ಬೆಂಗಳೂರು:ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಅಧ್ಯಕ್ಷ ಸ್ಥಾನದಿಂದ ಶಾಂತ್ ಎ. ತಿಮ್ಮಯ್ಯ ಅವರನ್ನು ಬದಲಿಸುವ ಕುರಿತಂತೆ ಸರ್ಕಾರ ಹೊರಡಿಸಿದ್ದ ತಿದ್ದುಪಡಿ ಆದೇಶಕ್ಕೆ ಮುಂದಿನ ವಿಚಾರಣೆವರೆಗೂ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.
ಆದರೆ, ಮಧ್ಯಂತರ ತಡೆ ನೀಡಿದೆ ಎಂದ ಮಾತ್ರಕ್ಕೆ ಅರ್ಜಿದಾರರನ್ನು ಅಧ್ಯಕ್ಷರ ಹುದ್ದೆಯಲ್ಲಿ ಮುಂದುರೆಯಲು ಮುದ್ರೆ ಒತ್ತಿದೆ ಎಂದಾಗುವುದಿಲ್ಲ. ಜೊತೆಗೆ, ಅರ್ಜಿದಾರರು ಸೂಕ್ತ ಆಯ್ಕೆ ಎಂಬುದರ ಕುರಿತು ಮತ್ತಷ್ಟು ವಿಚಾರಣೆ ನಡೆಸಬೇಕಾಗಿದೆ ಎಂದು ನ್ಯಾಯಪೀಠ ತಿಳಿಸಿದೆ. ಈ ಹಿಂದೆ ನ್ಯಾಯಾಲಯ ಮಾಡಿರುವ ಆದೇಶದ ನಡುವೆ ಸಾಮ್ಯತೆ ಇದ್ದು, ಕೆಎಸ್‌ಪಿಸಿಬಿ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡುವುದಕ್ಕೂ ಮುನ್ನ ರಾಜ್ಯ ಸರ್ಕಾರವು ನ್ಯಾಯಾಲಯದಿಂದ ಪೂರ್ವಾನುಮತಿ ಪಡೆಯಬೇಕು ಎಂದು ಆದೇಶದಲ್ಲಿ ಹೇಳಲಾಗಿದೆ ಎಂದು ಪೀಠ ವಿವರಿಸಿದೆ.
ಅಲ್ಲದೆ, ಮುಂದಿನ ಶಾಂತ್ ಎ.ತಿಮ್ಮಯ್ಯ ಅವರು ಮುಂದಿನ ವಿಚಾರಣೆವರೆಗೂ ಕೆಎಸ್‌ಬಿಸಿಬಿ ಅಧ್ಯಕ್ಷರ ಹುದ್ದೆಯಲ್ಲಿ ಮುಂದುವರೆಯಬಹುದಾಗಿದೆ. ಆದರೆ, ಯಾವುದೇ ರೀತಿಯ ನೀತಿ ನಿರೂಪಗಳ ಕುರಿತು ಕ್ರಮಕ್ಕೆ ಮುಂದಾಗುವಂತಿಲ್ಲ ಎಂದು ಕೋರ್ಟ್ ತಿಳಿಸಿದೆ. ಕೆಎಸ್‌ಪಿಸಿಬಿ ಅಧ್ಯಕ್ಷ ಸ್ಥಾನದಿಂದ ತಮ್ಮ ಅಧಿಕಾರವಧಿಯನ್ನು ಮೊಟಕುಗೊಳಿಸಿದ್ದ ಕ್ರಮವನ್ನು ಪ್ರಶ್ನಿಸಿ ಹಾಲಿ ಅಧ್ಯಕ್ಷ ಶಾಂತ್.ಎ. ತಿಮ್ಮಯ್ಯ ಸಲ್ಲಿಸಿರುವ ತಕರಾರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ. ಅಲ್ಲದೆ, ಮುಂದಿನ ವಿಚಾರಣೆ ವೇಳೆಗೆ ಅರ್ಜಿದಾರರು ಮತ್ತು ಸರ್ಕಾರ ತಮ್ಮ ಲಿಖಿತ ಹೇಳಿಕೆಗಳನ್ನು ಸಲ್ಲಿಸಬೇಕು ಎಂದು ಸೂಚಿಸಿ ವಿಚಾರಣೆಯನ್ನು ಎರಡು ವಾರಗಳ ಕಾಲ ಮುಂದೂಡಿತು.