ಬೆಂಗಳೂರು: ಅನಗತ್ಯ ಹಾಗೂ ಕ್ಷುಲ್ಲಕ ದಾವೆಗಳನ್ನು ಹೂಡುವ ಮೂಲಕ ರಾಜ್ಯ ಸರ್ಕಾರ ವ್ಯಾಜ್ಯಗಳು ಉಂಟಾಗುವುದಕ್ಕೆ ಕಾರಣವಾಗುತ್ತಿದೆ ಎಂದು ತರಾಟೆಗೆ ತೆಗೆದುಕೊಂಡಿರುವ ಹೈಕೋರ್ಟ್, ಅಂತಹ ವ್ಯಾಜ್ಯಗಳನ್ನು ನಿಯಂತ್ರಿಸದಿದ್ದರೆ ದಂಡ ವಿಧಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
ನಿವೃತ್ತ ಸಹಾಯಕ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಎಂ.ರಹಮತುಲ್ಲಾ ವಿರುದ್ಧದ ಪ್ರಕರಣದಲ್ಲಿ ಕೆಎಟಿ ಆದೇಶ ಪ್ರಶ್ನಿಸಿ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ವಜಾಗೊಳಿಸಿರುವ ನ್ಯಾಯಮೂರ್ತಿ ಜಿ.ನರೇಂದರ್ ಮತ್ತು ನ್ಯಾಯಮೂರ್ತಿ ಪಿ.ಎನ್ ದೇಸಾಯಿ ಅವರಿದ್ದ ವಿಭಾಗೀಯ ಪೀಠ ಈ ಸೂಚನೆ ನೀಡಿದೆ.
ಅಲ್ಲದೇ ಅಂತಹ ದಂಡವನ್ನು ಯಾವ ಅಧಿಕಾರಿಗಳು ವ್ಯಾಜ್ಯಕ್ಕೆ ಕಾರಣವಾಗುತ್ತಾರೋ ಅಂತಹವರಿಂದಲೇ ವಸೂಲು ಮಾಡಲು ಸೂಚನೆ ನೀಡಬೇಕಾಗುತ್ತದೆ ಎಂದು ನ್ಯಾಯಪೀಠ ತಿಳಿಸಿದೆ. ಪ್ರಸ್ತುತ ಪ್ರಕರಣದಲ್ಲಿ ಕಾನೂನು ಇಲಾಖೆ ಆದೇಶಕ್ಕೆ ವಿರುದ್ಧವಾಗಿ ಗೃಹ ಇಲಾಖೆ ಪ್ರಕರಣ ದಾಖಲಿಸಿದೆ. ಆನಂತರ ಮೇಲ್ಮನವಿ ಬಳಿಕ ಪುನರ್ ಪರಿಶೀಲನಾ ಅರ್ಜಿಗಳನ್ನು ಸಲ್ಲಿಸಿದೆ ಮತ್ತು ಇದಕ್ಕೆ ಇಲಾಖೆಯ ಮುಖ್ಯಸ್ಥರು ಲಿಖಿತ ರೂಪದಲ್ಲಿ ಕಾರಣಗಳನ್ನು ದಾಖಲಿಸಬೇಕಿತ್ತು.
ಆ ರೀತಿಯಲ್ಲಿ ಸಲ್ಲಿಸಿದ್ದ ಅರ್ಜಿ/ಮೇಲ್ಮನವಿಯನ್ನು ಒಂದು ವೇಳೆ ನ್ಯಾಯಾಲಯ ಪುರಸ್ಕರಿಸದಿದ್ದರೆ ಅದಕ್ಕೆ ತಗುಲುವ ವೆಚ್ಚವನ್ನು ಸಂಬಂಧಿಸಿದ ಅಧಿಕಾರಿಗಳ ವೇತನದಿಂದ ವಸೂಲು ಮಾಡಬೇಕು ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ. ವ್ಯಾಜ್ಯ ಪರಿಹಾರ ನೀತಿ 2021 ಅನ್ನು ಕಾನೂನು ಇಲಾಖೆಯು ರೂಪಿಸಿದೆ ಮತ್ತು ಅದನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಮತ್ತು ಅನಗತ್ಯ ಅರ್ಜಿಗಳು, ಮೇಲ್ಮನವಿಗಳು ಇತ್ಯಾದಿಗಳನ್ನು ಭರ್ತಿ ಮಾಡುವುದನ್ನು ತಪ್ಪಿಸಲು ನೀತಿಯ ಬಗ್ಗೆ ಅಧಿಕಾರಿಗಳಿಗೆ ಜಾಗೃತಿ ಮೂಡಿಸಲು ರಾಜ್ಯದಲ್ಲಿ ವಿಭಾಗಾವಾರು ಕಾರ್ಯಾಗಾರಗಳನ್ನು ನಡೆಸುವಂತೆ ನ್ಯಾಯಪೀಠ ನಿರ್ದೇಶನ ನೀಡಿದೆ.