ಕರ್ನಾಟಕ

karnataka

ETV Bharat / state

STP ಘಟಕ ಕಾಮಗಾರಿ ಬದಲಾವಣೆಗೆ ಹೈಕೋರ್ಟ್ ಗರಂ.. ವಿಚಾರಣೆಗೆ ಹಾಜರಾಗಲು ಬೆಳಗಾವಿ ಆಯುಕ್ತರಿಗೆ ತಾಕೀತು.. - ಬೆಳಗಾವಿ ಪಾಲಿಕೆ ಆಯುಕ್ತರ ಹಾಜರಿಗೆ ಹೈಕೋರ್ಟ್ ಸೂಚನೆ

ಬೆಳಗಾವಿ ನಗರದ ತ್ಯಾಜ್ಯ ನೀರನ್ನು ಸಂಸ್ಕರಣೆ ಮಾಡುವುದಕ್ಕೆ 1993ರಲ್ಲಿ ಅಲರವಾಡದಲ್ಲಿ ಎಸ್ಟಿಪಿ ಘಟಕ ಸ್ಥಾಪನೆಗೆ ಕಾಮಗಾರಿ ಆರಂಭಿಸಲಾಗಿತ್ತು. ಆದರೀಗ ಅರ್ಧಕ್ಕೆ ಯೋಜನೆ ಕೈಬಿಟ್ಟು, ಬದಲಿ ಪ್ರದೇಶದಲ್ಲಿ ಕಾಮಗಾರಿ ಆರಂಭಿಸಲಾಗಿದೆ. ಅಲರವಾಡದಲ್ಲಿ ನಡೆಸಿದ ಕಾಮಗಾರಿಗೆ ಸುಮಾರು 2.28 ಕೋಟಿ ರೂ. ಖರ್ಚು ಮಾಡಲಾಗಿದೆ. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ..

ಹೈಕೋರ್ಟ್
ಹೈಕೋರ್ಟ್

By

Published : Sep 10, 2021, 10:16 PM IST

ಬೆಂಗಳೂರು :ಬೆಳಗಾವಿಯ ಅಲರವಾಡದಲ್ಲಿ ತ್ಯಾಜ್ಯ ನೀರು ಸಂಸ್ಕರಣಾ ಘಟಕ (ಎಸ್‌ಟಿಪಿ) ಸ್ಥಾಪನೆಗೆ 2 ಕೋಟಿ ರೂ. ಖರ್ಚು ಮಾಡಿದ ನಂತರ ಕಾಮಗಾರಿ ಸ್ಥಗಿತಗೊಳಿಸಿ, ಬದಲಿ ಪ್ರದೇಶದಲ್ಲಿ ಹೊಸ ಘಟಕ ಸ್ಥಾಪಿಸಲು ಕಾಮಗಾರಿ ಕೈಗೊಂಡಿರುವ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ಈ ಕುರಿತು ವಿವರಣೆ ನೀಡಲು ಪಾಲಿಕೆ ಆಯುಕ್ತರು ವಿಚಾರಣೆಗೆ ಖುದ್ದು ಹಾಜರಾಗುವಂತೆ ಸೂಚಿಸಿದೆ.

ಘಟಕ ಸ್ಥಾಪನೆ ಆಕ್ಷೇಪಿಸಿ ಸ್ಥಳೀಯರಾದ ನಾರಾಯಣ ಬೈರು ಹಾಗೂ ಇತರೆ ಐವರು ಸಲ್ಲಿಸಿದ್ದ ಪಿಐಎಲ್ ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ಸಿಜೆ ಸತೀಶ್‌ ಚಂದ್ರ ಶರ್ಮ ನೇತೃತ್ವದ ವಿಭಾಗೀಯ ಪೀಠ ಈ ಸೂಚನೆ ನೀಡಿದೆ. ಅಲ್ಲದೆ, ಈ ಪ್ರಕರಣದ ತನಿಖೆಯನ್ನು ಲೋಕಾಯುಕ್ತ ಸಂಸ್ಥೆಗೆ ವಹಿಸಲಾಗುವುದು ಎಂದು ತಿಳಿಸಿದೆ.

ಕಾಮಗಾರಿಗೆ 2.28 ಕೋಟಿ ರೂ. ಖರ್ಚು ಮಾಡಿದ ನಂತರ ಯೋಜನೆ ಸ್ಥಗಿತಗೊಳಿಸಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಪೀಠ, ಏಕೆ ಯೋಜನೆಯನ್ನು ಅರ್ಧಕ್ಕೆ ಮೊಟಕುಗೊಳಿಸಲಾಗಿದೆ, ಹೀಗೆ ಮಾಡಿದ್ದರಿಂದ ಸಾರ್ವಜನಿಕ ಹಣ ಪೋಲಾಗಲಿಲ್ಲವೇ. ಘಟಕ ಸ್ಥಾಪನೆಗೆ ಮುನ್ನ ಸೂಕ್ತ ಸ್ಥಳ ಎಂಬ ಕುರಿತು ಪರಿಶೀಲಿಸಲಿಲ್ಲವೇ. ಏಕಾಏಕಿ ಯೋಜನೆ ಕೈಗೊಳ್ಳಲಾಯಿತೇ, ವಿವೇಚನೆ ಬಳಸಿಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಅಲ್ಲದೇ, ಕೋಟ್ಯಂತರ ರೂಪಾಯಿ ವೆಚ್ಚ ಮಾಡಿದ ನಂತರ ಕಾಮಗಾರಿ ಸ್ಥಗಿತಗೊಳಿಸಿ ಬೇರೊಂದು ಸ್ಥಳಕ್ಕೆ ಯೋಜನೆ ಸ್ಥಳಾಂತರಿಸಿದ್ದೇಕೆ ಎಂಬ ಕುರಿತು ವಿವರಣೆ ನೀಡಲು ಪಾಲಿಕೆ ಆಯುಕ್ತರು ಮುಂದಿನ ವಿಚಾರಣೆಗೆ ಖುದ್ದು ಹಾಜರಾಗುವಂತೆ ತಾಕೀತು ಮಾಡಿದೆ.

ಪ್ರಕರಣದ ಹಿನ್ನೆಲೆ :ಬೆಳಗಾವಿ ನಗರದ ತ್ಯಾಜ್ಯ ನೀರನ್ನು ಸಂಸ್ಕರಣೆ ಮಾಡುವುದಕ್ಕೆ 1993ರಲ್ಲಿ ಅಲರವಾಡದಲ್ಲಿ ಎಸ್ಟಿಪಿ ಘಟಕ ಸ್ಥಾಪನೆಗೆ ಕಾಮಗಾರಿ ಆರಂಭಿಸಲಾಗಿತ್ತು. ಆದರೀಗ ಅರ್ಧಕ್ಕೆ ಯೋಜನೆ ಕೈಬಿಟ್ಟು, ಬದಲಿ ಪ್ರದೇಶದಲ್ಲಿ ಕಾಮಗಾರಿ ಆರಂಭಿಸಲಾಗಿದೆ. ಅಲರವಾಡದಲ್ಲಿ ನಡೆಸಿದ ಕಾಮಗಾರಿಗೆ ಸುಮಾರು 2.28 ಕೋಟಿ ರೂ. ಖರ್ಚು ಮಾಡಲಾಗಿದೆ. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ABOUT THE AUTHOR

...view details