ಬೆಂಗಳೂರು: ಐಟಿಪಿಎಲ್ ಖಾಸಗಿ ಕಂಪನಿಯ ಸಿಎಸ್ಆರ್ ಅನುದಾನದಲ್ಲಿ ಕೆ.ಆರ್.ಪುರ ಕ್ಷೇತ್ರದ ದೇವಸಂದ್ರ ವಾರ್ಡ್ನ ಮಹದೇವಪುರದ ಸರ್ಕಾರಿ ಶಾಲೆಗೆ ಹೈಟೆಕ್ ಮಾದರಿಯ ಸುಸಜ್ಜಿತ ಕಟ್ಟಡ ನಿರ್ಮಾಣವಾಗುತ್ತಿದೆ. ಸರ್ಕಾರಿ ಶಾಲೆಗಳಿಗೆ ಹೈಟೆಕ್ ಸ್ಪರ್ಶ ನೀಡಿ, ಉತ್ತಮ ಶೈಕ್ಷಣಿಕ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ ಹಲವು ಖಾಸಗಿ ಸಂಸ್ಥೆಗಳ ಸಹಯೋಗದಲ್ಲಿ ಅತ್ಯಾಧುನಿಕ ಕಟ್ಟಡಗಳ ನಿರ್ಮಾಣಕ್ಕೆ ಮುಂದಾಗಿದೆ.
ಸರ್ಕಾರಿ ಶಾಲೆಗೆ ಹೈಟೆಕ್ ಸ್ಪರ್ಶ ಇದರಂತೆ ಹಲವು ಖಾಸಗಿ ಸಂಸ್ಥೆಗಳು ಹಲವು ಶಾಲಾ ಕಟ್ಟಡಗಳನ್ನು ನಿರ್ಮಿಸಿದ್ದು, ಕೆ.ಆರ್. ಪುರ ಕ್ಷೇತ್ರದ ದೇವಸಂದ್ರ ವಾರ್ಡ್ನ ಮಹದೇವಪುರ ಬಂಡೆಯ ಬಳಿ ನಿರ್ಮಿಸಿರುವ ಈ ಸುಸಜ್ಜಿತ ಶಾಲಾ ಕಟ್ಟಡ ಎಲ್ಲರ ಗಮನ ಸೆಳೆಯುತ್ತಿದೆ.
ತಾಲೂಕಿನಲ್ಲಿ ಐದು ಸುಸಜ್ಜಿತ ಹೈಟೆಕ್ ಶಾಲೆಗಳ ನಿರ್ಮಾಣಕ್ಕೆ ಕ್ರಮಕೈಗೊಳ್ಳಲಾಗಿದ್ದು, ಬೆಂಗಳೂರು ಪೂರ್ವ ತಾಲೂಕಿನಲ್ಲಿ ಇದೇ ಮೊಟ್ಟ ಮೊದಲ ಹೈಟೆಕ್ ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಪ್ರಸ್ತುತ ಶಾಲೆ ಹಳೆಯ ಕಟ್ಟಡವಾಗಿದ್ದು, ಇದಕ್ಕೆ ಉತ್ತಮ ಆಯಾಮ ನೀಡಲು ಈ ಸಂಸ್ಥೆ ಮುಂದಾಗಿದ್ದು, ಸರ್ಕಾರಿ ಶಾಲೆಗೆ ಹೈಟೆಕ್ ಸ್ಪರ್ಶ ನೀಡಿದೆ.
ಶಾಲೆಯ ನವೀಕರಣ ಕೆಲಸ ಸುಮಾರು ₹3 ಕೋಟಿ ವೆಚ್ಚದಲ್ಲಿ ನಡೆಯುತ್ತಿದ್ದು, ಎಂಟು ತರಗತಿ ಕೊಠಡಿಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಅದರೊಂದಿಗೆ ಖಾಸಗಿ ಶಾಲೆಗಳಲ್ಲಿ ದೊರೆಯುವ ಸೌಲಭ್ಯಕ್ಕಿಂತ ಹೆಚ್ಚಿನ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಈ ಶಾಲೆಯ ನಿರ್ಮಾಣ ಕಾರ್ಯವಾಗುತ್ತಿದೆ.
ಪೀಠೋಪಕರಣ, ಕ್ರೀಡಾ ಸಾಮಗ್ರಿಗಳು, ಲ್ಯಾಬ್ ಸೇರಿದಂತೆ ಹೈಟೆಕ್ ಶಾಲೆಯ ಬ್ರಾಂಡ್ ನಂತೆ ನಿರ್ಮಾಣ ಕಾರ್ಯ ಮಾಡುತ್ತಿದ್ದು, ಇದರಿಂದ ಸ್ಥಳೀಯ ನಿವಾಸಿಗಳು ಹರ್ಷ ವ್ಯಕ್ತಪಡಿಸಿದ್ದಾರೆ. ಎಲ್ಲಾ ಕೊಠಡಿಗಳಿಗೂ ಸ್ಮಾರ್ಟ್ ಕ್ಲಾಸ್ ಮಾಡುವ ನಿಟ್ಟಿನಲ್ಲಿ ಕಾಮಾಗಾರಿಗಳನ್ನು ಮಾಡಲಾಗಿದ್ದು, ಉತ್ತಮ ಶೈಕ್ಷಣಿಕ ವಾತಾವರಣ ನಿರ್ಮಾಣ ಮಾಡುವುದು ಸಂಸ್ಥೆಯ ಉದ್ದೇಶ ಎಂದು ಸಂಸ್ಥೆಯ ಸಿಬ್ಬಂದಿ ತಿಳಿಸಿದರು.
ಹೊಸದಾಗಿ ಕಟ್ಟಡ ನಿರ್ಮಿಸಲಾಗಿದ್ದು,1 ರಿಂದ 7 ನೇ ತರಗತಿವರೆಗೆ ಇದ್ದ ತರಗತಿಗಳು ನಡೆಯಲಿದ್ದು, ಇನ್ನೂ ಎರಡು ತಿಂಗಳಲ್ಲಿ ಲೋಕಾರ್ಪಣೆ ಮಾಡುವ ಸಾಧ್ಯತೆಗಳಿವೆ. ರಸ್ತೆ ಅಭಿವೃದ್ಧಿ ಸೇರಿದಂತೆ ಕೆಲವೊಂದು ಕಾಮಾಗಾರಿಗಳು ಬಾಕಿ ಇದ್ದು ಅಧಿಕಾರಿಗಳು ಸರ್ಮಪಕ ಕಾರ್ಯ ನಿರ್ವಹಿಸಿದರೆ ಸುಸಜ್ಜಿತ ಕಟ್ಟಡ ಲೋಪಗಳ ಮುಕ್ತವಾಗಲಿದೆ.
ಈ ಸಾಲಿನ ಶಾಲೆಗಳು ಪ್ರಾರಂಭವಾದರೆ ಇದೆ ಶಾಲೆಯಲ್ಲೇ ಪ್ರಾರಂಭಿಸಲು ಭರದಿಂದ ಕಾಮಗಾರಿಗಳನ್ನು ನಡೆಸಲಾಗುತ್ತಿದೆ. ಮಾಜಿ ಪಾಲಿಕೆ ಸದಸ್ಯ ಶ್ರೀಕಾಂತ್ ಹೊಸ ಹೈಟೆಕ್ ಸರ್ಕಾರಿ ಶಾಲೆ ಕಾಮಗಾರಿ ಪರಿಶೀಲನೆ ನಡೆಸಿದರು. ನನ್ನ ಅವಧಿಯಲ್ಲಿ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಅವರ ನೇತೃತ್ವದಲ್ಲಿ ತಾಲೂಕಿಗೆ ಮೊಟ್ಟಮೊದಲ ಹೈಟೆಕ್ ಶಾಲೆ ನೀಡಿದ ಕೀರ್ತಿ ಲಭಿಸಲಿದೆ ಎಂದು ಮಾಜಿ ಪಾಲಿಕೆ ಸದಸ್ಯ ಶ್ರೀಕಾಂತ್ ಸಂತಸ ಹಂಚಿಕೊಂಡರು.
ಕಂಪನಿಯು ಶಾಲೆ ಅಭಿವೃದ್ಧಿ ಪಡಿಸಿದೆ ಇದರಿಂದ ಸರ್ಕಾರಿ ಶಾಲೆ ಖಾಸಗಿ ಶಾಲೆಯ ಸ್ವರೂಪ ಪಡೆದಿದ್ದು, ಉತ್ತಮ ಶೈಕ್ಷಣಿಕ ವಾತಾವರಣ ದೊರೆಯಲಿದೆ. ಇದರಂತೆ ತಾಲೂಕಿನಲ್ಲಿ 5 ಹೈಟೆಕ್ ಶಾಲೆ ನಿರ್ಮಾಣ ಮಾಡಲಿದ್ದೇವೆ ಎಂದು ಬಿಇಓ ಹನುಮಂತರಾಯಪ್ಪ ತಿಳಿಸಿದರು.