ಬೆಂಗಳೂರು :ರಾಜ್ಯದಲ್ಲಿ ಸರ್ಕಾರಿ ಶಾಲೆಗಳಲ್ಲಿನ ಮೂಲಸೌಲಭ್ಯ (ಶೌಚಾಲಯ, ಕುಡಿಯುವ ನೀರು) ಗಳ ಕೊರತೆಯನ್ನು ನೀಗಿಸುವಲ್ಲಿ ವಿಫಲವಾಗಿರುವ ಸರ್ಕಾರದ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಹೈಕೋರ್ಟ್, ಪೋಷಕರಿಗೆ ಎರಡು ಹೊತ್ತಿನ ಊಟಕ್ಕಿಲ್ಲದಿದ್ದರೂ ಬೇರೆ ದಾರಿಯಿಲ್ಲದೆ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಹೇಳಿದೆ.
ಶಾಲೆಯಿಂದ ಹೊರಗುಳಿದ ಮಕ್ಕಳ ಕುರಿತಂತೆ ಮಾಧ್ಯಮಗಳ ವರದಿ ಆಧರಿಸಿ ಹೈಕೋರ್ಟ್ ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ನ್ಯಾಯಪೀಠ, ಸರ್ಕಾರದ ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಅಲ್ಲದೆ, ಮುಂದಿನ ಎಂಟು ವಾರಗಳಲ್ಲಿ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಅಗತ್ಯ ಮೂಲ ಸೌಲಭ್ಯಗಳನ್ನು ಕಲ್ಪಿಸಿರುವ ಸಂಬಂಧ ಪ್ರಮಾಣ ಪತ್ರವನ್ನು ಸಲ್ಲಿಸಬೇಕು ಎಂದು ಸೂಚನೆ ನೀಡಿ ವಿಚಾರಣೆ ಮುಂದೂಡಿತು.
ಸರ್ಕಾರ ಉಚಿತ ಬಸ್ ಪ್ರಯಾಣ ಸೇರಿದಂತೆ ಯಾವುದೇ ಸೌಲಭ್ಯಗಳನ್ನು ಕಲ್ಪಿಸಿದರೂ, ನಮಗೆ (ನ್ಯಾಯಪೀಠಕ್ಕೆ) ಅಭ್ಯಂತರವಿಲ್ಲ. ಆದರೆ, ಬಡ ಮಕ್ಕಳ ಶಿಕ್ಷಣಕ್ಕೆ ಅಗತ್ಯ ಮೂಲ ಸೌಲಭ್ಯಗಳುಳ್ಳ ವ್ಯವಸ್ಥೆ ಕಲ್ಪಿಸಬೇಕು ಎಂಬುದೇ ನಮ್ಮ ಆಶಯ ಎಂದು ಪೀಠ ಪ್ರತಿಪಾದಿಸಿತು. ನಮ್ಮ ಸಂವಿಧಾನದ ಪ್ರಕಾರ ಶಿಕ್ಷಣ ಮೂಲಭೂತ ಹಕ್ಕಾಗಿದೆ. ಆದರೆ, ಸರ್ಕಾರಗಳು ಸರ್ಕಾರಿ ಶಾಲೆಗಳಲ್ಲಿ ಈ ಸೌಲಭ್ಯಗಳನ್ನು ಕಲ್ಪಿಸುವುದಕ್ಕೆ ಮುಂದಾಗಿಲ್ಲ. ಇದು ಪರೋಕ್ಷವಾಗಿ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ತಳ್ಳುವಂತೆ ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿತು.
ಅಲ್ಲದೆ, ಶಾಲೆಗಳಲ್ಲಿ ಮೂಲಸೌಕರ್ಯ ಕೊರತೆಯಿರುವ ಅಂಶ ಸರ್ಕಾರದ ಗಮನಕ್ಕೆ ಬಂದಿಲ್ಲವೇ?, 2023ರಲ್ಲಿ ಈ ಅರ್ಜಿ ಸಲ್ಲಿಕೆಯಾಗಿದ್ದು, ವಿಚಾರಣೆ ನಡೆಯುತ್ತಿದೆ. ಈವರೆಗೂ 464 ಶಾಲೆಗಳಲ್ಲಿ ಶೌಚಾಲಯ ಹಾಗೂ 32 ಶಾಲೆಗಳಲ್ಲಿ ಕುಡಿಯಲು ಶುದ್ಧವಾದ ನೀರಿನ ಸೌಲಭ್ಯದ ಕೊರತೆಯಿದೆ. ಆದರೂ ಸರ್ಕಾರ ಈ ಬಗ್ಗೆ ಕ್ರಮಕ್ಕೆ ಮುಂದಾಗಿಲ್ಲ. ಆ ಮೂಲಕ ಪರೋಕ್ಷವಾಗಿ ಖಾಸಗಿ ಶಾಲೆಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ಪೀಠ ಅಸಮಾಧಾನ ವ್ಯಕ್ತಪಡಿಸಿದೆ.
ಜೊತೆಗೆ, ಹಣವಿರುವ ಪೋಷಕರು ಎಲ್ಲ ಸೌಲಭ್ಯಗಳುಳ್ಳ ಖಾಸಗಿ ಶಾಲೆಗಳಿಗೆ ಕಳುಹಿಸುತ್ತಿದ್ದಾರೆ. ಬಡವರ ಮಕ್ಕಳು ಸೌಲಭ್ಯವುಳ್ಳ ಶಾಲೆಗಳಲ್ಲಿ ಶಿಕ್ಷಣ ಪಡೆಯಬಾರದೇ? ಹೀಗಾದರೆ ಬಡವರ ಮಕ್ಕಳು ಶಿಕ್ಷಣ ಪಡೆಯುವುದು ಬೇಡವೇ ಎಂದು ಹೈಕೋರ್ಟ್ ಪ್ರಶ್ನಿಸಿತು.