ಕರ್ನಾಟಕ

karnataka

By

Published : Jul 8, 2023, 8:53 AM IST

ETV Bharat / state

ಜುಲೈ 17ರ ವರೆಗೆ ಯಾವುದೇ ಸಭೆ ನಡೆಸದಂತೆ ಒಕ್ಕಲಿಗರ ಸಂಘಕ್ಕೆ ಹೈಕೋರ್ಟ್ ತಾಕೀತು

ಒಕ್ಕಲಿಗರ ಸಂಘವು ಜುಲೈ 17ರ ವರೆಗೆ ಯಾವುದೇ ಸಭೆ ನಡೆಸುವುದು ಮತ್ತು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳದಂತೆ ರಾಜ್ಯ ಹೈಕೋರ್ಟ್ ಸೂಚನೆ ನೀಡಿದೆ.

high court
ಹೈಕೋರ್ಟ್

ಬೆಂಗಳೂರು: ಜುಲೈ 17ರ ವರೆಗೆ ಒಕ್ಕಲಿಗರ ಸಂಘದಲ್ಲಿ ಸಭೆ ನಡೆಸುವುದು ಹಾಗೂ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳದಂತೆ ಹೈಕೋರ್ಟ್ ತಾಕೀತು ಮಾಡಿದೆ. ಸಂಘದ ಸದಸ್ಯರಾದ ಹಾಸನ ಜಿಲ್ಲೆಯ ಸಂಕ್ಲಾಪುರದ ಎಸ್.ಎಸ್.ರಘುಗೌಡ ಸೇರಿದಂತೆ ನಾಲ್ವರು ಸದಸ್ಯರು ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೆಚ್. ಪಿ. ಸಂದೇಶ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ನೀಡಿದೆ.

ವಿಚಾರಣೆ ವೇಳೆ ಪ್ರತಿವಾದಿಗಳಲ್ಲಿ ಒಬ್ಬರಾಗಿರುವ ಕೆಂಚಪ್ಪಗೌಡರ ಪರ ವಕೀಲರು, ಸಂಘದ ಸಭೆ ನಡೆಸುವುದಕ್ಕೆ ಸಂಬಂಧಿಸಿದಂತೆ ಎರಡೂ ಬಣಗಳು ಯಾವುದೇ ನಿರ್ಧಾರ ತೆಗೆದುಕೊಳ್ಳದಂತೆ ನಿರ್ದೇಶನ ನೀಡಬೇಕು. ಇಲ್ಲವಾದಲ್ಲಿ ರೆಸಾರ್ಟ್ ರಾಜಕಾರಣಕ್ಕೆ ದಾರಿ ಮಾಡಿಕೊಡಲಿದೆ ಎಂದು ನ್ಯಾಯಪೀಠಕ್ಕೆ ಕೋರಿದರು.

ಇದನ್ನು ಪರಿಗಣಿಸಿ ಪೀಠ, ಬಾಲಕೃಷ್ಣ ನೇತೃತ್ವದ ಗುಂಪು 17ರ ವರೆಗೆ ಯಾವುದೇ ನಿರ್ಧಾರ ತೆಗೆದುಕೊಳ್ಳಬಾರದು. ಹೈಕೋರ್ಟ್ ಮೆಟ್ಟಿಲೇರಿದ ಸದಸ್ಯರನ್ನು ಹೊರತು ಪಡಿಸಿ ಉಳಿದ ಸದಸ್ಯರಿಗೆ ಪೂರ್ವ ನೋಟಿಸ್ ನೀಡಿ ಅವಿಶ್ವಾಸ ನಿರ್ಣಯ ಮಂಡಿಸುವಂತೆ ನಿರ್ದೆಶನ ನೀಡಿ ವಿಚಾರಣೆಯನ್ನು ಮುಂದೂಡಿತು.

ಸಂಘದ ನಡವಳಿಕೆಗಳ ಕುರಿತು ಅಸಮಾಧಾನ: ಒಕ್ಕಲಿಗರ ಸಂಘದ ಕುರಿತು ಪ್ರತಿಕ್ರಿಯಿಸಿರುವ ಪೀಠ, ದೇಶದ ವ್ಯವಸ್ಥೆ ಕೆಟ್ಟು ಹೋಗಿದ್ದು, ಎಲ್ಲೆಡೆ ಕುದುರೆ ವ್ಯಾಪಾರ ನಡೆಯುತ್ತಿದೆ. ಇದನ್ನೆಲ್ಲಾ ಹೇಳಲು ನನಗೆ ನಾಚಿಕೆಯಾಗುತ್ತಿದೆ. ಸಂಘದಲ್ಲಿ ಮೆಡಿಕಲ್ ಸೀಟುಗಳನ್ನು ಅನಿವಾಸಿ ಭಾರತೀಯರಿಗೆ ಕೋಟಿಗಟ್ಟಲೇ ರೂಪಾಯಿಗಳಿಗೆ ಮಾರಿಕೊಳ್ಳಲಾಗುತ್ತಿದೆ. ಇದಕ್ಕಾಗಿಯೇ ಈ ಕುಸ್ತಿ ನಡೆಯುತ್ತಿದೆ. 1904ರಲ್ಲಿ ಸ್ಥಾಪನೆಗೊಂಡ ಈ ಸಂಘದ ಮೂಲ ಉದ್ದೇಶಗಳೇ ಇಂದು ಮರೆಯಾಗಿವೆ. ಸಂಘದ ಸದಸ್ಯರ ಆತ್ಮಾವಲೋಕನಕ್ಕೆ ಇದು ಸಕಾಲವಾಗಿದೆ ಎಂದಿತು.

ನನ್ನ ಮಗಳಿಗೆ ಕಿಮ್ಸ್‌ನಲ್ಲಿ (ಕೆಂಪೇಗೌಡ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ) ವೈದ್ಯಕೀಯ ಪದವಿಗೆ ಸೇರಿಸುವಂತೆ ನನ್ನನ್ನು ಬಲ್ಲವರೊಬ್ಬರು ಸಲಹೆ ನೀಡಿದ್ದರು. ಆದರೆ, ಸಂಘದೊಳಗಿನ ಕಿತ್ತಾಟ ನೋಡಿ ಇವರ ಸಹವಾಸವೇ ಬೇಡ ಎಂದು ಕಿಮ್ಸ್‌ನಿಂದ ದೂರ ಉಳಿದೆ. ಬಂಡವಾಳ ಹಾಕಿ ಅದನ್ನು ವಾಪಸ್​ ತೆಗೆಯುವ ಪ್ರವೃತ್ತಿ ನೋಡಿದರೆ ಹೇಸಿಗೆ ಹುಟ್ಟಿಸುತ್ತದೆ ಎಂದು ನ್ಯಾಯಮೂರ್ತಿ ಬೇಸರ ವ್ಯಕ್ತಪಡಿಸಿದರು.

ಇದನ್ನೂ ಓದಿ :ಒಕ್ಕಲಿಗ ಸಂಘದ ಕಾರ್ಯಕಾರಿ ಸಮಿತಿ ಸಭೆ ಪ್ರಶ್ನಿಸಿದ್ದ ಅರ್ಜಿ ವಿಚಾರಣೆ: ತೀರ್ಪು ಕಾಯ್ದಿರಿಸಿದ ಹೈಕೋರ್ಟ್

ಪ್ರಕರಣದ ಹಿನ್ನೆಲೆ ಏನು?: ಸಂಘದ ನಿಕಟಪೂರ್ವ ಅಧ್ಯಕ್ಷ ಸಿ.ಎನ್.ಬಾಲಕೃಷ್ಣ ಮತ್ತು ಕಾರ್ಯದರ್ಶಿ ಕೋನಪ್ಪ ರೆಡ್ಡಿ ನೇತೃತ್ವದ ಕಾರ್ಯಕಾರಿ ಸಮಿತಿಯ ವಿರುದ್ಧ ಬಿ.ಕೆಂಚಪ್ಪಗೌಡರ ಗುಂಪು 2023 ರ ಮೇ 29 ರಂದು ಅವಿಶ್ವಾಸ ಗೊತ್ತುವಳಿ ಮಂಡಿಸಿತ್ತು. ಈ ಗೊತ್ತುವಳಿಯನ್ನು ಬಾಲಕೃಷ್ಣ ನೇತೃತ್ವದ ಸಮಿತಿ ಬಲವಾಗಿ ವಿರೋಧಿಸಿ, ಯಾರಿಗೂ ಪೂರ್ವ ನೋಟಿಸ್ ನೀಡದೆ ಕಾನೂನುಬಾಹಿರವಾಗಿ ಸಭೆ ಕರೆಯಲಾಗಿದೆ ಎಂದು ಆಕ್ಷೇಪಿಸಿತ್ತು. ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿಲಾಗಿತ್ತು. ಈ ನೂತನ ಸಮಿತಿ 2023 ರ ಜುಲೈ 5 ರಂದು ಕಾರ್ಯಕಾರಿ ಸಮಿತಿಯ ಸಭೆಯನ್ನು ಕರೆದಿತ್ತು. ಈ ಸಭೆಗೆ ಎಸ್.ಆರ್.ಕೃಷ್ಣಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಧ್ಯಂತರ ತಡೆ ನೀಡಿತ್ತು.

ಇದನ್ನೂ ಓದಿ :ಒಕ್ಕಲಿಗರ ಸಂಘ ಕೂಡಲೇ ಮೂರು ಜನರ ಮೇಲೆ ಎಫ್​ಐಆರ್ ದಾಖಲಿಸಲಿ: ಕೆಪಿಸಿಸಿ ಮಾಧ್ಯಮ ವಕ್ತಾರ ಎಂ. ಲಕ್ಷ್ಮಣ್

ABOUT THE AUTHOR

...view details