ಬೆಂಗಳೂರು : ಸರ್ಕಾರಿ ಅಧಿಕಾರಿಗಳು ನಿವೃತ್ತರಾಗಿ ನಾಲ್ಕು ವರ್ಷ ಕಳೆದ ಬಳಿಕ ಕರ್ನಾಟಕ ನಾಗರಿಕ ಸೇವೆಗಳ ಕಾನೂನಿನ ನಿಯಮ 214 (2) (ಬಿ)ದಡಿ ಯಾವುದೇ ತನಿಖೆ ನಡೆಸಲು ಅವಕಾಶವಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ.
ಕರ್ನಾಟಕ ಗೃಹ ಮಂಡಳಿಯಲ್ಲಿ ನಿವೃತ್ತ ಕಾರ್ಯಕಾರಿ ಎಂಜಿನಿಯರ್ ಆಗಿದ್ದ ಬೆಂಗಳೂರಿನ ಅನಿಲ್ ಕುಮಾರ್ ಮತ್ತು ಟಿ ಮಲ್ಲಣ್ಣ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಸ್ ಜಿ ಪಂಡಿತ್ ನೇತೃತ್ವದ ಏಕ ಸದಸ್ಯ ಪೀಠವು ಅರ್ಜಿಯನ್ನು ಮಾನ್ಯ ಮಾಡಿದೆ. ನಿವೃತ್ತ ಅಧಿಕಾರಿಗಳ ವಿರುದ್ಧ ತನಿಖೆಗಾಗಿ ಹೊರಡಿಸಿದ್ದ ಆದೇಶವನ್ನು ರದ್ದು ಪಡಿಸಿದೆ.
ಕರ್ನಾಟಕ ನಾಗರೀಕ ಸೇವೆಗಳ ಕಾನೂನಿನ ನಿಯಮ 214 (2)(ಬಿ)(ii)ದಡಿ ತನಿಖೆ ಆರಂಭಿಸಲು ದೋಷಾರೋಪ ಜ್ಞಾಪನಾ ಪತ್ರ ನಿರ್ಬಂಧಿಸಲಾಗಿದೆ. ಹೀಗಾಗಿ, ದೋಷಾರೋಪ ಜ್ಞಾಪನಾ ಪತ್ರ ಅಮಾನ್ಯವಾಗಲಿದೆ ಎಂದು ಪೀಠ ತನ್ನ ಆದೇಶದಲ್ಲಿ ಹೇಳಿದೆ. ನಾಲ್ಕು ವರ್ಷಗಳ ಹಿಂದೆ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ಜಿದಾರರ ವಿರುದ್ಧ ತನಿಖೆ ಆರಂಭಿಸುವುದಕ್ಕೆ ಸಂಬಂಧಿಸಿದಂತೆ ದೋಷಾರೋಪ ಮತ್ತು ತನಿಖಾ ಪ್ರಕ್ರಿಯೆ ಕುರಿತಾದ ಜ್ಞಾಪನಾ ಪತ್ರವನ್ನು 2022ರ ಜೂನ್ 21ರಂದು ಹೊರಡಿಸಲಾಗಿತ್ತು. ಇದನ್ನು ಹೈಕೋರ್ಟ್ ನಲ್ಲಿ ಅರ್ಜಿದಾರರು ಪ್ರಶ್ನಿಸಿದ್ದರು.
ಅರ್ಜಿ ದಾರರು ಕ್ರಮವಾಗಿ 2018ರ ಜೂನ್ 30 ಮತ್ತು 2020ರ ಆಗಸ್ಟ್ 31ರಂದು ನಿವೃತ್ತರಾಗಿದ್ದರು. ಬಳಿಕ ಅವರ ವಿರುದ್ಧ 2022ರ ಜೂನ್ 21ರಂದು ದೋಷಾರೋಪ ಜ್ಞಾಪನಾ ಪತ್ರ ಜಾರಿಗೊಳಿಸಿತ್ತು. 2006ರಲ್ಲಿ ನಡೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು. ಇದನ್ನು ಪ್ರಶ್ನಿಸಿದ್ದ ಅರ್ಜಿದಾರರು, ಕೆಸಿಎಸ್ಆರ್ ನಿಯಮಗಳ ಅಡಿ ದೋಷಾರೋಪ ನಿರ್ಬಂಧಿಸಿದ್ದು, ವಜಾಕ್ಕೆ ಅರ್ಹವಾಗಿದೆ ಎಂದು ವಾದಿಸಿದ್ದರು. ಇದನ್ನು ಪುರಸ್ಕರಿಸಿರುವ ನ್ಯಾಯಪೀಠ, ಅರ್ಜಿಯನ್ನು ಇತ್ಯರ್ಥ ಪಡಿಸಿ ಆದೇಶಿದೆ.
ಇದನ್ನೂ ಓದಿ:ಸಿಸೋಡಿಯಾ ಮತ್ತು ಜೈನ್ ಕಡೆಯಿಂದ ಕುಟುಂಬಸ್ಥರಿಗೆ ಬೆದರಿಕೆ ಕರೆ.. ಸುಕೇಶ್ ಗಂಭೀರ ಆರೋಪ