ಕರ್ನಾಟಕ

karnataka

ETV Bharat / state

ಮಾಲಿನ್ಯ ನಿಯಂತ್ರಣ ಮಂಡಳಿಗೆ ಸುಧಾಕರ್ ನೇಮಕ: ಸರ್ಕಾರಕ್ಕೆ ಹೈಕೋರ್ಟ್ ಚಾಟಿ - State Government

ಮಾಲಿನ್ಯ ನಿಯಂತ್ರಣ ಮಂಡಳಿಗೆ ಅಧ್ಯಕ್ಷರಾಗಲು ಸುಧಾಕರ್ ಅವರಿಗೆ ಅಗತ್ಯ ಅರ್ಹತೆಗಳು ಇವೆಯೇ. ಅರ್ಹತೆಗಳು ಇಲ್ಲದೇ ಇದ್ದರೂ ನೇಮಕ ಮಾಡಿದ್ದು ಏಕೆ ಹಾಗೂ ನೇಮಕಾತಿ ಪ್ರಕ್ರಿಯೆ ಏಕೆ ಪಾರದರ್ಶಕವಾಗಿ ನಡೆದಿಲ್ಲ ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಬೆವರಿಳಿಸಿದೆ.

ಡಾ ಸುಧಾಕರ್

By

Published : Sep 6, 2019, 5:29 PM IST

ಬೆಂಗಳೂರು: ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಅನರ್ಹ ಶಾಸಕ ಡಾ. ಸುಧಾಕರ್ ಅವರನ್ನ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವುದು ಕಾನೂನು ಬದ್ಧವೇ ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಪ್ರಶ್ನಿಸಿದೆ.

ಚಿಕ್ಕಬಳ್ಳಾಪುರದ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆಂಜನೇಯ ರೆಡ್ಡಿ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಅವರಿದ್ದ ವಿಭಾಗೀಯ ಪೀಠ ಸರ್ಕಾರವನ್ನ ಈ ವಿಚಾರಕ್ಕೆ ಸಂಬಂಧಿಸಿದಂತೆ ತರಾಟೆಗೆ ತೆಗೆದುಕೊಂಡಿದೆ.

ಅರ್ಜಿದಾರರು ನ್ಯಾಯಾಲಯದಲ್ಲಿ ವಾದಿಸಿ ಸುಧಾಕರ್ ನೇಮಕಕ್ಕೆ ಘಟನೋತ್ತರ ಅನುಮೋದನೆ ಪಡೆಯಲಾಗಿದೆ. ನೇಮಕಕ್ಕು ಮುನ್ನ ಅವರಿಗೆ ಸೂಕ್ತ ಅರ್ಹತೆ ಇದೆಯೇ, ಇಲ್ಲವೇ ಎನ್ನುವುದನ್ನ ಪರಿಶೀಲಿಸಲಾಗಿಲ್ಲ. ನಿಯಮಾವಳಿ ಪಾಲಿಸದೆ ನೇಮಕ‌ ಮಾಡಲಾಗಿದೆ. ಸುಧಾಕರ್ ನೇಮಕ ಕಾನೂನು ಬಾಹಿರವಾಗಿದ್ದು, ಅವ್ರ ಆಯ್ಕೆಯನ್ನ ರದ್ದುಪಡಿಸಬೇಕೆಂದು ಕೋರಿದರು. ಸುಧಾಕರ್ ಅವರಿಗೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನದ ಯಾವುದೇ ಅನುಭವ ಮತ್ತು ಜ್ಞಾನ ಇಲ್ಲ. ಅವರನ್ನ ನೇಮಕ ಮಾಡುವಾಗ ಯಾವುದೇ ದಾಖಲೆಗಳ ಪರಿಶೀಲನೆಯನ್ನ ಸರ್ಕಾರ ನಡೆಸಿಲ್ಲ. ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾಗುವವರು ಪರಿಸರ ಮಾಲಿನ್ಯ ನಿಯಂತ್ರಣದಲ್ಲಿ ವಿಜ್ಞಾನಿಗಳು, ಸಂಶೋಧನಾ ಸಂಸ್ಥೆ ಕೆಲಸ ಮಾಡಿದ ಅನುಭವ ಹೊಂದಿರಬೇಕು ಎನ್ನುವ ನಿಯಮಗಳಿವೆ. ಆದರೆ ಇದನ್ನ ಸರ್ಕಾರ ಉಲ್ಲಂಘಿಸಿದೆ ಎಂದು ನ್ಯಾಯಲಯದ ಅರ್ಜಿದಾರರು ಗಮನಕ್ಕೆ ತಂದರು.

ರಾಜ್ಯ ಸರ್ಕಾರದ ಪರವಾಗಿ ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವಡಗಿ ವಾದಿಸಿ ಸುಧಾಕರ್ ನೇಮಕ ಪ್ರಕ್ರಿಯೆಯನ್ನ ಮರುಪರಿಶೀಲಿಸಲು ಸರ್ಕಾರಕ್ಕೆ ಅವಕಾಶ ನೀಡಬೇಕೆಂದು ಕೋರಿದರು.

ಒಂದು ಹಂತದಲ್ಲಿ ಸುಧಾಕರ್‌ ನೇಮಕವನ್ನ ರದ್ದು ಪಡಿಸುವುದಾಗಿ ಅಭಿಪ್ರಾಯಪಟ್ಟ ನ್ಯಾಯಾಲಯ, ಅಡ್ವೋಕೇಟ್ ಜನರಲ್ ಮನವಿ ಪರಿಗಣಿಸಿ ಸರ್ಕಾರಕ್ಕೆ ಸೆ. 20ರೊಳಗೆ ಸರ್ಕಾರದ ವಿವರಣೆ ಹಾಗೂ ಆಕ್ಷೇಪಣೆ ಸಲ್ಲಿಕೆಗೆ ಸೂಚನೆ ನೀಡಿ, ವಿಚಾರಣೆಯನ್ನು ಸೆ. 23ಕ್ಕೆ ಮುಂದೂಡಿದೆ.

ABOUT THE AUTHOR

...view details