ಕರ್ನಾಟಕ

karnataka

ETV Bharat / state

ಕೋರ್ಟ್​​ಗಳ ಮಾರ್ಗಸೂಚಿ ಪ್ರಶ್ನಿಸಿದ್ದ ಅರ್ಜಿದಾರ ವಕೀಲನಿಗೆ ಹೈಕೋರ್ಟ್​ ತೀವ್ರ ತರಾಟೆ

ಎಸ್‍ಓಪಿ ಜಾರಿಯಿಂದ ಕಕ್ಷಿದಾರರಿಗೆ ಯಾವುದೇ ಅನುಕೂಲವಿಲ್ಲ ಎಂದು ವಾದ ಮಂಡಿಸಿದ್ದ ವಕೀಲರಿಗೆ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.

High Court take charge on petitioner who has questioned the courts guidelines
ಕೋರ್ಟ್​​ಗಳ ಮಾರ್ಗಸೂಚಿ ಪ್ರಶ್ನಿಸಿದ್ದ ಅರ್ಜಿದಾರ ವಕೀಲನಿಗೆ ಹೈಕೋರ್ಟ್​ ತರಾಟೆ

By

Published : Jun 27, 2020, 12:09 AM IST

ಬೆಂಗಳೂರು:ಕೊರೊನಾ ಸೋಂಕು ನಿಯಂತ್ರಿಸುವ ಹಿನ್ನೆಲೆ ಜಿಲ್ಲಾ ಮತ್ತು ವಿಚಾರಣಾ ನ್ಯಾಯಾಲಯಗಳ ಕಾರ್ಯನಿರ್ವಹಣೆಗೆ ಹೈಕೋರ್ಟ್ ರಚಿಸಿರುವ "ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್'' (ಎಸ್‍ಓಪಿ) ಮಾರ್ಗಸೂಚಿಗಳು ಕಾನೂನು ಬಾಹಿರವಾಗಿದ್ದು, ಅವುಗಳನ್ನು ರದ್ದುಪಡಿಸುವಂತೆ ಕೋರಿ ಸಲ್ಲಿಸಿದ್ದ ಪಿಐಎಲ್ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

ಎಸ್ಒಪಿ ಮಾರ್ಗಸೂಚಿಗಳನ್ನು ಪ್ರಶ್ನಿಸಿ ವಕೀಲರೊಬ್ಬರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠದ ಶುಕ್ರವಾರ ವಿಚಾರಣೆ ನಡೆಸಿತು. ಈ ವೇಳೆ ಅರ್ಜಿದಾರರನ್ನು ಪ್ರಶ್ನಿಸಿದ ಪೀಠ, ನೀವೂ ಒಬ್ಬ ವಕೀಲರಾಗಿದ್ದೀರಿ. ಸದ್ಯದ ಪರಿಸ್ಥಿತಿ ಹೇಗಿದೆ? ಯಾವುದನ್ನು ಪ್ರಶ್ನಿಸಿ ನೀವು ಅರ್ಜಿ ಸಲ್ಲಿಸಿದ್ದೀರಿ ಎಂದು ಗೊತ್ತಿದೆಯೇ? ಎಲ್ಲ ಗೊತ್ತಿದ್ದೂ ವಾದ ಮಂಡಿಸಲು ಬಯಸುತ್ತೀರಾ? ಎಂದು ಕೇಳಿತು.

ಇದಕ್ಕೆ, ಪ್ರತಿಕ್ರಿಯಿಸಿದ ವಕೀಲರು ತಾವು ಸಿದ್ಧ ಎಂದರು. ಪೀಠ, ಮತ್ತೊಮ್ಮೆ ಯೋಚಿಸಿ ಎಂದಿತು. ಆದರೂ, ಅರ್ಜಿದಾರ ವಕೀಲರು ತಮ್ಮ ನಿಲುವಿಗೇ ಜೋತು ಬಿದ್ದರು. ಹಾಗಿದ್ದರೆ, ಎಸ್‍ಒಪಿ ಹೇಗೆ ಕಾನೂನು ಬಾಹಿರ ಆಗುತ್ತದೆಂದು ರುಜುವಾತುಪಡಿಸಿ ಎಂದು ವಕೀಲರಿಗೆ ಸೂಚಿಸಿತು.

ಬಳಿಕ ವಾದ ಮಂಡಿಸಿದ ವಕೀಲರು, ಎಸ್‍ಓಪಿ ಜಾರಿಯಿಂದ ಕಕ್ಷಿದಾರರಿಗೆ ಯಾವುದೇ ಅನುಕೂಲವಿಲ್ಲ. ಆನ್‍ಲೈನ್, ವಿಡಿಯೋ ಕಾನ್ಫರೆನ್ಸ್ ವ್ಯವಸ್ಥೆ ಹೈಕೋರ್ಟ್‍ಗೆ ಸರಿ ಹೊಂದಬಹುದು. ಆದರೆ, ಸ್ಥಳೀಯ ನ್ಯಾಯಾಲಯಗಳಿಗೆ ಸರಿ ಹೋಗುವುದಿಲ್ಲ. ಆರೋಪಿಗಳ ಹೇಳಿಕೆ ದಾಖಲಿಸುವುದಕ್ಕೂ ಆಗುತ್ತಿಲ್ಲ. ಎಸ್‍ಓಪಿ ಲಾಭ ಪಡೆದುಕೊಂಡು ಅನೇಕ ನ್ಯಾಯಾಂಗ ಅಧಿಕಾರಿಗಳು ಪ್ರಕರಣಗಳನ್ನು ಮುಂದೂಡುವುದನ್ನೇ ಅಭ್ಯಾಸ ಮಾಡಿಕೊಂಡಿದ್ದಾರೆ. ಇದರ ಬದಲು ಈ-ಮೇಲ್ ಮೂಲಕ ಕಲಾಪ ನಡೆಸಬೇಕು ಎಂದು ತಮ್ಮ ವಾದ ಸಮರ್ಥಿಸಿಕೊಂಡರು.

ವಕೀಲರ ವಾದ ಸರಣಿಗೆ ಕೋಪಗೊಂಡ ಮುಖ್ಯ ನ್ಯಾಯಮೂರ್ತಿಗಳು ಎಲ್ಲವನ್ನೂ ಕೂಲಂಕುಷವಾಗಿ ಪರಿಶೀಲಿಸಿಯೇ ನಾವು ಎಸ್​ಓಪಿ ಜಾರಿ ಮಾಡಿದ್ದೇವೆ. ಹಿರಿಯ ವಕೀಲರು, ಬಾರ್ ಕೌನ್ಸಿಲ್​, ವಕೀಲರ ಸಂಘಗಳ ಸಲಹೆ ಪಡೆದುಕೊಂಡು ಸುರಕ್ಷತೆ ದೃಷ್ಟಿಯಿಂದ ಎಸ್‍ಓಪಿ ತರಲಾಗಿದೆ. ಜೊತೆಗೆ ಸುಪ್ರೀಂಕೋರ್ಟ್ ಕೂಡ ಇದರ ಮೇಲ್ವಿಚಾರಣೆ ನಡೆಸುತ್ತಿದ್ದು, ಕಾಲ-ಕಾಲಕ್ಕೆ ಬದಲಾವಣೆ ತರಲಾಗುತ್ತಿದೆ. ಕಕ್ಷಿದಾರರ ಹಿತ ನಮ್ಮ ಆದ್ಯತೆ. ಒಬ್ಬ ವಕೀಲರಾಗಿ ಇಂತಹ ಅರ್ಜಿ ಸಲ್ಲಿಸಿರುವುದು ಅಚ್ಚರಿ ಮೂಡಿಸಿದೆ. ಹವಾನಿಯಂತ್ರಿತ ಕೊಠಡಿಗಳಲ್ಲಿ ಕುಳಿತು ಸಲಹೆ ನೀಡುವುದು ಸುಲಭ. ಪರಿಸ್ಥಿತಿ ಅರಿತು ನಡೆದುಕೊಳ್ಳಬೇಕು ಎಂದರು.

ಅಲ್ಲದೇ ಇದು ಅರ್ಜಿದಾರರಿಗೆ ದಂಡ ವಿಧಿಸಲು ಅರ್ಹ ಪ್ರಕರಣ. ಆದರೆ, ನ್ಯಾಯಮೂರ್ತಿಗಳು ದಯೆ ಮತ್ತು ವಿನಾಯಿತಿ ತೋರಬೇಕಾಗುತ್ತದೆ. ಹಾಗಾಗಿ, ಯಾವುದೇ ದಂಡವಿಲ್ಲದೆ ಅರ್ಜಿಯನ್ನು ವಜಾಗೊಳಿಸಲಾಗತ್ತಿದೆ ಎಂದು ಪೀಠ ತಿಳಿಸಿತು. ಇದಕ್ಕೂ ಮೊದಲು 10 ಲಕ್ಷ ರೂ. ದಂಡ ಹಾಕಬಹುದಲ್ಲವೇ ಎಂದು ಸರ್ಕಾರದ ಪರ ವಕೀಲರನ್ನು ಪೀಠ ಕೇಳಿತ್ತು.

ABOUT THE AUTHOR

...view details