ಬೆಂಗಳೂರು: ಸರ್ಕಾರಿ ಭೂಮಿ ಕಬಳಿಸುವುದನ್ನು ತಡೆಗಟ್ಟುವ ಉದ್ದೇಶದಿಂದ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಕರ್ನಾಟಕ ಭೂ ಕಬಳಿಕೆ ನಿಷೇಧ ಕಾಯ್ದೆ- 2011ರ ಸಾಂವಿಧಾನಿಕ ಸಿಂಧುತ್ವವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.
ಕಾಯ್ದೆಯ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಸುಮಾರು 200ಕ್ಕೂ ಹೆಚ್ಚು ಅರ್ಜಿಗಳ ವಿಚಾರಣೆ ನಡೆಸಿದ ಹಿರಿಯ ನ್ಯಾಯಮೂರ್ತಿ ಅರವಿಂದ್ ಕುಮಾರ್ ಮತ್ತು ನ್ಯಾಯಮೂರ್ತಿ ಬಿ.ಎ.ಪಾಟೀಲ್ ಅವರಿದ್ದ ವಿಭಾಗೀಯ ಪೀಠ ಈ ತೀರ್ಪು ನೀಡಿದೆ.
ಕರ್ನಾಟಕ ಭೂ ಕಬಳಿಕೆ ನಿಷೇಧ ಕಾಯ್ದೆ-2011ರ ಅಡಿ ವಿಶೇಷ ನ್ಯಾಯಾಲಯಕ್ಕೆ ಮ್ಯಾಜಿಸ್ಟ್ರೇಟ್ ಅಧಿಕಾರ ನೀಡಿರುವುದನ್ನು ಕಾನೂನು ಬಾಹಿರ ಎಂದು ಘೋಷಿಸುವಂತೆ ಅರ್ಜಿದಾರರು ಮಾಡಿದ್ದ ಮನವಿಯನ್ನು ಹೈಕೋರ್ಟ್ ತಿರಸ್ಕರಿಸಿದೆ. ಈ ಮೂಲಕ ಕರ್ನಾಟಕ ಭೂ ಕಬಳಿಕೆ ನಿಷೇಧ ಕಾಯ್ದೆಯ ಸಂವಿಧಾನ ಬದ್ಧತೆಯನ್ನು ಎತ್ತಿ ಹಿಡಿದಿರುವ ಹೈಕೋರ್ಟ್, ಭೂ ಕಬಳಿಕೆ ಪ್ರಕರಣಗಳಲ್ಲಿನ ಸಾಕ್ಷ್ಯ ಪರಿಗಣಿಸುವುದಕ್ಕೆ ಕಾಯ್ದೆಯಡಿ ಸ್ಥಾಪನೆಯಾಗಿರುವ ವಿಶೇಷ ಕೋರ್ಟ್ಗೆ ಅವಕಾಶ ನೀಡಿದೆ. ಹಾಗೆಯೇ ವಿಶೇಷ ನ್ಯಾಯಾಲಯವು ಸಾಧ್ಯವಾದಷ್ಟು ಪ್ರಕರಣಗಳ ಅಗತ್ಯತೆಗಳನ್ನು ಆಧರಿಸಿ ವಾರಂಟ್ ಹೊರಡಿಸಿ ಮುಂದಿನ ತೀರ್ಮಾನ ಕೈಗೊಳ್ಳಬೇಕು ಎಂದು ಅಭಿಪ್ರಾಯ ಪಟ್ಟಿದೆ.