ಬೆಂಗಳೂರು:ವ್ಯಕ್ತಿಯೊಬ್ಬರಿಗೆ ಸೇರಿದ ಜಮೀನನ್ನು ಸ್ವಾಧೀನಪಡಿಸಿಕೊಂಡು 15 ವರ್ಷ ಕಳೆದರೂ ಪರಿಹಾರ ನೀಡದ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ನಡೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಹೈಕೋರ್ಟ್, "ಜನರ ಭೂಮಿಯ ವಿಚಾರದಲ್ಲಿ ಸರ್ಕಾರ ಲೂಟಿಕೋರಂತೆ ವರ್ತಿಸಬಾರದು" ಎಂದು ಖಡಕ್ ಆಗಿ ಹೇಳಿದೆ. ತಮಗೆ ಸೇರಿದ ಭೂಮಿಯನ್ನು ಕೈಗಾರಿಕಾ ಪ್ಲ್ಯಾಟ್‌ಗಳನ್ನಾಗಿ ಮಾಡಲು ಕೆಐಎಡಿಬಿ ಸ್ವಾಧೀನಪಡಿಸಿಕೊಂಡಿದೆ. ಆದರೆ, ಈವರೆಗೂ ಭೂ ಪರಿಹಾರ ನೀಡಿಲ್ಲ ಎಂದು ಆರೋಪಿಸಿ ಬೆಂಗಳೂರಿನ ನಿವಾಸಿಗಳಾದ ಎಂ.ವಿ.ಗುರುಪ್ರಸಾದ್ ಮತ್ತು ನಂದಿನಿ ಎಂಬವರು ಹೈಕೋರ್ಟ್ ಮೆಟ್ಟಿಲೇರಿದ್ದರು. ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಪೀಠ ಶನಿವಾರ ಈ ಅರ್ಜಿ ವಿಚಾರಣೆ ನಡೆಸಿತು.
ಸಾಂವಿಧಾನಿಕ ಆಸ್ತಿಯ ಹಕ್ಕು ಉಲ್ಲಂಘನೆ:ಅಲ್ಲದೆ, "ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಮತ್ತು ಅದರ ಅಧಿಕಾರಿಗಳ ನಡತೆ ನ್ಯಾಯಸಮ್ಮತ ಮಾನದಂಡಕ್ಕೆ ಅನುಗುಣವಾಗಿಲ್ಲ. ಈ ನಡವಳಿಕೆಯು ಸಂವಿಧಾನಕ್ಕೆ ವಿರುದ್ಧವಾಗಿ ಊಳಿಗಮಾನ್ಯ ಧೋರಣೆಯ ಸಂಕೋಲೆಗಳನ್ನು ಬಲಪಡಿಸುವಂತಿದೆ. ಕೆಐಎಡಿಬಿ ನಡೆ ಸಂವಿಧಾನದ ಪರಿಚ್ಛೇದ 300ಎ ಅಡಿಯಲ್ಲಿ ಲಭ್ಯವಿರುವ ಆಸ್ತಿ ಹಕ್ಕು ಉಲ್ಲಂಘಿಸಿದಂತಾಗಿದೆ. ಕಲ್ಯಾಣ ರಾಜ್ಯದ ಉದ್ದೇಶವನ್ನೇ ಕಸಿದುಕೊಂಡಂತಾಗಿದೆ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಒಂದೂವರೆ ದಶಕವಾದರೂ ಕೆಐಎಡಿಬಿ ಸೂಕ್ತ ಪರಿಹಾರ ಪಾವತಿಸದಿರುವುದರಿಂದ ಅರ್ಜಿದಾರರಿಗೆ ಪರಿಹಾರದ ಜೊತೆಗೆ ಹೆಚ್ಚಿನ ಬಡ್ಡಿ ಮತ್ತು ಇತರೆ ಲಾಭಾಂಶ ನೀಡಬೇಕು. 2013ರ ಕಾಯಿದೆ ಪ್ರಕಾರ ಶೇ.50ರಷ್ಟು ಪರಿಹಾರ ಮೊತ್ತವನ್ನು 8 ವಾರಗಳಲ್ಲಿ ಮೂಲ ಆಸ್ತಿ ಮಾಲೀಕರಿಗೆ ಪಾವತಿಸಬೇಕು. ಅಲ್ಲದೆ, ಒಟ್ಟಾರೆ ಮೊತ್ತಕ್ಕೆ ವಾರ್ಷಿಕ ಶೇ.12ರ ಬಡ್ಡಿ ಕೂಡ ಅರ್ಜಿದಾರರಿಗೆ ಪಾವತಿಸಬೇಕು ಎಂದು ಕೋರ್ಟ್ ಆದೇಶಿಸಿದೆ.