ಬೆಂಗಳೂರು: ರಾಜ್ಯದಲ್ಲಿ ಉಂಟಾಗಿರುವ ಟಿಪ್ಪು ಜಯಂತಿ ವಿವಾದ ಹೈಕೋರ್ಟ್ ಮೆಟ್ಟಿಲೇರಿದೆ. ಕಳೆದ ನಾಲ್ಕು ವರ್ಷಗಳಿಂದ ನಡೆಯುತ್ತಿದ್ದಂತೆ ಟಿಪ್ಪು ಜಯಂತಿ ನಿಲ್ಲಿಸಲು ಕಾರಣ ಏನು ಎಂದು ಹೈಕೋರ್ಟ್ ರಾಜ್ಯ ಸರ್ಕಾರವನ್ನ ಪ್ರಶ್ನಿಸಿದೆ.
ಟಿಪ್ಪು ಜಯಂತಿ ಕುರಿತು ಉತ್ತರ ಪ್ರದೇಶದ ಲಖನೌ ನಿವಾಸಿ ಬಿಲಾಲ್ ಅಲಿ ಶಾ, ಟಿಪ್ಪುವಿನ ರಾಷ್ಟ್ರೀಯ ಸೇವಾ ಸಂಘ ಮತ್ತು ಟಿಪ್ಪು ಸುಲ್ತಾನ್ ಯುನೈಟೆಡ್ ಫ್ರಂಟ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ವಿಭಾಗೀಯ ಪೀಠದಲ್ಲಿ ನಡೆಯಿತು
ಸರ್ಕಾರದ ಪರ ವಕೀಲ ಪ್ರಭುಲಿಂಗ್ ನಾವಡಗಿ, ಟಿಪ್ಪು ಸುಲ್ತಾನ್ ಜಯಂತಿಯ ಹಿಂದಿನ ಘಟನೆಗಳನ್ನು ನ್ಯಾಯ ಪೀಠದ ಮುಂದೆ ವಿವರಿಸಿದರು. ಟಿಪ್ಪು ಜಯಂತಿಯನ್ನು ಸರ್ಕಾರದ ವತಿಯಿಂದಲೇ ಆಚರಿಸುವುದಾಗಿ ತಿಳಿಸಿತ್ತು. ಆದರೆ, ಮೊದಲ ವರ್ಷದ ಜಯಂತಿಯಲ್ಲಿಯೇ ಕೋಮುಗಲಭೆ ಜರುಗಿತು. ಆ ಗಲಭೆಯಲ್ಲಿ ಒಬ್ಬ ಅಮಾಯಕನೊಬ್ಬ ಮೃತಪಟ್ಟಿದ್ದ. ಎರಡನೇ ವರ್ಷದ ಜಯಂತಿಯನ್ನು ಪೊಲೀಸ್ ಭದ್ರತೆಯಲ್ಲೆ ನಡೆಸಲಾಯಿತು. ಅನೇಕ ಸಮಸ್ಯೆಗಳನ್ನ ಇಟ್ಟುಕೊಂಡು ಜಯಂತಿ ಆಚರಿಸಲಾಗುತ್ತಿರುವುದರಿಂದ ಪ್ರಸ್ತುತ ಸರ್ಕಾರ ಟಿಪ್ಪು ಜಯಂತಿ ರದ್ದುಗೊಳಿಸುವ ಕುರಿತು ಆದೇಶಿಸಿದೆ ಎಂದು ಕೋರ್ಟ್ಗೆ ಮಾಹಿತಿ ನೀಡಿದರು.
ವಾದ ಆಲಿಸಿದ ನ್ಯಾಯಮೂರ್ತಿ ಎ.ಎಸ್.ಓಕಾ, ನಾಲ್ಕು ವರ್ಷಗಳಿಂದ ನಡೆದುಕೊಂಡು ಬಂದಿರುವ ಟಿಪ್ಪು ಜಯಂತಿ ಆಚರಣೆ ಇದೇ ವರ್ಷ ಏಕೆ ನಿಲ್ಲಿಸಿದ್ದೀರಿ ಎಂದು ಪ್ರಶ್ನಿಸಿದರು. ಈ ಕುರಿತು ಸಮಗ್ರ ವಿವರಣೆ ಕೇಳಿರುವ ನ್ಯಾಯಮೂರ್ತಿಗಳು, ವಿಚಾರಣೆಯನ್ನು ಮುಂದೂಡಿದ್ದಾರೆ.