ಕರ್ನಾಟಕ

karnataka

ETV Bharat / state

ವೈದ್ಯಾಧಿಕಾರಿಗಳ ವಯೋಮಿತಿ 21ರಿಂದ 26ಕ್ಕೆ ಏರಿಕೆ : ಸರ್ಕಾರದ ಕ್ರಮ ಎತ್ತಿಹಿಡಿದ ಹೈಕೋರ್ಟ್ - bangalore court news

ಇಂಟರ್ನ್‌ಶಿಫ್‌ಗೆ ಒಂದು ವರ್ಷ ಮತ್ತು ಕಡ್ಡಾಯ ಗ್ರಾಮೀಣ ಸೇವೆಗೆ ಒಂದು ವರ್ಷ ಇರುತ್ತದೆ. ಹೀಗಾಗಿ, ಪದವಿ, ತರಬೇತಿ ಮತ್ತು ಸರ್ಕಾರಿ ಗ್ರಾಮೀಣ ಕಡ್ಡಾಯ ಸೇವೆ ಪೂರ್ಣಗೊಳಿಸುವ ವೇಳೆಗೆ ಅಭ್ಯರ್ಥಿ ವಯಸ್ಸು 25 ವರ್ಷ ಆಗಿರುತ್ತದೆ. ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ವೈದ್ಯಾಧಿಕಾರಿಗಳ ನೇಮಕಾತಿಗೆ ಕನಿಷ್ಠ ವಯೋಮಿತಿಯನ್ನು 21ರಿಂದ 26 ವರ್ಷಕ್ಕೆ ಹೆಚ್ಚಿಸಲಾಗಿದೆ.

High Court upheld government action regarding physicians Recruitment age
ಸರ್ಕಾರದ ಕ್ರಮ ಎತ್ತಿಹಿಡಿದ ಹೈಕೋರ್ಟ್

By

Published : Apr 28, 2021, 10:49 PM IST

ಬೆಂಗಳೂರು: ವೈದ್ಯಾಧಿಕಾರಿಗಳ ಹುದ್ದೆಗೆ ನೇಮಕಾತಿ ವಯೋಮಿತಿಯನ್ನು ಕನಿಷ್ಠ 21 ವರ್ಷದಿಂದ 26 ವರ್ಷಕ್ಕೆ ಹೆಚ್ಚಿಸಿ ರಾಜ್ಯ ಸರ್ಕಾರ ಜಾರಿಗೊಳಿಸಿರುವ ನಿಯಮವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.

ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ನಿರ್ದೇಶನಾಲಯ ಸೇವಾ ನಿಯಮಗಳಿಗೆ ತಿದ್ದುಪಡಿ ತಂದು ವೈದ್ಯಾಧಿಕಾರಿಗಳ ನೇಮಕಾತಿ ವಯೋಮಿತಿಯನ್ನು ಏರಿಸಿದ್ದ ರಾಜ್ಯ ಸರ್ಕಾರದ ಕ್ರಮ ಪ್ರಶ್ನಿಸಿ ಡಾ.ವಿಕಾಸಗೌಡ ಮತ್ತಿತರರು ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗಳನ್ನು ವಿಚಾರಣೆ ನಡೆಸಿದ ಹಿರಿಯ ನ್ಯಾ. ಅರವಿಂದ್ ಕುಮಾರ್ ನೇತೃತ್ವದ ವಿಭಾಗೀಯ ಪೀಠ, ಸರ್ಕಾರ ಜಾರಿಗೆ ತಂದಿರುವ ತಿದ್ದುಪಡಿ ನಿಯಮ ನ್ಯಾಯಸಮ್ಮತ ಹಾಗೂ ತರ್ಕಬದ್ಧವಾಗಿದೆ. ಸಂವಿಧಾನದ ವಿಧಿ 14 (ಸಮಾನ ಹಕ್ಕುಗಳು) ಮತ್ತು 16ಕ್ಕೆ (ಸಮಾನ ಅವಕಾಶ) ವಿರುದ್ಧವಾಗಿಲ್ಲ ಎಂದು ಆದೇಶಿಸಿದೆ. ಅಲ್ಲದೆ, ಸದ್ಯದ ಕೋವಿಡ್ ಪರಿಸ್ಥಿತಿ ನಿರ್ವಹಿಸಲು ಅನುಭವವುಳ್ಳ ವೈದ್ಯಾಧಿಕಾರಿಗಳನ್ನು ನೇಮಕ ಮಾಡಿಕೊಳ್ಳಲು ಅನುಕೂಲವಾಗುವಂತೆ ತಿದ್ದುಪಡಿ ನಿಯಮ ಜಾರಿಗೊಳಿಸಲು ಸಚಿವ ಸಂಪುಟ ಕೈಗೊಂಡಿರುವ ನಿರ್ಣಯವನ್ನು ಪುರಸ್ಕರಿಸಿ ಅರ್ಜಿದಾರರ ಮನವಿ ವಜಾಗೊಳಿಸಿದೆ.

ವಿಚಾರಣೆ ಸಂದರ್ಭದಲ್ಲಿ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ತಿದ್ದುಪಡಿ ನಿಯಮವು ಏಕಪಕ್ಷೀಯ ಮತ್ತು ತಾರತಮ್ಯದಿಂದ ಕೂಡಿದೆ. ಕೇವಲ ವೈದ್ಯಕೀಯ ಕೋರ್ಸ್‌ ಗಳನ್ನು ಪೂರ್ಣಗೊಳಿಸಲು ಹೆಚ್ಚುವರಿ ಅವಧಿ ತೆಗೆದುಕೊಂಡವರಿಗೆ ಅನುಕೂಲ ಮಾಡಿಕೊಡಲು ಈ ನಿಯಮ ಜಾರಿಗೆ ತರಲಾಗಿದೆ. ಕಡಿಮೆ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ವೈದ್ಯಾಧಿಕಾರಿಗಳ ಹುದ್ದೆ ಗಿಟ್ಟಿಸಲು ಅನುಕೂಲವಾಗುತ್ತದೆ. ಆದ್ದರಿಂದ ತಿದ್ದುಪಡಿ ನಿಯಮವನ್ನು ಸಂವಿಧಾನ ಬಾಹಿರ ಎಂದು ಘೋಷಿಸಬೇಕು ಎಂದು ಕೋರಿದ್ದರು.

ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ್ದ ಹೆಚ್ಚುವರಿ ಅಡ್ವೋಕೇಟ್ ಜನರಲ್ ಅರುಣ್ ಶ್ಯಾಮ್, ಭಾರತೀಯ ಶಿಕ್ಷಣದಲ್ಲಿ ಎಂಬಿಬಿಎಸ್ ಮತ್ತು ವೈದ್ಯಕೀಯ ಪದವಿ ಪೂರ್ಣಗೊಳಿಸುವ ವೇಳೆಗೆ ಅಭ್ಯರ್ಥಿಗೆ 23 ವರ್ಷ ಆಗಿರುತ್ತದೆ. ಇಂಟರ್ನ್‌ಶಿಫ್‌ಗೆ ಒಂದು ವರ್ಷ ಮತ್ತು ಕಡ್ಡಾಯ ಗ್ರಾಮೀಣ ಸೇವೆಗೆ ಒಂದು ವರ್ಷ ಇರುತ್ತದೆ. ಹೀಗಾಗಿ, ಪದವಿ, ತರಬೇತಿ ಮತ್ತು ಸರ್ಕಾರಿ ಗ್ರಾಮೀಣ ಕಡ್ಡಾಯ ಸೇವೆ ಪೂರ್ಣಗೊಳಿಸುವ ವೇಳೆಗೆ ಅಭ್ಯರ್ಥಿ ವಯಸ್ಸು 25 ವರ್ಷ ಆಗಿರುತ್ತದೆ. ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ವೈದ್ಯಾಧಿಕಾರಿಗಳ ನೇಮಕಾತಿಗೆ ಕನಿಷ್ಠ ವಯೋಮಿತಿಯನ್ನು 21ರಿಂದ 26 ವರ್ಷಕ್ಕೆ ಹೆಚ್ಚಿಸಲಾಗಿದೆ. ಹಾಗೆಯೇ ನ್ಯಾಯಸಮ್ಮತವೂ ಆಗಿದೆ ಎಂದಿದ್ದರು.

ಪ್ರಕರಣದ ಹಿನ್ನೆಲೆ :

ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ನಿರ್ದೇಶನಾಲಯ ಸೇವಾ (ಹಿರಿಯ ವೈದ್ಯಾಧಿಕಾರಿಗಳು/ಪರಿಣಿತರು, ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿ, ದಂತ ಆರೋಗ್ಯ ವೈದ್ಯಾಧಿಕಾರಿಗಳ ನೇಮಕಾತಿ) (ವಿಶೇಷ) ನಿಯಮಗಳು-2019 ರ ಸೆಕ್ಷನ್ 4 ಮತ್ತು 6ಕ್ಕೆ ತಿದ್ದುಪಡಿ ತಂದು ವೈದ್ಯಾಧಿಕಾರಿಗಳ ನೇಮಕಾತಿಗೆ ಕನಿಷ್ಠ ವಯೋಮಿತಿಯನ್ನು 21 ರಿಂದ 26 ವರ್ಷಕ್ಕೆ ಹೆಚ್ಚಿಸಲಾಗಿತ್ತು. 2020ರ ಆಗಸ್ಟ್ 25ರಂದು ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿ ಜಾರಿಗೆ ತಂದಿದ್ದ ಈ ತಿದ್ದುಪಡಿ ನಿಯಮ ಪ್ರಶ್ನಿಸಿ ಅರ್ಜಿದಾರರು ಕೆಎಟಿಯ ಮೆಟ್ಟಿಲೇರಿದ್ದರು. ಆದರೆ, ಕೆಎಟಿ ಅರ್ಜಿಗಳನ್ನು ವಜಾಗೊಳಿಸಿದ ಬಳಿಕ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

ABOUT THE AUTHOR

...view details