ಬೆಂಗಳೂರು: ಬಿಬಿಎಂಪಿ ಕೋವಿಡ್ ವಾರ್ ರೂಮ್ಗಳಲ್ಲಿ ಬೆಡ್ ಬ್ಲಾಕಿಂಗ್ ದಂಧೆಗೆ ಸಂಬಂಧಿಸಿದಂತೆ ದಾಖಲಿಸಿರುವ ಎಫ್ಐಆರ್ ಮೇರೆಗೆ ಪೊಲೀಸರು ಕೈಗೊಂಡಿರುವ ತನಿಖಾ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸುವಂತೆ ಹೈಕೋರ್ಟ್, ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
ಕೋವಿಡ್ ನಿರ್ವಹಣೆ ಹಾಗೂ ಚಿಕಿತ್ಸೆಗೆ ಸಂಬಂಧಿಸಿದಂತೆ ದಾಖಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ಹಾಗೂ ಹಿರಿಯ ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರಿದ್ದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಜಿ.ಆರ್.ಮೋಹನ್ ಪೀಠಕ್ಕೆ ಮಾಹಿತಿ ನೀಡಿ, ಬಿಬಿಎಂಪಿ ಕೋವಿಡ್ ವಾರ್ ರೂಮ್ಗಳಲ್ಲಿ ಬೆಡ್ ಬ್ಲಾಕಿಂಗ್ ದಂಧೆ ನಡೆಯುತ್ತಿದೆ. ಬೆಡ್ಗಳಿಲ್ಲದೆ ರೋಗಿಗಳು ನರಳಾಡುತ್ತಿರುವ ಸಂದರ್ಭದಲ್ಲಿ ಇಂತದ್ದೊಂದು ದಂಧೆ ಆರಂಭವಾಗಿದೆ ಎಂದು ವಿವರಿಸಿದರು.