ಸುಮಾರು 18 ವರ್ಷಗಳ ಕಾಲ ಸೇವೆ ಸಲ್ಲಿಸಿದ ಸರ್ಕಾರಿ ಉದ್ಯೋಗಿಯನ್ನು 50 ರೂಪಾಯಿ ಲಂಚ ಸ್ವೀಕರಿಸಿದ್ದಕ್ಕಾಗಿ ಕಡ್ಡಾಯ ನಿವೃತ್ತಿ ಶಿಕ್ಷೆ ನೀಡಿರುವುದು ಸಮಂಜಸವಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಈ ಕುರಿತಂತೆ ಎಂ.ಎಸ್ ಕಡ್ಕೋಳ್ ಎಂಬುವರು ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಜಿ ಪಂಡಿತ್ ಹಾಗೂ ನ್ಯಾಯಮೂರ್ತಿ ಅನಂತ್ ರಾಮನಾಥ್ ಹೆಗ್ಡೆ ಅವರಿದ್ದ ವಿಭಾಗೀಯ ಪೀಠ ಶಿಕ್ಷೆಯನ್ನು ರದ್ದುಪಡಿಸಿದೆಯಲ್ಲದೇ, ಪ್ರಕರಣವನ್ನು ಮತ್ತೆ ಹೊಸದಾಗಿ ಪರಿಗಣಿಸಿ 2 ತಿಂಗಳಲ್ಲಿ ಕ್ರಮ ಕೈಗೊಳ್ಳುವಂತೆ ಶಿಸ್ತುಪ್ರಾಧಿಕಾರಕ್ಕೆ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ:ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಎಂಜಿನಿಯರ್ ಚಂದ್ರಾಚಾರಿ ಎಂಬುವರನ್ನು 1998ರಲ್ಲಿ ಬ್ಯಾಡಗಿಯಿಂದ ಧಾರವಾಡಕ್ಕೆ ವರ್ಗಾವಣೆ ಮಾಡಲಾಗಿತ್ತು. ಈ ವರ್ಗಾವಣೆ ಕಡತವನ್ನು ವಿಲೇವಾರಿ ಮಾಡಲು 150 ರೂಪಾಯಿ ಲಂಚ ಕೇಳಿದ್ದರೆಂದು ದೂರು ನೀಡಲಾಗಿತ್ತು.
ಓದಿ: ಬುಧವಾರದಿಂದ ಪಿಯುಸಿ, ಡಿಗ್ರಿ ಕಾಲೇಜು ಆರಂಭಿಸಲು ಸರ್ಕಾರದ ನಿರ್ಧಾರ
ಅದರಂತೆ 50 ರೂಪಾಯಿ ಲಂಚ ಪಡೆಯುವ ವೇಳೆ ಲೋಕಾಯುಕ್ತ ಪೊಲೀಸರು ಬಂಧಿಸಿ, ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಸೆಕ್ಷನ್ 7, 13(1) ಹಾಗೂ 13(2) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಆ ಬಳಿಕ ಇಲಾಖಾ ತನಿಖೆ ಕೂಡ ನಡೆಸಲಾಗಿತ್ತು. ತನಿಖಾಧಿಕಾರಿ ದೋಷಾರೋಪಣೆ ಸಲ್ಲಿಸಿದ ಬಳಿಕ ಶಿಸ್ತುಪ್ರಾಧಿಕಾರ 2004ರ ಸೆಪ್ಟೆಂಬರ್ 7ರಂದು ಕಡ್ಡಾಯ ನಿವೃತ್ತಿ ಶಿಕ್ಷೆ ವಿಧಿಸಿತ್ತು.
ಈ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು 2016ರ ಜೂನ್ 1ರಂದು ಕರ್ನಾಟಕ ಆಡಳಿತ ನ್ಯಾಯಮಂಡಳಿ ಕೂಡ ತಿರಸ್ಕರಿಸಿತ್ತು. ಈ ಹಿನ್ನೆಲೆ ಕಡ್ಕೋಳ್ ಹೈಕೋರ್ಟ್ ಮೊರೆ ಹೋಗಿದ್ದರು. ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, 50 ರೂಪಾಯಿ ಲಂಚ ಪಡೆದಿದ್ದಾರೆ ಎಂಬ ಆರೋಪಕ್ಕೆ ಸೇವೆಯಿಂದ ಕಡ್ಡಾಯ ನಿವೃತ್ತಿ ನೀಡಿರುವ ಕ್ರಮ ಸೂಕ್ತವಲ್ಲ. ದೂರುದಾರರ ಯಾವುದೇ ಕೆಲಸ ಅರ್ಜಿದಾರರ ಮುಂದೆ ಇರಲಿಲ್ಲ. ಅರ್ಜಿದಾರರ ವಿರುದ್ಧ ಲಂಚ ಕೇಳಿದ್ದಾರೆ ಎಂಬ ಯಾವುದೇ ದೂರು ಇರಲಿಲ್ಲ. ಹಾಗಿದ್ದೂ ಅವರ ಬಳಿ ಲಂಚ ನೀಡಿದ್ದಾರೆ ಎನ್ನಲಾದ 50 ರೂ ಸಿಕ್ಕಿತ್ತು ಎಂಬ ಕಾರಣಕ್ಕೆ ಕಡ್ಡಾಯ ನಿವೃತ್ತಿ ಸರಿಯಲ್ಲ ಎಂದು ವಾದಿಸಿದ್ದರು.