ಕರ್ನಾಟಕ

karnataka

ETV Bharat / state

ಶಾಲೆಗಳಲ್ಲಿ ಅಧಿಕ ಶುಲ್ಕ ಸಂಗ್ರಹ ವಿಚಾರ : ಮೂರು ತಿಂಗಳಲ್ಲೇ ಸಮಸ್ಯೆ ಪರಿಹಾರ- ಸರ್ಕಾರದ ಸ್ಪಷ್ಟನೆ - ಶಾಲೆಗಳಲ್ಲಿ ಅಧಿಕ ಶುಲ್ಕ ಸಂಗ್ರಹ ವಿಚಾರ

ಖಾಸಗಿ ಶಾಲೆಗಳಲ್ಲಿ ಅಧಿಕ ಶುಲ್ಕ ಸಂಗ್ರಹದ ವಿಚಾರವಾಗಿ ಇಂದು ನಡೆದ ವಿಚಾರಣೆಯಲ್ಲಿ ಕಾಲ ಮಿತಿಯೊಳಗೆ ಪ್ರಕರಣ ಇತ್ಯರ್ಥಪಡಿಸುವ ಸಂಬಂಧ ಡೇರಾಗೆ ಅಗತ್ಯ ನಿರ್ದೇಶನ ನೀಡಲಾಗಿದೆ ಎಂದು ಸರ್ಕಾರಿ ವಕೀಲರು ವಿವರಿಸಿದರು.

ಹೈ ಕೋರ್ಟ್‌
high court

By

Published : Jan 24, 2020, 9:33 PM IST

ಬೆಂಗಳೂರು: ಖಾಸಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಂದ ಅಧಿಕ ಶುಲ್ಕ ಸಂಗ್ರಹಿಸುವ ಬಗ್ಗೆ ದಾಖಲಾಗುವ ದೂರುಗಳನ್ನು ಮೂರು ತಿಂಗಳಲ್ಲಿ ಇತ್ಯರ್ಥ ಪಡಿಸುವಂತೆ ಜಿಲ್ಲಾಧಿಕಾರಿ ನೇತೃತ್ವದ ಜಿಲ್ಲಾ ಶಿಕ್ಷಣ ನಿಯಂತ್ರಣ ಪ್ರಾಧಿಕಾರಕ್ಕೆ (ಡೇರಾ) ನಿರ್ದೇಶಿಸಿ ಸುತ್ತೋಲೆ ಹೊರಡಿಸಿದ್ದೇವೆ ಎಂದು ರಾಜ್ಯ ಸರ್ಕಾರ ಹೈ ಕೋರ್ಟ್‌ಗೆ ಮಾಹಿತಿ ನೀಡಿದೆ.

ಖಾಸಗಿ ಶಾಲೆಗಳಲ್ಲಿ ಅಧಿಕ ಶುಲ್ಕ ಸಂಗ್ರಹಿಸುವ ಕುರಿತು ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡುವಂತೆ ಕೋರಿ ವಕೀಲ ಎನ್. ಪಿ .ಅಮೃತೇಶ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ. ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಸರ್ಕಾರಿ ವಕೀಲರು, ಪ್ರಾಥಮಿಕ ಶಿಕ್ಷಣ ಇಲಾಖೆ ಹೊರಡಿಸಿರುವ ಸುತ್ತೋಲೆಯನ್ನು ಪೀಠಕ್ಕೆ ಒದಗಿಸಿದರು.

ರಾಜ್ಯದ ಖಾಸಗಿ ಶಾಲೆಗಳಲ್ಲಿ ಅಧಿಕ ಶುಲ್ಕ ಸಂಗ್ರಹಿಸುವ ಕುರಿತು ದಾಖಲಾಗುವ ದೂರುಗಳ ವಿಚಾರಣೆ ನಡೆಸಲು ಕರ್ನಾಟಕ ಶಿಕ್ಷಣ ಸಂಸ್ಥೆಗಳ ನಿಯಮಗಳು-1995 ಅಡಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ‘ಜಿಲ್ಲಾ ಶಿಕ್ಷಣ ನಿಯಂತ್ರಣ ಪ್ರಾಧಿಕಾರ’ಗಳನ್ನು (ಡೇರಾ) ರಚಿಸಲಾಗಿದೆ. ಕಾಲ ಮಿತಿಯೊಳಗೆ ಪ್ರಕರಣ ಇತ್ಯರ್ಥಪಡಿಸುವ ಸಂಬಂಧ ಡೇರಾಗೆ ಅಗತ್ಯ ನಿರ್ದೇಶನ ನೀಡಲಾಗಿದೆ ಎಂದು ಸರ್ಕಾರಿ ವಕೀಲರು ವಿವರಿಸಿದರು.

ಕರ್ನಾಟಕ ಶಿಕ್ಷಣ (ವರ್ಗೀಕರಣ ಮತ್ತು ನಿಯಂತ್ರಣ) ಕಾಯ್ದೆ-1995ರ ನಿಯಮ 10(4) ಹಾಗೂ 14(2)ರ ಅನ್ವಯ ಎಲ್ಲ ಶಾಲೆಗಳು ವಿದ್ಯಾರ್ಥಿಗಳಿಂದ ಸಂಗ್ರಹಿಸುವ ಶುಲ್ಕದ ವಿವರ ಫಲಕವನ್ನು ಶಾಲೆಯ ಮುಂದೆ ಕಡ್ಡಾಯವಾಗಿ ಅಳವಡಿಸಬೇಕೆಂದು 2015ರ ಏ.13ರಂದು ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ಆದರೆ ಬಹುತೇಕ ಶಾಲೆಗಳು ಈ ನಿಯಮ ಪಾಲಿಸುತ್ತಿಲ್ಲ. ಸುತ್ತೋಲೆ ಪ್ರಕಟಗೊಂಡು ಮೂರು ವರ್ಷ ಕಳೆದರೂ ಸುತ್ತೋಲೆಯನ್ನು ಶಿಕ್ಷಣ ಇಲಾಖೆ ಸಮರ್ಪಕವಾಗಿ ಜಾರಿಗೆ ತಂದಿಲ್ಲ ಎಂಬುದು ಅರ್ಜಿದಾರರ ಆರೋಪವಾಗಿದೆ.

ABOUT THE AUTHOR

...view details