ಬೆಂಗಳೂರು: ಕಲಬುರಗಿ ಹಾಗೂ ರಾಮನಗರ ಜಿಲ್ಲೆಗಳಲ್ಲಿ ಶೌಚ ಗುಂಡಿ ಸ್ವಚ್ಛಗೊಳಿಸಲು ಇಳಿದ ವೇಳೆ ಪೌರ ಕಾರ್ಮಿಕರು ಮೃತಪಟ್ಟಿರುವ ಘಟನೆಗಳ ಕುರಿತು ವಿವರಣೆ ಬಯಸಿರುವ ಹೈಕೋರ್ಟ್, ಅಕ್ಟೋಬರ್ 4ರಂದು ನಡೆಯುವ ವಿಚಾರಣೆ ವೇಳೆ ಎರಡೂ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಖುದ್ದು ಹಾಜರಿರುವಂತೆ ನಿರ್ದೇಶಿಸಿದೆ.
ರಾಜ್ಯದಲ್ಲಿ ಶೌಚಗುಂಡಿಗಳನ್ನು ಜನರ ಕೈಯಿಂದ ಸ್ವಚ್ಛಗೊಳಿಸುವ ಅನಿಷ್ಠ ಪದ್ಧತಿಯನ್ನು ತೊಲಗಿಸಲು ಮ್ಯಾನುಯಲ್ ಸ್ಕ್ಯಾವೇಜಿಂಗ್ ನಿಷೇಧ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಕೋರಿ, ಸ್ವಯಂಸೇವಾ ಸಂಸ್ಥೆಯೊಂದು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಅವರಿದ್ದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ.
ಕಲಬುರಗಿಯಲ್ಲಿ 2021ರ ಜನವರಿಯಲ್ಲಿ ಇಬ್ಬರು ಕಾರ್ಮಿಕರು ಶೌಚಗುಂಡಿ ಸ್ವಚ್ಛಗೊಳಿಸಲು ಇಳಿದು ಉಸಿರುಗಟ್ಟಿ ಸಾವನ್ನಪ್ಪಿದ್ದರು. ಅದೇ ರೀತಿ ಕಳೆದ ಜೂನ್ ತಿಂಗಳಲ್ಲಿ ರಾಮನಗರ ಜಿಲ್ಲೆಯಲ್ಲಿಯೂ ಇಬ್ಬರು ಪೌರ ಕಾರ್ಮಿಕರು ಸಾವನ್ನಪ್ಪಿದ್ದರು. ಈ ಕುರಿತು ಎಫ್ಐಆರ್ ದಾಖಲಾಗಿದ್ದರೂ ಘಟನೆ ಕುರಿತಂತೆ ಅಧಿಕಾರಿಗಳು ಒಬ್ಬರ ಮೇಲೊಬ್ಬರು ಆರೋಪ ಮಾಡುತ್ತಿದ್ದಾರೆ. ಇದಕ್ಕೆ ಸ್ಪಷ್ಟನೆ ಪಡೆಯಲು ಹೈಕೋರ್ಟ್ ನಿರ್ದೇಶನ ನೀಡಿದೆ.
ಇದೇ ವೇಳೆ ಮ್ಯಾನುಯಲ್ ಸ್ಕಾವೆಂಜಿಂಗ್ ನಿಷೇಧ ಕಾಯ್ದೆಯನ್ನು ಜಾರಿಗೊಳಿಸಲು ರಾಜ್ಯದಲ್ಲಿ ಯಾವೆಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬುದರ ಕುರಿತೂ ಸಮಗ್ರ ವರದಿ ಸಲ್ಲಿಸುವಂತೆ ಪೀಠವು ಸರ್ಕಾರಕ್ಕೆ ನಿರ್ದೇಶಿಸಿದೆ. ಮೃತ ಕಾರ್ಮಿಕರ ಕುಟುಂಬಕ್ಕೆ ತಲಾ 10 ಲಕ್ಷ ಪರಿಹಾರ ನೀಡಿದರೆ ಸಾಕೇ? ಎಂದು ಪ್ರಶ್ನಿಸಿರುವ ನ್ಯಾಯಾಲಯ, ಕಾಯ್ದೆಯ ಸೆಕ್ಷನ್ 13ರಲ್ಲಿ ಹೇಳಿರುವಂತೆ ಕಾರ್ಮಿಕರ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಬೇಕು. ಅವರ ಜೀವನೋಪಾಯಕ್ಕೆ ಕೌಶಲ್ಯ ತರಬೇತಿ ನೀಡಬೇಕು. ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ವಿದ್ಯಾರ್ಥಿ ವೇತನ ನೀಡಬೇಕು. ಕಾಯ್ದೆಯ ನಿಯಮಗಳನ್ನು ಸೂಕ್ತ ರೀತಿಯಲ್ಲಿ ಜಾರಿಗೊಳಿಸದಿದ್ದರೆ ಜಿಲ್ಲಾಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ದಾಖಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
ಇದನ್ನೂ ಓದಿ:Supertech ಕಂಪನಿಯ 40 ಅಂತಸ್ತಿನ ಅವಳಿ ಕಟ್ಟಡಗಳ ನೆಲಸಮಕ್ಕೆ ಸುಪ್ರೀಂ ಆದೇಶ