ಬೆಂಗಳೂರು: ಕಲ್ಯಾಣ ಕರ್ನಾಟಕ ಭಾಗದ ಅಭ್ಯರ್ಥಿಗಳಿಗೆ ಸಂವಿಧಾನದ 371ಜೆ ವಿಧಿಯಡಿ ಮೀಸಲಾತಿ ಉಲ್ಲೇಖಿಸಿರುವಂತೆ ಅನ್ವಯಿಸಬೇಕು ಎಂದು ರಾಜ್ಯ ಸರ್ಕಾರ ಹೊರಡಿಸಿದ್ದ ಸುತ್ತೋಲೆಯನ್ನು ಹೈಕೋರ್ಟ್ ಎತ್ತಿ ಹಿಡಿದಿದೆ. ಸರ್ಕಾರದ ಕ್ರಮ ಪ್ರಶ್ನಿಸಿ ಮಂಡ್ಯದ ಹೆಚ್.ಎನ್ ನವೀನ್ ಕುಮಾರ್ ಸೇರಿದಂತೆ 26 ಅಭ್ಯರ್ಥಿಗಳು 2023ರ ಫೆಬ್ರವರಿ 1ರಂದು ಸರ್ಕಾರ ಹೊರಡಿಸಿದ್ದ ಸುತ್ತೋಲೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎನ್.ಎಸ್.ಸಂಜಯ್ ಗೌಡ ಅವರಿದ್ದ ನ್ಯಾಯಪೀಠ ವಜಾಗೊಳಿಸಿದೆ.
ಸ್ಥಳೀಯ ಕೇಡರ್ನಲ್ಲಿ ಸಹಾಯಕ ಎಂಜಿನಿಯರ್ಗಳ ಹುದ್ದೆಗಳು ಭರ್ತಿಯಾಗದೇ ಖಾಲಿ ಬಿದ್ದಿದ್ದು, ಸ್ಥಳಿಯೇತರ ಕೇಡರ್ನಲ್ಲಿ ಅಸಂಖ್ಯಾತ ಅಭ್ಯರ್ಥಿಗಳು ಉದ್ಯೋಗಕ್ಕಾಗಿ ಕಾದು ಕೂತಿದ್ದಾರೆ. ಉದ್ಯೋಗ ಪಡೆಯುವುದು ಅತ್ಯಂತ ದುರ್ಲಭ ಎನ್ನುವ ಕಾಲಘಟ್ಟದಲ್ಲಿ ನಾವು ಬದುಕುತ್ತಿದ್ದು, ಮುಂದೆ ನೇಮಕಾತಿ ನಡೆಯುವವರಿಗೆ ಬಹುತೇಕ ಅಭ್ಯರ್ಥಿಗಳು ಅನರ್ಹರಾಗುತ್ತಾರೆ. ಹೀಗಾಗಿ, ಇದೊಂದು ವಿಶೇಷ ಕ್ರಮ ಎಂದು ಪರಿಗಣಿಸಿ ಸಹಾಯಕ ಎಂಜಿನಿಯರ್ ಹುದ್ದೆಗಳಿಗೆ ಮಿತಿಗೊಳಿಸಿ ನ್ಯಾಯಾಲಯವು ಕೆಳಕಂಡ ನಿರ್ದೇಶನಗಳನ್ನು ನೀಡಿದೆ. ಸ್ಥಳಿಯೇತರ ಕೇಡರ್ನಲ್ಲಿ ಆಯ್ಕೆಯಾಗಿರುವ ಹೈದರಾಬಾದ್ ಕರ್ನಾಟಕ ಭಾಗದ ಸ್ಥಳೀಯರು ಸ್ಥಳೀಯ ಕೇಡರ್ ಆಯ್ಕೆ ಮಾಡಿಕೊಳ್ಳುವ ಇಚ್ಛೆ ಹೊಂದಿದ್ದಾರೆಯೇ ಎಂದು ಕೇಳುವ ಮೂಲಕ ಹೊಸ ಆಯ್ಕೆ ಮಾಡುವಂತೆ ಹಾಗೂ ಈ ಪ್ರಕರಣವನ್ನು ಅಸಾಧಾರಣ ಪ್ರಕರಣ ಎಂದು ಪರಿಗಣಿಸುವಂತೆ ರಾಜ್ಯ ಸರ್ಕಾರ ಮತ್ತು ಕೆಪಿಟಿಸಿಎಲ್ಗೆ ನ್ಯಾಯಾಲಯ ನಿರ್ದೇಶಿಸಿದೆ.
ಸ್ಥಳೀಯ ಅಭ್ಯರ್ಥಿಗಳು ಸ್ಥಳಿಯೇತರ ಕೇಡರ್ಗೆ ಆಯ್ಕೆಯಾಗಲು ಬಯಸಿದರೆ ಮತ್ತು ಅವರು ಸ್ಥಳೀಯ ಕೇಡರ್ ಆಯ್ಕೆ ಮಾಡಿಕೊಳ್ಳುವಂತೆ ಬಲವಂತ ಮಾಡುವಂತಿಲ್ಲ. ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಸ್ಥಾನಪಡೆದಿರುವ ಯಾವುದೇ ಸ್ಥಳೀಯ ವ್ಯಕ್ತಿಯನ್ನು ಬದಲಾವಣೆ ಮಾಡುವಂತಿಲ್ಲ. ಸ್ಥಳೀಯ ವ್ಯಕ್ತಿಯನ್ನು ಸ್ಥಳೀಯ ಕೇಡರ್ ಹುದ್ದೆಯಿಂದ ಬದಲಿಸಿದರೆ ಸ್ಥಳೀಯ ಕೇಡರ್ ಆಯ್ಕೆ ಮಾಡಿದ್ದ ಸ್ಥಳಿಯೇತರ ಕೇಡರ್ ವ್ಯಕ್ತಿಯನ್ನು ಸ್ಥಳಿಯೇತರ ಕೇಡರ್ಲ್ಲೇ ಮುಂದುವರಿಸಬೇಕು.