ಬೆಂಗಳೂರು:ವಿಶ್ವನಾಥ್, ಆರ್.ಶಂಕರ್ ಹಾಗೂ ಎಂಟಿಬಿ ನಾಗರಾಜು ಅವರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಂಡಲ್ಲಿ ಅದು ಹೈಕೋರ್ಟ್ನ ಅಂತಿಮ ತೀರ್ಪಿಗೆ ಒಳಪಡಲಿದೆ ಎಂದು ಇಂದು ನೀಡಿದ ಮದ್ಯಂತರ ಆದೇಶದಲ್ಲಿ ತಿಳಿಸಲಾಗಿದೆ.
ಮೂವರು ನೂತನ ಎಂಎಲ್ಸಿ ಗಳಿಗೆ ಸಚಿವ ಸ್ಥಾನ ನೀಡದಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ವಕೀಲ ಎ. ಹರೀಶ್ ಹಾಗೂ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಅರ್ಜಿದಾರರ ಪರ ಸುಪ್ರೀಂಕೋರ್ಟ್ ಹಿರಿಯ ವಕೀಲ ಪ್ರಶಾಂತ್ ಭೂಷಣ್ ವಾದಿಸಿದರು. ಈ ವೇಳೆ ಅವರು, ಈ ಮೂವರಿಗೆ ಶೀಘ್ರದಲ್ಲೇ ಸಚಿವ ಸ್ಥಾನ ನೀಡುವ ಮಾಹಿತಿ ಇದೆ ಎಂದು ಕೋರ್ಟ್ ಗಮನಕ್ಕೆ ತಂದರು.
ಅನರ್ಹರಾದವರು ಮರು ಆಯ್ಕೆಯಾಗಲು ಮಾತ್ರ ಅವಕಾಶವಿದೆ. ಆದರೆ ಎಚ್. ವಿಶ್ವನಾಥ್ ನಾಮನಿರ್ದೇಶಿತ ಶಾಸಕರಾಗಿದ್ದು, ಅವರ ಆಯ್ಕೆಯೇ ಸಂವಿಧಾನ ಬಾಹಿರವಾಗಿದೆ. ಇನ್ನು ಎಂಟಿಬಿ ನಾಗರಾಜ್, ಆರ್.ಶಂಕರ್ ವಿಧಾನಸಭೆಯಿಂದ ಪರಿಷತ್ ಗೆ ಆಯ್ಕೆಯಾಗಿದ್ದಾರೆ. ಹಿಂಬಾಗಿಲಿನಿಂದ ಸಚಿವ ಸ್ಥಾನ ನೀಡಲು ಮುಂದಾಗಿದ್ದು, ರಾಜ್ಯ ಸರ್ಕಾರ ಆಕ್ಷೇಪಣೆ ಸಲ್ಲಿಸಲು ವಿಳಂಬ ಮಾಡುತ್ತಿದೆ. ಹೀಗಾಗಿ ಸೂಕ್ತ ಆದೇಶ ನೀಡುವಂತೆ ಪ್ರಶಾಂತ್ ಭೂಷಣ್ ನ್ಯಾಯಾಲಯಕ್ಕೆ ಮನವಿ ಮಾಡಿದರು.
ಇದಕ್ಕೆ ಆಕ್ಷೇಪಿಸಿದ ಎಚ್. ವಿಶ್ವನಾಥ್ ಪರ ಹಿರಿಯ ವಕೀಲ ಅಶೋಕ್ ಹಾರನಹಳ್ಳಿ ಅವರು, ಸಂವಿಧಾನದ ಶೆಡ್ಯೂಲ್ ಹತ್ತರಲ್ಲಿ ಸಚಿವರಾಗಲು ಶಾಸಕರಾಗಿರಬೇಕೆಂದು ಸ್ಪಷ್ಟವಾಗಿ ಹೇಳಿದೆ. ಅದರಂತೆ ವಿಧಾನ ಪರಿಷತ್ ಸದಸ್ಯರು ಸಚಿವರಾಗಬಹುದು. ಇನ್ನು ಪರಿಷತ್ತಿಗೆ ನಾಮ ನಿರ್ದೇಶನ ಮಾಡಿರುವ ಕ್ರಮ ಕೂಡ ಕಾನೂನು ರೀತಿಯಲ್ಲೇ ನಡೆದಿದೆ. ಎಲ್ಲಿಯೂ ನಿಯಮ ಉಲ್ಲಂಘನೆಯಾಗಿಲ್ಲ ಎಂದು ತಮ್ಮ ವಾದ ಮಂಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಸರ್ಕಾರ ವಿಳಂಬ ಮಾಡದೇ ಆಕ್ಷೇಪಣೆ ಸಲ್ಲಿಸಬೇಕು ಹಾಗೂ ಆಯ್ಕೆ ಸಂಬಂಧಿತ ಕಡತಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಬೇಕು ಎಂದು ಸರ್ಕಾರದ ಪರ ವಕೀಲರಿಗೆ ಸೂಚಿಸಿತು. ಅಲ್ಲದೇ, ಅರ್ಜಿದಾರರು ಪ್ರತಿವಾದಿಗಳಾದ ಶಂಕರ್, ವಿಶ್ವನಾಥ್ ಹಾಗೂ ನಾಗರಾಜ್ ಅವರಿಗೆ ಸದ್ಯದಲ್ಲೇ ಸಚಿವ ಸ್ಥಾನ ನೀಡುವ ಸಾಧ್ಯತೆ ಇದೆ ಎಂದಿದ್ದಾರೆ. ಹೀಗಾಗಿ ಸಚಿವ ಸ್ಥಾನವು ಅರ್ಜಿಯ ಅಂತಿಮ ಆದೇಶಕ್ಕೆ ಒಳಪಟ್ಟಿರಲಿದೆ ಎಂದು ಮಧ್ಯಂತರ ಆದೇಶ ನೀಡಿ, ವಿಚಾರಣೆಯನ್ನು ನವೆಂಬರ್ 19 ಕ್ಕೆ ಮುಂದೂಡಿತು.