ಕರ್ನಾಟಕ

karnataka

ETV Bharat / state

ಪಿಎಸ್‌ಐ ನೇಮಕಾತಿ ಹಗರಣ: ಮರು ಪರೀಕ್ಷೆ ಪ್ರಶ್ನಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್

PSI recruitment scam: ಪಿಎಸ್​ಐ ನೇಮಕಾತಿಗೆ ನಡೆದ ಪರೀಕ್ಷೆ ರದ್ದುಗೊಳಿಸಿ, ಮರು ಪರೀಕ್ಷೆಗೆ ಆದೇಶಿಸಿದ್ದ ಸರ್ಕಾರದ ಕ್ರಮ ಪ್ರಶ್ನಿಸಿ ಅಭ್ಯರ್ಥಿಗಳು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

High Court orders re-examination of PSI posts
High Court orders re-examination of PSI posts

By ETV Bharat Karnataka Team

Published : Nov 10, 2023, 1:41 PM IST

Updated : Nov 10, 2023, 8:18 PM IST

ಬೆಂಗಳೂರು: ಪೊಲೀಸ್ ಸಬ್ ಇನ್‌ಸ್ಪೆಕ್ಟರ್ (ಪಿಎಸ್‌ಐ) ನೇಮಕಾತಿ ಪರೀಕ್ಷಾ ಅಕ್ರಮದ ಆರೋಪ ಎದುರಾದ ಹಿನ್ನೆಲೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ರದ್ದುಪಡಿಸಿದ್ದ ಕ್ರಮವನ್ನು ಪ್ರಶ್ನಿಸಿ ಹಲವು ಅಭ್ಯರ್ಥಿಗಳು ಸಲ್ಲಿಸಿದ್ದ ಅರ್ಜಿಯನ್ನು ಇಂದು ಹೈಕೋರ್ಟ್ ವಜಾಗೊಳಿಸಿದೆ.

ನೇಮಕಾತಿ ಸಂಬಂಧದ ಅಧಿಸೂಚನೆ ರದ್ದುಪಡಿಸಿ, ನೂತನವಾಗಿ ಪರೀಕ್ಷೆ ನಡೆಸಲು ಸರ್ಕಾರ ಮುಂದಾಗಿತ್ತು. ಇದನ್ನು ಪ್ರಶ್ನಿಸಿ ಆರೋಪರಹಿತ ಹಲವು ಅಭ್ಯರ್ಥಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಮತ್ತು ನ್ಯಾಯಮೂರ್ತಿ ಶಿವಶಂಕರೇ ಗೌಡ ಅವರಿದ್ದ ನ್ಯಾಯಪೀಠ ಮಹತ್ವದ ಆದೇಶ ನೀಡಿತು.

ರಾಜ್ಯ ಸರ್ಕಾರವು ಸ್ವತಂತ್ರ ಸಂಸ್ಥೆಯಿಂದ ಹೊಸದಾಗಿ ಲಿಖಿತ ಪರೀಕ್ಷೆ ನಡೆಸಬಹುದು. ಪಾರದರ್ಶಕವಾಗಿ ಪರೀಕ್ಷೆ ನಡೆಸುವುದನ್ನು ಸರ್ಕಾರ ಖಾತರಿಪಡಿಸಬೇಕು ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ಹೇಳಿದೆ.

ಆದೇಶದಲ್ಲಿ ಏನಿದೆ? 'ಪಿಎಸ್‌ಐ ನೇಮಕ ಪರೀಕ್ಷೆಯಲ್ಲಿ ಹಲವು ರೀತಿಯ ಅಕ್ರಮಗಳ ಆರೋಪಗಳಿವೆ. ಪ್ರಶ್ನೆಪತ್ರಿಕೆ ಮೊದಲೇ ಸೋರಿಕೆಯಾದ ಕಾರಣದಿಂದಲೇ ಪ್ರಶ್ನೆಪತ್ರಿಕೆಗೆ ಅನುಗುಣವಾಗಿ ಅಭ್ಯರ್ಥಿಗೆ ಬ್ಲೂಟೂತ್ ಮೂಲಕ 3ನೇ ವ್ಯಕ್ತಿ ಉತ್ತರಿಸಿರುವ ಸಾಧ್ಯತೆ ಇದೆ. ನೇಮಕ ವಿಭಾಗದ ಪೊಲೀಸ್ ಎಡಿಜಿಪಿಯೇ ಉತ್ತರಪತ್ರಿಕೆ ಒಎಂಆರ್ ಶೀಟ್‌ಗಳನ್ನು ತಿರುಚಿರುವುದರಿಂದ ಪರೀಕ್ಷೆಯಲ್ಲಿನ ಸಾರ್ವಜನಿಕ ವಿಶ್ವಾಸವೇ ಹಾಳಾಗಿದೆ. 53 ಅಭ್ಯರ್ಥಿಗಳ ವಿರುದ್ಧ ಆರೋಪಪಟ್ಟಿ ದಾಖಲಾಗಿದ್ದು, 52 ಅಭ್ಯರ್ಥಿಗಳನ್ನು ಡಿಬಾರ್‌ ಮಾಡಲಾಗಿದೆ. ಬ್ಲೂಟೂತ್ ಬಳಕೆಯಾಗಿರುವುದರಿಂದ ಇನ್ನೂ ಕೆಲವರು ಅಕ್ರಮದಲ್ಲಿ ಭಾಗಿಯಾದ ಸಂಶಯಗಳಿವೆ. ಹೀಗಾಗಿ ಕಳಂಕಿತರು, ಕಳಂಕಿತರಲ್ಲದವರನ್ನು ಪ್ರತ್ಯೇಕಿಸಲು ಸಾಧ್ಯವಿಲ್ಲ' ಎಂದು ನ್ಯಾಯಾಲಯ ಹೇಳಿದೆ.

ಬ್ಲೂಟೂತ್ ಸಿದ್ಧಾಂತ ತಳ್ಳಿಹಾಕಲಾಗದು: 'ಅಕ್ರಮಕ್ಕೆ ಸಂಬಂಧಿಸಿದಂತೆ ಬ್ಲೂಟೂತ್ ಬಳಕೆ ಥಿಯರಿಯನ್ನು ಈ ಹಂತದಲ್ಲಿ ಸಂಪೂರ್ಣವಾಗಿ ತಳ್ಳಿಹಾಕಲಾಗದು. ಏಕೆಂದರೆ ಇದರ ಸಂಬಂಧ ಕ್ರಿಮಿನಲ್ ಕೋರ್ಟ್‌ಗಳಲ್ಲಿ ಹಲವು ಪ್ರಕರಣಗಳು ಬಾಕಿ ಇವೆ. ಬ್ಲೂಟೂತ್ ಬಳಸಿ ಯಾವುದೇ ಅಕ್ರಮ ನಡೆದಿಲ್ಲವೆಂದು ಸ್ಪಷ್ಟವಾಗಿ ದೃಢಪಡುವವರೆಗೂ ಪರೀಕ್ಷೆಯನ್ನು ರದ್ದು ಮಾಡಿರುವ ಆಡಳಿತದ ಆದೇಶದಲ್ಲಿ ತಪ್ಪಾಗಿದೆಯೆಂದು ಹೇಳಲಾಗದು. ಈಗಲೇ ಕೋರ್ಟ್ ಬ್ಲೂಟೂತ್ ಬಳಕೆ ಬಗ್ಗೆ ಏನಾದರೂ ದಾಖಲಿಸಿದರೆ ಅದು ಅದೀನ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳ ಮೇಲೆ ಪರಿಣಾಮ ಬೀರುತ್ತದೆ' ಎಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ.

ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ಪ್ರಕರಣ ಬೆಳಕಿಗೆ ಬಂದ ಬಳಿಕ ಬ್ಲೂಟೂತ್ ಹಾಗೂ ಒಎಂಅರ್ ಮೂಲಕ ಅಕ್ರಮ ಬೆಳಕಿಗೆ ಬಂದಿದೆ ಎಂದು ತಿಳಿದುಬಂದಿತ್ತು. ಆದರೆ, ತನಿಖೆ ವೇಳೆ ಅಕ್ರಮ ನಡೆಸಲು ವಿವಿಧ ಆಯಾಮಗಳಲ್ಲಿ ಅಕ್ರಮ ನಡೆಸಿದ್ದಾರೆ ಎಂಬ ಅಂಶ ಗೊತ್ತಾಗಿದೆ. ಆದ ಕಾರಣ, ಪ್ರಕರಣಲ್ಲಿ ಯಾರು ತಪ್ಪಿತಸ್ಥರು ಹಾಗೂ ಯಾರು ತಪ್ಪಿತಸ್ಥರಲ್ಲ ಎಂಬುದನ್ನು ಪತ್ತೆ ಹಚ್ಚುವುದಕ್ಕೆ ಸಾಧ್ಯವಾಗುವುದಿಲ್ಲ. ಹೀಗಾಗಿ ಮರುಪರೀಕ್ಷೆ ನಡೆಸುವುದು ಸೂಕ್ತ ಎಂದು ಪೀಠದ ಮುಂದೆ ವಾದ ಮಂಡಿಸಿದ್ದರು.

ಅರ್ಜಿದಾರರ ಪರ ವಕೀಲರು, ಪಿಎಸ್‌ಐ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ತಮ್ಮ ಕಕ್ಷಿದಾರರ ವಿರುದ್ಧ ರಾಜ್ಯದ ಯಾವುದೇ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿಲ್ಲ. ಆರೋಪಿಗಳ ವಿರುದ್ಧ ಯಾವೆಲ್ಲಾ ಠಾಣೆಗಳಲ್ಲಿ ಪ್ರಕರಣ ದಾಖಲಾಗಿವೆ. ಅವುಗಳ ಸ್ಥಿತಿಗತಿ ಕುರಿತ ಮಾಹಿತಿ ಒಳಗೊಂಡ ಪ್ರಮಾಣಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದ್ದರು.

ಪ್ರಕರಣದ ಹಿನ್ನೆಲೆ:545 ಪಿಎಸ್‌ಐ ಹುದ್ದೆಗಳ ನೇಮಕಾತಿಗೆ ನಡೆದ ಲಿಖಿತ ಪರೀಕ್ಷೆಯಲ್ಲಿ ಅಕ್ರಮದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಮರುಪರೀಕ್ಷೆ ನಡೆಸುವುದಾಗಿ 2022ರ ಏ.29ರಂದು ಅಂದಿನ ಬಿಜೆಪಿ ಸರ್ಕಾರ ಆದೇಶ ಹೊರಡಿಸಿತ್ತು. ಈ ಆದೇಶ ರದ್ದುಪಡಿಸಬೇಕು, ಕಳಂಕರಹಿತ ಮತ್ತು ಕಳಂಕಿತ ಅಭ್ಯರ್ಥಿಗಳನ್ನು ಪ್ರತ್ಯೇಕಿಸಿ ಹಿಂದಿನ ಅಧಿಸೂಚನೆ ಪ್ರಕಾರವೇ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಿ, ನೇಮಕಾತಿ ಆದೇಶ ನೀಡಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಕೆಲ ಅಭ್ಯರ್ಥಿಗಳು ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಟಿ) ಮೆಟ್ಟಿಲೇರಿದ್ದರು. ಆ ಅರ್ಜಿಗಳನ್ನು ಕೆಎಟಿ 2022ರ ಜು.19ರಂದು ವಜಾಗೊಳಿಸಿತ್ತು. ಇದರಿಂದ, ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಅರ್ಜಿಯನ್ನು 2022ರ ಸೆ.28ರಂದು ವಿಚಾರಣೆ ನಡೆಸಿದ್ದ ಹೈಕೋರ್ಟ್, ಮರು ಪರೀಕ್ಷೆ ನಡೆಸುವ ಸರ್ಕಾರದ ನಿರ್ಧಾರಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿತ್ತು.

ಇದನ್ನೂ ಓದಿ: ಪಿಎಸ್ಐ ಪರೀಕ್ಷಾ ನೇಮಕಾತಿ‌ ಹಗರಣ; ಈ ತಿಂಗಳೊಳಗೆ ಸರ್ಕಾರಕ್ಕೆ ವರದಿ - ನ್ಯಾ. ಬಿ ವೀರಪ್ಪ

Last Updated : Nov 10, 2023, 8:18 PM IST

ABOUT THE AUTHOR

...view details