ಕರ್ನಾಟಕ

karnataka

ETV Bharat / state

ಎಲ್ಲ ಸಮುದಾಯಗಳ ಮೀಸಲಾತಿ ಬೇಡಿಕೆ ಅಧ್ಯಯನಕ್ಕಾಗಿ ಸಮಿತಿ ರಚನೆಗೆ ತೀರ್ಮಾನ - Decision taken at the cabinet Meeting

ಎಲ್ಲಾ ಸಮುದಾಯಗಳ ಮೀಸಲಾತಿ ಬೇಡಿಕೆ ಅಧ್ಯಯನ ನಡೆಸಿ ವರದಿ ನೀಡಲು, ಹೈಕೋರ್ಟ್​ನ ನಿವೃತ್ತಿ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಮೂರು ಸದಸ್ಯರ ಉನ್ನತ ಮಟ್ಟದ ಸಮಿತಿ ರಚನೆ ಮಾಡಲು ತೀರ್ಮಾನಿಸಲಾಗಿದೆ. ಸಂವಿಧಾನದ ಚೌಕಟ್ಟಿನಲ್ಲಿ ಪರಾಮರ್ಶಿಸಿ ಉನ್ನತ ಮಟ್ಟದ ಸಮಿತಿ ಅಧ್ಯಯನ‌ ವರದಿ ನೀಡಲಿದೆ ಎಂದು ಕಾನೂನು ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

cabinet Meeting
ಕಾನೂನು ಸಚಿವ ಬಸವರಾಜ್ ಬೊಮ್ಮಾಯಿ

By

Published : Mar 3, 2021, 5:28 PM IST

Updated : Mar 3, 2021, 9:22 PM IST

ಬೆಂಗಳೂರು: ಎಲ್ಲಾ ಸಮುದಾಯಗಳ ಮೀಸಲಾತಿ ಬೇಡಿಕೆಗಳ ಅಧ್ಯಯನಕ್ಕಾಗಿ ಹೈಕೋರ್ಟ್​ನ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಲು ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.

ಕಾನೂನು ಸಚಿವ ಬಸವರಾಜ್ ಬೊಮ್ಮಾಯಿ

ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಕಾನೂನು ಸಚಿವ ಬಸವರಾಜ ಬೊಮ್ಮಾಯಿ, ಪಂಚಮಸಾಲಿ ಮೀಸಲಾತಿ, ವಾಲ್ಮೀಕಿ ಎಸ್ಟಿ ಮೀಸಲಾತಿ‌ ಹೆಚ್ಚಳ ಬೇಡಿಕೆ, ಕುರುಬ ಸಮುದಾಯ ಎಸ್ಟಿಗೆ ಸೇರಿಸುವ ಬೇಡಿಕೆ ಸೇರಿದಂತೆ ಇತರೆ ಸಮುದಾಯಗಳ ಮೀಸಲಾತಿ ಬೇಡಿಕೆಗಳ ಅಧ್ಯಯನ ನಡೆಸಿ ವರದಿ ನೀಡಲು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಮೂರು ಸದಸ್ಯರ ಉನ್ನತ ಮಟ್ಟದ ಸಮಿತಿ ರಚನೆ ಮಾಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ಓದಿ:ರಮೇಶ್​ ಜಾರಕಿಹೊಳಿ ಸಿಡಿ ಕೇಸ್‌: 24 ಗಂಟೆಯೊಳಗೆ ನಡೆದಿದ್ದೇನು? ಇಲ್ಲಿದೆ ಸಂಪೂರ್ಣ ಚಿತ್ರಣ..

ಮೀಸಲಾತಿ ಸಂಬಂಧ ಸುಪ್ರೀಂಕೋರ್ಟ್ ಶೇ 50ರಷ್ಟು ಮಿತಿ ಇಟ್ಟಿದೆ. ಬೇರೆ ಬೇರೆ ರಾಜ್ಯಗಳಲ್ಲಿ ಮೀಸಲಾತಿ ಶೇ 50ರಷ್ಟು ಮಿತಿಯನ್ನು ಮೀರಿ ಕೊಡಲಾಗಿದೆ. ಇವುಗಳನ್ನು ಸುಪ್ರೀಂ ರದ್ಧುಪಡಿಸಿದೆ. ಹಾಗಾಗಿ ಇದಕ್ಕೆ ಹೆಚ್ಚಿನ ಕಾನೂನು ಅಭಿಪ್ರಾಯಬೇಕಿದೆ. ಸಾಧಕ ಬಾಧಕ ಅಧ್ಯಯನ ನಡೆಸಿ, ಸಂವಿಧಾನದ ಚೌಕಟ್ಟಿನಲ್ಲಿ ಪರಾಮರ್ಶಿಸಿ ಉನ್ನತ ಮಟ್ಟದ ಸಮಿತಿ ಅಧ್ಯಯನ‌ ವರದಿ ನೀಡಲಿದೆ ಎಂದು ತಿಳಿಸಿದರು.

ಕಸ ನಿರ್ವಹಣೆಗೆ ಪ್ರತ್ಯೇಕ ಕಂಪನಿ ರಚನೆಗೆ ನಿರ್ಧಾರ:

ಬೆಂಗಳೂರಿನ ಕಸ ವಿಲೇವಾರಿ, ಕಸ ಸಂಗ್ರಹ, ಸಾಗಾಣಿಕೆ ಒಳಗೊಂಡಂತೆ ಸಮಗ್ರ ಕಸ ನಿರ್ವಹಣೆಗಾಗಿ ಬೆಂಗಳೂರು ಸಾಲಿಡ್​ ವೇಸ್ಟ್ ಮ್ಯಾನೇಜ್​ಮೆಂಟ್ ಕಂಪನಿ ಸ್ಥಾಪನೆಗೆ ಸಂಪುಟ ಸಭೆ ನಿರ್ಧರಿಸಿದೆ.

ಬಿಬಿಎಂಪಿ ಹಾಗೂ ರಾಜ್ಯ ಸರ್ಕಾರ ಜಂಟಿ ಸಹಭಾಗಿತ್ವದಲ್ಲಿ ಕಂಪನಿ ರಚನೆಯಾಗಲಿದೆ. ಇದರಲ್ಲಿ ರಾಜ್ಯ ಸರ್ಕಾರ ಶೇ 49ರಷ್ಟು, ಬಿಬಿಎಂಪಿ ಶೇ 51ರಷ್ಟು ಪಾಲು ಹೊಂದಲಿದೆ. ಬೆಂಗಳೂರಿಗರ ಒತ್ತಾಯದ ಮೇರೆಗೆ ಕಂಪನಿಗೆ ಜವಾಬ್ದಾರಿ ನೀಡಲಾಗಿದೆ. ಏಳು ಕಸ ನಿರ್ವಹಣಾ ಪ್ಲಾಂಟ್ ಕಸ ವಿಲೇವಾರಿ ಮಾಡಬೇಕು. ಅದರಲ್ಲಿ ಮೂರು ಪ್ಲಾಂಟ್ ಇನ್ನೂ ಪ್ರಾರಂಭವಾಗಿಲ್ಲ. ಶೀಘ್ರಗತಿಯಲ್ಲಿ ಘಟಕ ಪ್ರಾರಂಭಿಸಲು ಇದು ತೀರ್ಮಾನ ಕೈಗೊಳ್ಳಲಿದೆ ಎಂದು ತಿಳಿಸಿದರು.

ಸಂಪುಟ ಸಭೆ‌ ಇತರ ತೀರ್ಮಾನಗಳೇನು?:

  • ಬೆಂಗಳೂರಿನ 774 ಪೊಲೀಸ್ ಸ್ಟೇಷನ್​ಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದ್ದು, ಉಳಿದ 281 ಸಿಸಿಟಿವಿ ಕ್ಯಾಮರಾ ಅಳವಡಿಸಲು 18.50 ಕೋಟಿ ರೂ. ಮಂಜೂರಾತಿ.
  • ಕೆಳ ಹಂತದ ನ್ಯಾಯಾಲಯಗಳಲ್ಲಿ ಸಿಬ್ಬಂದಿಗೆ 2009ರಿಂದ ಅನ್ವಯಿಸಿ ವೇತನ ಪರಿಷ್ಕರಣೆಗೆ ನಿರ್ಧಾರ.
  • ಕರ್ನಾಟಕ ನಾಗರಿಕ ಸೇವಾ ( ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ) ತಿದ್ದುಪಡಿ ನಿಯಮಗಳು 2021 ಅನುಮೋದನೆ.
  • ಸರ್ಕಾರಿ/ ಅನುದಾನಿತ ಆಯುಷ್ ಮಹಾವಿದ್ಯಾಲಯಗಳ ಬೋಧಕ‌ ಸಿಬ್ಬಂದಿ ವೇತನ ಪರಿಷ್ಕರಣೆಗೆ ಅನುಮೋದನೆ.
  • ಕರ್ನಾಟಕ ಜಲಸಾರಿಗೆ ಮಂಡಳಿ ತಿದ್ದುಪಡಿ ವಿಧೇಯಕ 2021ಕ್ಕೆ ಅನುಮೋದನೆ.
  • ಕರ್ನಾಟಕ ಜಲಸಾರಿಗೆ ಮಂಡಳಿ (ತಿದ್ದುಪಡಿ) ವಿಧೇಯಕ 2021ಕ್ಕೆ ಅನುಮೋದನೆ.
  • ಕರ್ನಾಟಕ ಅಧೀನ ನ್ಯಾಯಾಲಯಗಳ (ಲಿಪಿಕ ಮತ್ತು ಇತರೆ ಹುದ್ದೆಗಳು) (ನೇಮಕಾತಿ) (ತಿದ್ದುಪಡಿ) ನಿಯಮಗಳು, 2020ಕ್ಕೆ ಅನುಮೋದನೆ.
  • ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ರಾಯಚೂರು ಜಿಲ್ಲೆ, ಮಸ್ಕಿ ತಾಲ್ಲೂಕಿನ ಕೆರೆಗಳಿಗೆ ಕುಡಿಯುವ ನೀರು ಹಾಗೂ ಅಂತರ್ಜಲ ಅಭಿವೃದ್ಧಿ ಸಲುವಾಗಿ ಕೃಷ್ಣಾ ನದಿಯಿಂದ ಏತ ನೀರಾವರಿ ಮೂಲಕ ನೀರನ್ನು ತುಂಬಿಸಲು 457.18 ಕೋಟಿ ರೂ. ಮೊತ್ತದ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ.
  • ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸಲು ಅನುಕೂಲವಾಗುವ ದೃಷ್ಟಿಯಿಂದ ಬೆಂಗಳೂರಿನ ಹೆಚ್ ಎಸ್ ಆರ್ ಬಡಾವಣೆಯಲ್ಲಿ 59 ಕೋಟಿ ರೂ. ವೆಚ್ಚದಲ್ಲಿ ಹಾಸ್ಟೆಲ್ ನಿರ್ಮಾಣ ಮಾಡಲು ಅನುಮೋದನೆ.
  • ಕೋಲಾರ ಜಿಲ್ಲೆಯ, ಬಂಗಾರಪೇಟೆ ತಾಲ್ಲೂಕಿನಲ್ಲಿ ನ್ಯಾಯಾಲಯ ಕಟ್ಟಡ ನಿರ್ಮಾಣ ಕಾಮಗಾರಿಯ ಪರಿಷ್ಕೃತ ಅಂದಾಜು ಮೊತ್ತ 18.48 ರೂ. ಕೋಟಿಗೆ ಅನುಮೋದನೆ.
  • ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ದಾವಣಗೆರೆ ಜಿಲ್ಲೆಯ, ಹೊನ್ನಾಳಿ ತಾಲ್ಲೂಕಿನ ಸಲವನಹಳ್ಳಿ ಹೊಸಕೊಪ್ಪ ಮತ್ತು ಇತರೆ 59 ಜನವಸತಿಗಳಿಗೆ ಜಲ ಜೀವನ್ ಯೋಜನೆಯಡಿ ಕುಡಿಯುವ ನೀರು ಪೂರೈಕೆಗಾಗಿ 69.26 ಕೋಟಿ ರೂ. ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆ.

ಸಿಡಿ ಸಂಬಂಧ ಬೇರೆ ತನಿಖೆ ಬಗ್ಗೆ ನಿರ್ಧಾರ ಆಗಿಲ್ಲ:

ರಾಸಲೀಲೆ ಪ್ರಕರಣ ಸಂಬಂಧ ಮಧ್ಯಾಹ್ನ ರಮೇಶ ಜಾರಕಿಹೊಳಿ ರಾಜೀನಾಮೆ ಸಲ್ಲಿಸಿದ್ದಾರೆ. ಸಂಪುಟದಲ್ಲಿ ಇದರ ಬಗ್ಗೆ ಚರ್ಚೆಯಾಗಲಿಲ್ಲ ಎಂದು ಬೊಮ್ಮಾಯಿ ಸ್ಪಷ್ಟಪಡಿಸಿದರು. ಕಬ್ಬನ್ ಪಾರ್ಕ್ ಸ್ಟೇಷನ್​​ನಲ್ಲಿ ದೂರು ದಾಖಲಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ಮಾಡಲಿದ್ದಾರೆ. ಇತರ ತನಿಖಾ ಸಂಸ್ಥೆಗಳಿಂದ ತನಿಖೆ ನಡೆಸುವ ಬಗ್ಗೆ ಯಾವುದೇ ನಿರ್ಧಾರವಾಗಿಲ್ಲ ಎಂದರು.

Last Updated : Mar 3, 2021, 9:22 PM IST

ABOUT THE AUTHOR

...view details