ಕರ್ನಾಟಕ

karnataka

ETV Bharat / state

ಪ್ಲಾಸ್ಟಿಕ್ ಉತ್ಪನ್ನಕ್ಕೆ ಬಳಸುವ ಪಾಲಿಥಿನ್‌ ಗುಣಮಟ್ಟ ಕಾಯ್ದುಕೊಳ್ಳುವ ಕೇಂದ್ರದ ಕ್ರಮ ಸರಿಯಿದೆ: ಹೈಕೋರ್ಟ್

ಮೇಕ್ ಇನ್ ಇಂಡಿಯಾ ಅಡಿ ಉತ್ಪಾದನೆಯಾಗುವ ವಸ್ತುಗಳಿಗೆ ವಿಶ್ವಮಟ್ಟದಲ್ಲಿ ಪೈಪೋಟಿ ನಡೆಸಬೇಕಾಗಿದ್ದು, ಕೇಂದ್ರದ ಕ್ರಮ ಸರಿಯಿದೆ ಎಂದ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಹೈಕೋರ್ಟ್
ಹೈಕೋರ್ಟ್

By ETV Bharat Karnataka Team

Published : Jan 9, 2024, 8:09 PM IST

ಬೆಂಗಳೂರು: ಮೇಕ್ ಇನ್ ಇಂಡಿಯಾ ಯೋಜನೆಯಡಿ ಸಿದ್ಧಗೊಳ್ಳುವ ಉತ್ಪನ್ನಗಳಲ್ಲಿ ಗುಣಮಟ್ಟ ಕಾಯ್ದುಕೊಂಡಲ್ಲಿ ಮಾತ್ರ ವಿಶ್ವದ ಇತರ ದೇಶಗಳೊಂದಿಗೆ ಪೈಪೋಟಿ ನಡೆಸಲು ಸಾಧ್ಯ ಎಂದು ಅಭಿಪ್ರಾಯ ಪಟ್ಟಿರುವ ಹೈಕೋರ್ಟ್, ಪ್ಲಾಸ್ಟಿಕ್ ಉತ್ಪನ್ನಗಳನ್ನು ಸಿದ್ಧಪಡಿಸಲು ಬಳಸುವ ಕಚ್ಚಾ ವಸ್ತುವಾಗಿರುವ ಪಾಲಿಥಿನ್​ನಲ್ಲಿ ಗುಣಮಟ್ಟ ನಿಯಂತ್ರಣ ಮಾಡುವ ಕುರಿತು 2021ರ ಏಪ್ರಿಲ್ 15ರಂದು ಕೇಂದ್ರ ಸರ್ಕಾರ ಹೊರಡಿಸಿದ್ದ ಅಧಿಸೂಚನೆ ಎತ್ತಿ ಹಿಡಿದಿದೆ.

ಕೇಂದ್ರ ಸರ್ಕಾರದ ಅಧಿಸೂಚನೆ ರದ್ದುಗೊಳಿಸುವಂತೆ ಕೋರಿ ಅಖಿಲ ಭಾರತ ಹೆಚ್‌ಡಿಪಿಇ/ಪಿಪಿ ಫ್ಯಾಬಿಕ್ ಮ್ಯಾನಿಫ್ಯಾಕ್ಚರ್ಸ್ ಸಂಘ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ. ಮೇಕ್ ಇನ್ ಇಂಡಿಯಾ ಕಾರ್ಯಕ್ರಮ ಪ್ರಾರಂಭದಿಂದಲೂ ಸಿದ್ಧಪಡಿಸಿದ ಪ್ಲಾಸ್ಟಿಕ್ ಉತ್ಪನ್ನಗಳಲ್ಲಿ ಗುಣಮಟ್ಟವನ್ನು ಕಾಯ್ದಿರಿಸಿಕೊಂಡಲ್ಲಿ ಮಾತ್ರ ವಿಶ್ವದ ಇತರ ದೇಶಗಳೋಂದಿಗೆ ಸ್ಪರ್ಧೆ ಮಾಡುವುದಕ್ಕೆ ಸಾಧ್ಯವಾಗಲಿದೆ. ಈ ಹಿನ್ನೆಲೆಯಲ್ಲಿ ಅಗತ್ಯವಿರುವ ಎಲ್ಲ ಮಾನದಂಡಗಳನ್ನು ಅನುಸರಿಸಬೇಕಾಗುತ್ತದೆ. ಆದ್ದರಿಂದ ಕೇಂದ್ರ ಸರ್ಕಾರದ ನಿರ್ಧಾರದಲ್ಲಿ ಮಧ್ಯಪ್ರವೇಶ ಮಾಡುವ ಅಗತ್ಯವಿಲ್ಲ ಎಂದು ತಿಳಿಸಿದೆ.

ಅಲ್ಲದೇ, ಪ್ಲಾಸ್ಟಿಕ್ ಉತ್ಪಾದನೆಯ ಅಂತಿಮ ಉತ್ಪನ್ನಗಳಲ್ಲಿ ಗುಣಮಟ್ಟದ ಮಾನದಂಡಗಳನ್ನು ಖಚಿತಪಡಿಸಿಕೊಳ್ಳಲು ಉತ್ಪಾದನಾ ಪ್ರಕ್ರಿಯೆಯ ವಿವಿಧ ಹಂತಗಳಲ್ಲಿ ಮೇಲ್ವಿಚಾರಣೆ ಮತ್ತು ಪರೀಶೀಲನೆ ನಡೆಸುವುದು ಅಗತ್ಯವಿರಲಿದೆ. ಜೊತೆಗೆ, ಪ್ಲಾಸ್ಟಿಕ್ ಮನುಷ್ಯನ ಜೀವನದ ಪ್ರತಿಯೊಂದು ಹಂತದಲ್ಲಿ ಬಳಕೆಯಾಗುತ್ತಿದ್ದು, ಆರೋಗ್ಯ ಮತ್ತು ಸುರಕ್ಷತೆ ಮಾನದಂಡಗಳನ್ನು ಪೂರೈಸಬೇಕು. ಪರಿಸರ ಮತ್ತು ಸಾರ್ವಜನಿಕರಿಗೆ ಅಪಾಯಕಾರಿಯಲ್ಲದಂತೆ ನೋಡಿಕೊಳ್ಳಬೇಕಾಗಿದೆ. ಆದ್ದರಿಂದ ಪ್ಲಾಸ್ಟಿಕ್ ಉತ್ಪಾದನೆಯ ಪ್ರತಿಯೊಂದು ಕಚ್ಚಾ ವಸ್ತುವಿನಲ್ಲಿಯೂ ಬಿಐಎಸ್ ಮುದ್ರೆ ತಂದಲ್ಲಿ ಅಂತಿಮ ಉತ್ಪನ್ನದಲ್ಲಿ ಗುಣಮಟ್ಟ ಕಾಯ್ದುಕೊಳ್ಳಲು ನೆರವಾಗಲಿದೆ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ಅಲ್ಲದೇ, ಸರಕುಗಳ ಗುಣಮಟ್ಟದ ಪ್ರಾಮಾಣೀಕರಣಕ್ಕೆ ತರುವುದಕ್ಕಾಗಿ ಕಚ್ಚಾ ವಸ್ತುಗಳಲ್ಲಿಯೂ ಭಾರತೀಯ ಗುಣಮಟ್ಟ ಸಂಸ್ಥೆ (ಬಿಐಎಸ್ ಮುದ್ರೆ) ಇರುವಂತೆ ನೋಡಿಕೊಳ್ಳುವುದೇ ಅಧಿಸೂಚನೆಯ ಮುಖ್ಯ ಉದ್ದೇಶವಾಗಿದೆ. ಆದ್ದರಿಂದ ಸರ್ಕಾರ ರೂಪಿಸುವ ನೀತಿಗಳನ್ನು ಪರಿಶೀಲಿಸಲು ನ್ಯಾಯಾಲಯಕ್ಕೆ ಕಾಲಾವಕಾಶವಿಲ್ಲ. ಈ ರೀತಿಯ ವಿಚಾರಗಳಲ್ಲಿ ನ್ಯಾಯಾಲಯ ಸಲಹೆಗಾರರ ಪಾತ್ರವವನ್ನು ವಹಿಸುವುದಕ್ಕೂ ಸಾಧ್ಯವಿಲ್ಲ ಎಂದು ಪೀಠ ತಿಳಿಸಿದೆ.

ಕಚ್ಚಾ ವಸ್ತುವಿನಲ್ಲಿಯೂ ಗುಣಮಟ್ಟ ಇಲ್ಲದಿದ್ದರೆ ಅದರಿಂದ ಸಿದ್ಧಪಡಿಸಿದ ವಸ್ತುಗಳಲ್ಲಿ ಹೇಗೆ ಗುಣಮಟ್ಟ ಕಾಣಬಹುದು ಎಂಬುದರ ಕುರಿತು ಅರ್ಥವೇ ಆಗುತ್ತಿಲ್ಲ. ಅರ್ಜಿದಾರರ ಈ ವಾದ ಅಸಂಬಂಧವಾಗಿದೆ. ಜೊತೆಗೆ, ಪ್ಲಾಸ್ಟಿಕ್‌ಗೆ ಬಳಸುವ ಪಾಲಿಮರ್ ಉತ್ಪಾದನೆಯಲ್ಲಿ ರಿಲಯನ್ಸ್ ಮಾತ್ರ ಏಕೈಕ ಕಂಪನಿ ಎಂಬ ಅರ್ಜಿದಾರರ ವಾದವನ್ನು ಪೀಠ ತಿರಸ್ಕರಿಸಿತು.

ಪ್ರಕರಣದ ಹಿನ್ನೆಲೆ ಏನು ?ಅರ್ಜಿದಾರರ ಒಕ್ಕೂಟ ಕಡಿಮೆ ಮತ್ತು ಹೆಚ್ಚು ಸಾಂದ್ರತೆಯ ಪಾಲಿಥಿನ್ ಉತ್ಪಾದನೆ ಮಾಡುವ ಕಂಪನಿಗಳಾಗಿವೆ. ಹೆಚ್ಚಿನ ಸಾಂದ್ರತೆಯುಳ್ಳ ಪಾಲಿಥಿನ್‌ ಅನ್ನು ಪ್ಲಾಸ್ಟಿಕ್ ಪಾಲಿಮರ್ ಎಂದು ಕರೆಯಲಾಗುತ್ತದೆ. ಇದರಲ್ಲಿ ತೂಕ ಹಾಕಿದಾಗಲೂ ಬಿರುಕುಗಳು ಬರದಂತೆ ತಡೆಯಲಿದ್ದು, ಕೈಗಾರಿಕೆಗಳಲ್ಲಿ ಹೆಚ್ಚು ಬಳಕೆ ಮಾಡುತ್ತಾರೆ. ಕಡಿಮೆ ಸಾಂದ್ರತೆ ಪಾಲಿಥಿನ್‌ ಅನ್ನು ಆಹಾರ ಪದಾರ್ಥಗಳ ಪ್ಯಾಕಿಂಗ್‌ಗಾಗಿ, ಪ್ಲಾಸ್ಟಿಕ್ ಚೀಲಗಳನ್ನಾಗಿ ಮಾಡಲು ಬಳಕೆ ಮಾಡಿಕೊಳ್ಳಲಾಗುತ್ತದೆ.

ಅಲ್ಲದೇ, ಅರ್ಜಿದಾರರ ಸಂಸ್ಥೆಗಳು ಎರಡೂ ಬಗೆಯ ಪಾಲಿಥಿನ್ ಉತ್ಪನ್ನಗಳನ್ನು ತಯಾರಿಕೆ ಮಾಡಿ ಪೂರೈಕೆ ಮಾಡುತ್ತಿದ್ದರು. ಇದಕ್ಕಾಗಿ ಕಚ್ಚಾ ವಸ್ತುಗಳನ್ನು ಆಮದು ಮಾಡಿಕೊಂಡು ಸಿದ್ಧ ವಸ್ತುಗಳನ್ನು ದೇಶದಲ್ಲಿ ಸೇರಿದಂತೆ ವಿದೇಶಗಳಿಗೆ ರಫ್ತು ಮಾಡುತ್ತಿದ್ದಾರೆ. ಈ ಕೈಗಾರಿಕೆಗಳು ಸುಮಾರು 25 ಲಕ್ಷ ಕುಟುಂಬಗಳಿಗೆ ಜೀವನಾಧಾರವಾಗಿವೆ. ಜೊತೆಗೆ ದೇಶದ ಆರ್ಥಿಕತೆಗೆ ದೊಡ್ಡ ಕೊಡುಗೆ ನೀಡುತ್ತಿವೆ. ಆದರೆ, ಈ ವಸ್ತುಗಳಿಗೆ ಕಚ್ಚಾ ವಸ್ತುವನ್ನು ಆಮದು ಮಾಡಿಕೊಂಡರೂ ಬಿಐಎಸ್ ಮಾನದಂಡಗಳು ಜಾರಿಯಲ್ಲಿರಬೇಕು ಎಂದು ಕೇಂದ್ರ ಸರ್ಕಾರ 2021ರ ಏಪ್ರಿಲ್ 15 ರಂದ ಅಧಿಸೂಚನೆ ಹೊರಡಿಸಿತ್ತು. ಅಲ್ಲದೇ, ಈ ಅಧಿಸೂಚನೆ 2024ರ ಜನವರಿ 5ರಿಂದ ಜಾರಿಗೆ ಬರಲಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರ ಸಂಘ ಹೈಕೋರ್ಟ್ ಮೆಟ್ಟಿಲೇರಿತ್ತು.

ಅರ್ಜಿದಾರರ ವಾದವೇನು?ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಪಾಲಿಥಿನ್ ಉತ್ಪಾದನೆ ಮಾಡಲು ಬೇಕಾಗುವ ಗ್ರ್ಯಾನ್ಯುಯಲ್ ತಯಾರಿಕೆಯಲ್ಲಿ ರಿಲಯನ್ಸ್ ಸಂಸ್ಥೆ ಏಕಸ್ವಾಮ್ಯ ಹೊಂದಿದೆ, ಈ ಸಂಸ್ಥೆಗೆ ನೆರವಾಗುವಂತೆ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಇದರಿಂದ ಎಲ್ಲ ಪ್ಲಾಸ್ಟಿಕ್ ಉತ್ಪಾದನೆ ಮಾಡುವ ಕಂಪನಿಗಳು ರಿಲಯನ್ಸ್ ಸಂಸ್ಥೆ ಅವಲಂಭಿಸಬೇಕಾಗುತ್ತದೆ ಎಂದು ವಾದಿಸಿದ್ದರು.

ಕೇಂದ್ರ ಸರ್ಕಾರದ ರಾಸಾಯನಿಕ ಮತ್ತು ಪೆಟ್ರೋಕೆಮಿಕ್ಸ್ ಇಲಾಖೆ ಪರ ವಕೀಲರು, ಕಡಿಮೆ ಸಾಂದ್ರತೆಯ ಪಾಲಿಥಿನ್ ಹಾಗೂ ಹೆಚ್ಚು ಸಾಂದ್ರತೆಯುಳ್ಳ ಪಾಲಿಥಿನ್ ಬಳಕೆಗೆ ಸಂಬಧಿಸಿದಂತೆ ಭಾರತೀಯ ಮಾನದಂಡಕ್ಕೆ ಅನುಗುಣವಾಗಿರಬೇಕು ಎಂದು ಗುಣಮಟ್ಟ ನಿಯಂತ್ರಣಾ ಸಂಸ್ಥೆ ಕೆಲವು ನಿರ್ಬಂಧಗಳನ್ನು ವಿಧಿಸಿದೆ. ಅಲ್ಲದೇ, ಅರ್ಜಿದಾರರ ಸಂಘವು ಗುಣಮಟ್ಟ ಕಾಯ್ದಿರಿಸಿಕೊಳ್ಳುವುದಕ್ಕೆ ಮುಂದಾಗುವುದಿಲ್ಲ. ಈ ಹಿಂದೆ ಕಳಪೆ ಗುಣಮಟ್ಟದ ಕಚ್ಚಾ ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತಿದ್ದು, ಪರಿಸರ ಸೇರಿ ಇನ್ನಿತರ ವಿಚಾರಗಳಲ್ಲಿ ಸಮಸ್ಯೆಗಳಿಗೆ ಕಾರಣವಾಗಲಿದೆ.

ಜೊತೆಗೆ, ಪ್ಲಾಸ್ಟಿಕ್ ಉತ್ಪನ್ನಗಳ ವಿಚಾರಕ್ಕೆ ಇಡೀ ಮಾರುಕಟ್ಟೆಯಲ್ಲಿ ಒಂದೇ ಕಂಪನಿ ಇದೆ ಎಂಬ ಅರ್ಜಿದಾರರ ಆರೋಪ ಸತ್ಯಕ್ಕೆ ದೂರವಾಗಿದೆ. ಕೇಂದ್ರ ಸರ್ಕಾರ ಪ್ಲಾಸ್ಟಿಕ್ ಉತ್ಪನ್ನಗಳ ಕುರಿತಂತೆ ಗುಣಮಟ್ಟ ಕಾಯ್ದಿರಿಸಿಕೊಳ್ಳಲು ಕೆಲವು ನಿಯಮಗಳನ್ನು ಜಾರಿ ಮಾಡುವುದಕ್ಕೆ ಮುಂದಾಗಿದೆ. ಅಲ್ಲದೇ, ಆರ್ಥಿಕ ಮತ್ತು ಗುಣಮಟ್ಟಕ್ಕೆ ಸಂಬಂಧಿಸಿದಂತೆ ಸರ್ಕಾರದ ನಿರ್ಧಾರಗಳಲ್ಲಿ ನ್ಯಾಯಾಲಯ ಮಧ್ಯಪ್ರವೇಶ ಮಾಡಬಾರದು ಎಂದು ಮನವಿ ಮಾಡಿದ್ದರು.

ಇದನ್ನೂ ಓದಿ: ಲೈಂಗಿಕ ಕಿರುಕುಳ ಆರೋಪ: ವಕೀಲ ವೃತ್ತಿ ಮುಂದುವರೆಸಲು ನಿರ್ಬಂಧಿಸಿದ್ದ ಆದೇಶ ರದ್ದುಪಡಿಸಿದ ಹೈಕೋರ್ಟ್

ABOUT THE AUTHOR

...view details