ಬೆಂಗಳೂರು : ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಹೆಚ್ಚುತ್ತಿದ್ದರೂ ಜನ ಮಾಸ್ಕ್ ಧರಿಸದಿರುವ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಹೈಕೋರ್ಟ್, ಈ ಸಂಬಂಧ ಪೊಲೀಸರಿಗೆ ಹೆಚ್ಚಿನ ಅಧಿಕಾರ ನೀಡುವುದು ಸೂಕ್ತವೆಂದು ಅಭಿಪ್ರಾಯ ವ್ಯಕ್ತಪಡಿಸಿದೆ.
ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸುವ ಸಂಬಂಧ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಬಿಬಿಎಂಪಿ ಪರ ವಕೀಲರು ಪಾಲಿಕೆ ವ್ಯಾಪ್ತಿಯಲ್ಲಿ 198 ಮಾರ್ಷಲ್ ಗಳು ಮಾಸ್ಕ್ ಧರಿಸದವರಿಗೆ ದಂಡ ವಿಧಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ ನಿರೀಕ್ಷಿತವಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಆಕ್ಷೇಪಿಸಿತು.
ಉತ್ತರಿಸಿದ ಪಾಲಿಕೆ ಪರ ವಕೀಲರು ಜನ ಮಾರ್ಷಲ್ ಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ, ಬದಲಿಗೆ ದಂಡ ವಿಧಿಸಲು ಮುಂದಾದಾಗ ಜಗಳಕ್ಕಿಳಿಯುತ್ತಿದ್ದಾರೆ. ಆದರೆ ಇದೇ ವಿಚಾರವಾಗಿ ಪೊಲೀಸರು ಪ್ರಶ್ನಿಸಿದರೆ ನಿಯಮ ಪಾಲಿಸುತ್ತಾರೆ ಎಂದರು.
ಅಲ್ಲದೇ, ಮಾರ್ಷಲ್ ಗಳು ಜನ ಎಲ್ಲೆಂದರಲ್ಲಿ ಕಸ ಬಿಸಾಡುದಂತೆ ತಡೆಯುವ ಘನತ್ಯಾಜ್ಯ ನಿರ್ವಹಣೆಗೆ ಸಂಬಂಧಿದ ಕೆಲಸವನ್ನೂ ನಿರ್ವಹಣೆ ಮಾಡಬೇಕಿದೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಮಾರ್ಗಸೂಚಿಗಳನ್ನು ಜನರು ಪಾಲಿಸುವಂತೆ ಕ್ರಮ ಜರುಗಿಸಲು ಸ್ಪೆಷಲ್ ಟಾಸ್ಕ್ ಫೋರ್ಸ್ ರಚಿಸಬಹುದೇ ಅಥವಾ ಪೊಲೀಸರಿಗೆ ಈ ಸಂಬಂಧ ಹೆಚ್ಚಿನ ಜವಾಬ್ದಾರಿ ಮತ್ತು ಅಧಿಕಾರ ನೀಡಬಹುದೇ ಎಂದು ವಕೀಲರಿಗೆ ಪ್ರಶ್ನಿಸಿತು. ಟ್ರಾಫಿಕ್ ಪೊಲೀಸರಿಗೆ ಈ ಜವಾಬ್ದಾರಿ ವಹಿಸಬಹುದೆಂಬ ಸಲಹೆ ಆಲಿಸಿದ ಪೀಠ, ಈ ಕುರಿತು ನಾಳೆ ಪರಿಶೀಲಿಸಿ ಆದೇಶ ಹೊರಡಿಸುವುದಾಗಿ ತಿಳಿಸಿ ವಿಚಾರಣೆಯನ್ನು ಅ.23ಕ್ಕೆ ಮುಂದೂಡಿತು.