ಬೆಂಗಳೂರು: ಅಕ್ರಮ ಬಾಂಗ್ಲಾ ವಲಸಿಗರೆಂಬ ನೆಪದಲ್ಲಿ ನಗರದ ಮಾರತ್ತಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿದ್ದ ಜೋಪಡಿಗಳನ್ನು ತೆರವು ಮಾಡಿದ ಬಿಬಿಎಂಪಿ ಮತ್ತು ಪೊಲೀಸ್ ಅಧಿಕಾರಿಗಳ ಕಾರ್ಯಾಚರಣೆಗೆ ಹೈಕೋರ್ಟ್ ಆಕ್ರೋಶ ವ್ಯಕ್ತಪಡಿಸಿದೆ.
ಬಾಂಗ್ಲಾ ದೇಶದವರು ಅಕ್ರಮವಾಗಿ ನೆಲೆಸಿದ್ದಾರೆ ಎಂಬ ನೆಪದಲ್ಲಿ ಮಹದೇವಪುರ ವಲಯದ ತೂಬರಹಳ್ಳಿ ಹಾಗೂ ಕುಂದಲಹಳ್ಳಿ ವ್ಯಾಪ್ತಿಯಲ್ಲಿ ಬಡ ಜನರ ಜೋಪಡಿಗಳನ್ನು ತೆರವು ಮಾಡಿದ ಕ್ರಮ ಪ್ರಶ್ನಿಸಿ, ನಗರದ ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ ಸಲ್ಲಿಸಿದ್ದ ಪಿಐಎಲ್ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವಡ್ಗಿ ಅವರು, ಅಕ್ರಮವಾಗಿ ಬಾಂಗ್ಲಾ ವಲಸಿಗರ ಇರುವಿಕೆಯನ್ನು ಗುರುತಿಸುವ ಬಗ್ಗೆ ಕೇಂದ್ರ ಗೃಹ ಸಚಿವಾಲಯ ಕಳೆದ ವರ್ಷ ಸುತ್ತೋಲೆ ಹೊರಡಿಸಿದೆ. ಈ ಸುತ್ತೋಲೆ ಆಧಾರದಲ್ಲಿ ಬಿಬಿಎಂಪಿ ಅಧಿಕಾರಿಗಳು ಮಾರತಹಳ್ಳಿ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್‌ಗೆ ಪತ್ರ ಬರೆದಿದ್ದರು. ಅಧಿಕಾರಿಗಳು ಅಪಾರ್ಟ್‌ಮೆಂಟ್ ಹಿಂಭಾಗದಲ್ಲಿ ಅಕ್ರಮವಾಗಿ ನೆಲೆಸಿರುವ ಜನರಿಂದ ಸ್ಥಳೀಯರಿಗೆ ತೊಂದರೆ ಆಗುತ್ತಿದೆ ಎಂದು ತಿಳಿಸಿದ್ದರು. ಈ ಪತ್ರದ ಆಧಾರದಲ್ಲಿ ಜೋಪಡಿಗಳಲ್ಲಿ ನೆಲೆಸಿದವರನ್ನು ವಿನಯಪೂರ್ವಕ ನಡವಳಿಕೆಯಿಂದಲೇ ತೆರವುಗೊಳಿಸಲಾಗಿದೆ ಎಂದು ವಿವರಿಸಿದರು.
ಎಜಿ ಹೇಳಿಕೆ ಒಪ್ಪದ ಪೀಠ, ತೆರವುಗೊಳಿಸುವ ಮುನ್ನ ಅಲ್ಲಿನ ಜನರನ್ನು ಅಕ್ರಮವಾಗಿ ನೆಲೆಸಿದ್ದಾರೆ ಎಂದು ಗುರುತಿಸಿದವರು ಯಾರು? ಆ ಸಕ್ಷಮ ಪ್ರಾಧಿಕಾರ ಎಲ್ಲಿದೆ? ಯಾವ ಪೊಲೀಸ್ ಅಧಿಕಾರಿ ಅವರ ವಿಚಾರಣೆ ನಡೆಸಿದರು? ನಗರದಲ್ಲಿ ಅಕ್ರಮವಾಗಿ ನೆಲೆಸಿರುವ ಎಷ್ಟೋ ಶ್ರೀಮಂತರ ಕಟ್ಟಡಗಳಿವೆ. ಅವುಗಳನ್ನೂ ಇದೇ ರೀತಿ ತೆರವುಗೊಳಿಸುತ್ತೀರಾ? ಎಂದು ಅಸಮಾಧಾನ ವ್ಯಕ್ತಪಡಿಸಿತು.
ನೀವು ನ್ಯಾಯೋಚಿತ ವಿಧಾನದಲ್ಲಿ ನಡೆದುಕೊಂಡಿಲ್ಲ. ನಿಮ್ಮ ಕಾರ್ಯಾಚರಣೆ ಬಹಳ ಅಪಾಯಕಾರಿಯಾಗಿ ಕಂಡುಬರುತ್ತಿದೆ. ಇದೀಗ ಪೊಲೀಸರು ಹಾಗೂ ಬಿಬಿಎಂಪಿ ಅಧಿಕಾರಿಗಳು ಹೊಣೆ ಒಪ್ಪಿಕೊಳ್ಳದೆ ಪರಸ್ಪರ ಆರೋಪಿಸುತ್ತಿದ್ದಾರೆ. ಇದನ್ನೆಲ್ಲಾ ಗಮನಿಸಿದರೆ, ಇದು ಪೊಲೀಸರಿಂದಲೇ ಆರಂಭವಾಗಿರುವ ಕೃತ್ಯದಂತೆ ಕಾಣುತ್ತಿದೆ. ಈ ಕುರಿತಂತೆ ನಿಮ್ಮ ನಿಲುವು ಏನೆಂಬುದನ್ನು ಸ್ಪಷ್ಟವಾಗಿ ತಿಳಿಸಿ ಎಂದು ಸರ್ಕಾರದ ಪರ ವಕೀಲರಿಗೆ ಸೂಚಿಸಿ ವಿಚಾರಣೆಯನ್ನು ಫೆ.10ಕ್ಕೆ ಮುಂದೂಡಿದೆ.