ಕರ್ನಾಟಕ

karnataka

ETV Bharat / state

ಆರೋಪಿಗೆ ಪಾಸ್​ಪೋರ್ಟ್ ನವೀಕರಣ ಅವಕಾಶ ನಿರಾಕರಿಸಿದ್ದ ಕ್ರಮ ಎತ್ತಿಹಿಡಿದ ಹೈಕೋರ್ಟ್ - ತುಮಕೂರಿನ ಸೆಷನ್ಸ್‌ ಕೋರ್ಟ್

ಕ್ರಿಮಿನಲ್​ ಪ್ರಕರಣ ಬಾಕಿ ಇರುವ ಆರೋಪಿಯ ಪಾಸ್​ಪೋರ್ಟ್ ನವೀಕರಣಕ್ಕೆ ನಿರಾಕರಿಸಿದ್ದ ಕ್ರಮವನ್ನು ಹೈಕೋರ್ಟ್ ಎತ್ತಿಹಿಡಿದಿದೆ.

ಹೈಕೋರ್ಟ್
ಹೈಕೋರ್ಟ್

By ETV Bharat Karnataka Team

Published : Dec 5, 2023, 9:35 PM IST

ಬೆಂಗಳೂರು: ಕ್ರಿಮಿನಲ್ ಪ್ರಕರಣ ಬಾಕಿಯಿರುವ ವ್ಯಕ್ತಿಗೆ ಪಾಸ್​ಪೋರ್ಟ್ ನವೀಕರಣಕ್ಕೆ ನಿರಾಕರಿಸಿದ್ದ ಪಾಸ್​ಪೋರ್ಟ್ ಅಧಿಕಾರಿಯ ನಿರ್ಧಾರವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ. ಸೆಷನ್ಸ್ ನ್ಯಾಯಾಲಯದಲ್ಲಿ ಕ್ರಿಮಿನಲ್ ಪ್ರಕರಣ ಬಾಕಿ ಇರುವ ಸಂತೋಷ್ ಬೀಜಾಡಿ ಎಂಬವರು ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ, ಪಾಸ್‌ ಪೋರ್ಟ್ ನವೀಕರಣಕ್ಕೆ ನಿರಾಕರಿಸಿ ಪ್ರಾದೇಶಿಕ ಪಾಸ್ ಪೋರ್ಟ್ ಅಧಿಕಾರಿ ನೀಡಿದ್ದ ಹಿಂಬರಹವನ್ನು ಎತ್ತಿಹಿಡಿದಿದೆ.

ಪಾಸ್ ಪೋರ್ಟ್ ಕಾಯಿದೆಯ ಯಾವುದೇ ನಿಯಮಗಳಲ್ಲಿ ಪಾಸ್ ಪೋರ್ಟ್ ವಿತರಣೆ/ನವೀಕರಣಕ್ಕೆ ಬಾಕಿ ಇರುವ ಕ್ರಿಮಿನಲ್ ಕೇಸ್ ಅಲಕ್ಷಿಸುವ ಯಾವುದೇ ಪ್ರತ್ಯೇಕ ಮಾನದಂಡವಿಲ್ಲ. ಭಾರತೀಯ ಸಂವಿಧಾನದ 226ನೇ ವಿಧಿಯಡಿ ಲಭ್ಯವಿರುವ ಅಧಿಕಾರವನ್ನು ಬಳಸಿ ಈ ಕೋರ್ಟ್ ಒಂದು ಆದೇಶದ ಮೂಲಕ ನಿಯಮವನ್ನು ಸರಳೀಕರಣ ಮಾಡಲಾಗದು. ಸೆಕ್ಷನ್ 6(2)(ಎಫ್) ಪ್ರಕಾರ ಯಾವುದೇ ಪಾಸ್​ ಪೋರ್ಟ್ ಅರ್ಜಿ ಸಲ್ಲಿಕೆಯಾದರೂ ಸಹ ಅದು ಹೊಸದಾಗಿ ವಿತರಣೆ, ನವೀಕರಣ ಹಾಗೂ ಮರು ವಿತರಣೆಗೆ ಆಗಿರಬಹುದು. ಅಂತಹ ವೇಳೆ ನಿಯಮಗಳನ್ನು ಸಡಿಲಿಕೆ ಮಾಡಲಾಗದು ಎಂದು ಪೀಠ ತಿಳಿಸಿದೆ.

ಆದರೆ ಹೈಕೋರ್ಟ್ ಅರ್ಜಿದಾರರು ತಮ್ಮ ವಿರುದ್ಧ ಎಲ್ಲಿ ಕ್ರಿಮಿನಲ್ ಕೇಸ್ ಬಾಕಿ ಇದೆಯೋ ಅದೇ ಕೋರ್ಟ್​ನಲ್ಲಿ ಅಲ್ಪಾವಧಿಯ ಪಾಸ್ ಪೋರ್ಟ್ ವಿತರಣೆಗೆ ಅರ್ಜಿ ಸಲ್ಲಿಸಬಹುದು. ಆ ಕೋರ್ಟ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಅರ್ಜಿಯನ್ನು ಪರಿಗಣಿಸಬಹುದು ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ. ಆ ಮೂಲಕ ಈ ಹಿಂದೆ ಹೈಕೋರ್ಟ್​ನ ಮೂರು ಪ್ರತ್ಯೇಕ ಏಕ ಸದಸ್ಯ ಪೀಠಗಳು, ಕ್ರಿಮಿನಲ್ ಪ್ರಕರಣ ಬಾಕಿ ಇರುವುದು ಪಾಸ್ ಪೋರ್ಟ್ ನವೀಕರಣಕ್ಕೆ ಅಡ್ಡಿಯಲ್ಲ ಎಂದು ಆದೇಶಿಸಿರುವುದಕ್ಕೆ ಭಿನ್ನವಾದ ತೀರ್ಪು ನೀಡಿದಂತಾಗಿದೆ.

ಪ್ರಕರಣದ ಹಿನ್ನೆಲೆ: ಅರ್ಜಿದಾರರಿಗೆ 2014 ರ ಏ. 11ರಂದು 10 ವರ್ಷಗಳ ಅವಧಿಗೆ ಅಂದರೆ 2024ರ ಏ. 10ರವರೆಗೆ ಮಾನ್ಯತೆ ಇರುವ ಪಾಸ್​ಪೋರ್ಟ್ ವಿತರಣೆ ಮಾಡಲಾಗಿತ್ತು. ಆ ಅವಧಿಯಲ್ಲಿ ತಮ್ಮ ತಾಯಿಯ ಸಾವಿನ ಸಂಬಂಧ ಅವರ ವಿರುದ್ಧ ಐಪಿಸಿ ಸೆಕ್ಷನ್‌ 302, 201, 120ಬಿ ಮತ್ತು 182ರ ಅನ್ವಯ ಕ್ರಿಮಿನಲ್ ಕೇಸ್ ದಾಖಲಾಗಿತ್ತು. ಪ್ರಕರಣದಲ್ಲಿ ಅರ್ಜಿದಾರರು ಎರಡನೇ ಆರೋಪಿ, ಅವರ ತಂದೆ ಮತ್ತು ಪತ್ನಿ ಕ್ರಮವಾಗಿ ಮೊದಲನೇ ಮತ್ತು ಮೂರನೇ ಆರೋಪಿಯಾಗಿದ್ದರು. ಆ ಸಂಬಂಧದ ಪ್ರಕರಣ ತುಮಕೂರಿನ ಸೆಷನ್ಸ್‌ ಕೋರ್ಟ್ ಮುಂದೆ ವಿಚಾರಣೆ ಬಾಕಿತ್ತು. ಆ ಅವಧಿಯಲ್ಲಿ ಅವರು ಪಾಸ್ ಪೋರ್ಟ್ ಮರು ವಿತರಣೆ ಕೋರಿ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಯನ್ನು ಪ್ರಾದೇಶಿಕ ಪಾಸ್ ಪೋರ್ಟ್ ಅಧಿಕಾರಿ ತಿರಸ್ಕರಿಸಿ ಹಿಂಬರಹ ನೀಡಿದ್ದರು. ಅದನ್ನು ಪ್ರಶ್ನಿಸಿ ಅವರು ಹೈಕೋರ್ಟ್ ಮೊರೆ ಹೋಗಿದ್ದರು.

ಇದನ್ನೂ ಓದಿ:ಅರಣ್ಯಭೂಮಿಯಲ್ಲಿ ಸಾಗುವಳಿ ಸಕ್ರಮ ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್

ABOUT THE AUTHOR

...view details