲರು ಪೀಠಕ್ಕೆ ಮಾಹಿತಿ ನೀಡಿ, ಮಳೆಯಿಂದಾಗಿ ಕಾಮಗಾರಿ ವಿಳಂಬವಾಗಿದೆ. ಸರ್ಕಾರದ ಅನುದಾನ ಲಭ್ಯವಾದರೆ ಶೀಘ್ರ ಕಾಮಗಾರಿ ನಡೆಸಲಾಗುವುದು ಎಂದು ತಿಳಿಸಿದರು. ಇದೇ ವೇಳೆ, ಅರ್ಜಿದಾರರ ಪರ ವಕೀಲ ಜಿ.ಆರ್ ಮೋಹನ್ ವಾದಿಸಿ, ಸರ್ಕಾರ ಅನುದಾನ ನೀಡುವುದಾಗಿ ಭರವಸೆ ನೀಡಿಯೂ ಬಿಡುಗಡೆ ಮಾಡಿಲ್ಲ. ಈ ಹಿಂದೆ 2019ರಲ್ಲಿ ಕಾಂಗ್ರೆಸ್ - ಜೆಡಿಎಸ್ ಸಮ್ಮಿಶ್ರ ಸರ್ಕಾರ ನೀಡಿದ್ದ 500 ಕೋಟಿ ರೂ. ಅನುದಾವನ್ನು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸ್ಮಾರ್ಟ್ ಸಿಟಿ ಕಾರಣ ನೀಡಿ ಹಿಂಪಡೆಯಿತು ಎಂದು ವಿವರಿಸಿದರು.

ಅನುದಾನ ನೀಡದ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಪೀಠ, ಮೂಲ ಸೌಕರ್ಯಗಳಿಗೆ ಅನುದಾನ ನೀಡುವುದು ಸರ್ಕಾರದ ಜವಾಬ್ದಾರಿ. ನೀವು ಸಾಲ ಮಾಡುತ್ತೀರೋ ಅಥವಾ ಕಳ್ಳತನ ಮಾಡುತ್ತೀರೋ ನಿಮಗೆ ಬಿಟ್ಟದ್ದು. ಆದರೆ, ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ನೀಡಲೇಬೇಕು ಎಂದು ತಾಕೀತು ಮಾಡಿತು. ಅಲ್ಲದೇ, ಕಾಮಗಾರಿಗೆ ಶೀಘ್ರವೇ ಅನುದಾನ ಬಿಡುಗಡೆ ಮಾಡುವಂತೆ ನಿರ್ದೇಶಿಸಿ, ಈ ಕುರಿತ ವರದಿಯನ್ನು ಜನವರಿ 5ರೊಳಗೆ ಸಲ್ಲಿಸಬೇಕು ಎಂದು ಸೂಚಿಸಿ, ವಿಚಾರಣೆ ಮುಂದೂಡಿತು.

ABOUT THE AUTHOR

...view details