ಬೆಂಗಳೂರು: ನ್ಯಾಯಾಂಗದ ಆದೇಶಗಳನ್ನು ಸಾಮಾನ್ಯ ಜನ ಮತ್ತು ದಾವೆದಾರರಿಗೆ ಅರ್ಥೈಸುವುದಕ್ಕಾಗಿ ಸುಪ್ರೀಂ ಕೋರ್ಟ್ ಮತ್ತು ಕರ್ನಾಟಕ ಹೈಕೋರ್ಟ್‌ನ ಒಟ್ಟು 197 ಪ್ರಮುಖ ತೀರ್ಪುಗಳನ್ನು ಕನ್ನಡೀಕರಿಸಿ ಹೈಕೋರ್ಟ್ ವೆಬ್ಸೈಟ್‌ನಲ್ಲಿ ಪ್ರಕಟಿಸಿದೆ. ಕೇರಳ, ಗುಜರಾತ್ ಮತ್ತು ಮಹಾರಾಷ್ಟ್ರ ಹೈಕೋರ್ಟ್‌ಗಳು ಈಗಾಗಲೇ ಸ್ಥಳೀಯ ಭಾಷೆಯಲ್ಲಿ ತೀರ್ಪುಗಳನ್ನು ಪ್ರಕಟಿಸಲು ಆರಂಭಿಸಿವೆ. ಆದರೆ, ಅತಿ ಹೆಚ್ಚು ತೀರ್ಪುಗಳನ್ನು ಕನ್ನಡದಲ್ಲಿ ಪ್ರಕಟಿಸಿರುವುದು ಕರ್ನಾಟಕ ಹೈಕೋರ್ಟ್ ಮಾತ್ರ ಎಂದು ತಿಳಿದು ಬಂದಿದೆ.
ಪ್ರಾರಂಭಿಕ ಹಂತದಲ್ಲಿ ಕರ್ನಾಟಕ ಹೈಕೋರ್ಟ್‌ನ 169 (https://karnatakajudiciary.kar.nic.in/hck_judgments.php) ಮತ್ತು ಸುಪ್ರೀಂ ಕೋರ್ಟ್‌ನ 28 (https://karnatakajudiciary.kar.nic.in/hck_judgments.php) ಕನ್ನಡೀಕರಿಸಿದ ತೀರ್ಪುಗಳನ್ನು ಪ್ರಕಟಿಸಲಾಗಿದೆ.
ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟಲಿಜೆನ್ಸ್) ಸಹಾಯದಿಂದ ತೀರ್ಪುಗಳು ಮತ್ತು ನ್ಯಾಯಾಂಗದ ದಾಖಲೆಗಳನ್ನು ಸ್ಥಳೀಯ ಭಾಷೆಗಳಲ್ಲಿ ಪ್ರಕಟಿಸುವ ಮೂಲಕ ನ್ಯಾಯದಾನ ಪಡೆಯುವಿಕೆ ಹೆಚ್ಚಿಸುವ ಉದ್ದೇಶ ಹೊಂದಲಾಗಿದೆ. ಕನ್ನಡ ಮತ್ತು ಇಂಗ್ಲಿಷ್ ಎರಡೂ ತೀರ್ಪುಗಳು ವೆಬ್‌ಪೇಜ್‌ನಲ್ಲಿ ಲಭ್ಯವಾಗುವಂತೆ ಮಾಡಲಾಗಿದೆ. ರಾಜ್ಯಮಟ್ಟದಲ್ಲಿ ಈ ಉದ್ದೇಶ ಸಾಧಿಸಲು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ನೇತೃತ್ವದಲ್ಲಿ ಕರ್ನಾಟಕ ಹೈಕೋರ್ಟ್ ಸಮಿತಿ ರಚಿಸಿದೆ. ಸದರಿ ಸಮಿತಿಯಲ್ಲಿ ಕರ್ನಾಟಕ ಹೈಕೋರ್ಟ್‌ನ ಮತ್ತೊಬ್ಬ ನ್ಯಾಯಮೂರ್ತಿ ಸಿ ಎಂ ಜೋಶಿ ಅವರು ಸದಸ್ಯರಾಗಿದ್ದಾರೆ. ಕರ್ನಾಟಕ ಹೈಕೋರ್ಟ್‌ನಲ್ಲಿ ಹಾಲಿ ಇರುವ ಅನುವಾದಕರ ಸಹಾಯದಿಂದ ಅನುವಾದ ಪ್ರಾಜೆಕ್ಟ್ ಅನ್ನು ಆರಂಭಿಸಲಾಗಿದೆ.
ಕರ್ನಾಟಕ ಹೈಕೋರ್ಟ್, ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಮೂಲಕ ಜನಸಾಮಾನ್ಯರಲ್ಲಿ ಕಾನೂನು ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಇದರ ಮುಂದುವರಿದ ಭಾಗವಾಗಿ ಕನ್ನಡದಲ್ಲೇ ತೀರ್ಪುಗಳು ಲಭ್ಯವಾಗುವಂತೆ ಮಾಡುತ್ತಿರುವುದು ಜನಜಾಗೃತಿ ಕಾರ್ಯಕ್ರಮಕ್ಕೆ ಅನುಕೂಲವಾಗಲಿದೆ ಎಂದು ಹೈಕೋರ್ಟ್‌ನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.