ಬೆಂಗಳೂರು: ನಗರದ ವಿಲ್ಸನ್ ಗಾರ್ಡನ್ ರೌಡಿ ನಾಗನ ಕೊಲೆ ಪ್ರಕರಣದಲ್ಲಿ ಸಂಚು ರೂಪಿಸಿದ್ದಾರೆಂಬ ಆರೋಪದ ಮೇಲೆ ಸುನೀಲ ಅಲಿಯಾಸ್ ಸೈಲೆಂಟ್ ಸುನೀಲ್ ವಿರುದ್ಧದ ಪ್ರಕರಣದ ತನಿಖೆಗೆ ಹೈಕೋರ್ಟ್ ಶನಿವಾರ ಮಧ್ಯಂತರ ತಡೆ ನೀಡಿದೆ. ತನ್ನ ವಿರುದ್ಧ ದಾಖಲಾಗಿದ್ದ ಪ್ರಕರಣದ ರದ್ದು ಕೋರಿ ಸುನೀಲ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾ.ಕೆ.ನಟರಾಜನ್ ಅವರಿದ್ದ ಏಕಸದಸ್ಯಪೀಠ ಈ ಮಧ್ಯಂತರ ತಡೆಯಾಜ್ಞೆ ನೀಡಿ ಆದೇಶಿಸಿತು.
ಸೈಲೆಂಟ್ ಸುನೀಲ್ ಪರ ವಕೀಲರ ವಾದ: ಪೊಲೀಸರು ವಿನಾಕಾರಣ ಪ್ರಕರಣದಲ್ಲಿ ಸಿಲುಕಿಸಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ಎನ್ನಲಾದ ಸಮಿಉಲ್ಲಾ ಖಾನ್ ಎಂಬಾತನ ಹೇಳಿಕೆ ಆಧರಿಸಿ ಅರ್ಜಿದಾರರ ವಿರುದ್ಧ ಕೇಸ್ ದಾಖಲು ಮಾಡಿರುವುದು ಕಾನೂನುಬಾಹಿರ ಕ್ರಮ. ಉದ್ದೇಶ ಪೂರ್ವಕವಾಗಿಯೇ ಸೈಲೆಂಟ್ ಸುನೀಲನನ್ನು ಆರೋಪಿಯಾಗಿಸಲಾಗಿದೆ ಎಂದು ವಿಚಾರಣೆಯಲ್ಲಿ ಅರ್ಜಿದಾರರ ಪರ ವಕೀಲರು ತಿಳಿಸಿದರು.
ಅರ್ಜಿದಾರರ ವಿರುದ್ಧ ಮಾಡಿರುವ ಆರೋಪಕ್ಕೆ ಯಾವುದೇ ಸಾಕ್ಷ್ಯವಿಲ್ಲ. ಆದರೂ ಆರೋಪಿಯ ಹೇಳಿಕೆ ಆಧರಿಸಿ ದಾಖಲಿಸಿರುವ ಪ್ರಕರಣ ಕಾನೂನಿನಲ್ಲಿ ಊರ್ಜಿತವಾಗುವುದಿಲ್ಲ. ಹಾಗಾಗಿ ಪ್ರಕರಣದ ತನಿಖೆಯನ್ನು ರದ್ದುಗೊಳಿಸಬೇಕು ಎಂದು ಅವರು ಕೋರಿದರು. ಈ ಮನವಿ ಪರಿಗಣಿಸಿರುವ ನ್ಯಾಯಪೀಠ, ಪ್ರಕರಣದ ತನಿಖೆಗೆ ಮಧ್ಯಂತರ ತಡೆ ನೀಡಿ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಮುಂದೂಡಿತು.
ರೌಡಿ ಸುನೀಲನ ಕ್ರೈಂ ಹಿಸ್ಟರಿ: ಬೆಂಗಳೂರಿನ ಪ್ರಕಾಶ ನಗರದ ನಿವಾಸಿಯಾಗಿರುವ ಸೈಲೆಂಟ್ ಸುನೀಲ ಕುಖ್ಯಾತ ರೌಡಿ. ಬೆಂಗಳೂರಿನ ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆಯಲ್ಲಿ ಈತನ ವಿರುದ್ಧ ಮೊದಲು ರೌಡಿ ಶೀಟ್ ತೆರೆಯಲಾಗಿತ್ತು. ಹತ್ತನೇ ತರಗತಿಯಲ್ಲಿ ಓದುತ್ತಿದ್ದಾಗ ಕ್ರಿಕೆಟ್ ಆಡುವ ವಿಚಾರದಲ್ಲಿ ಜಗಳವಾಡಿದ್ದಕ್ಕಾಗಿ ಬಾಲಾಪರಾಧಿಯಾಗಿ ಜೈಲು ಪಾಲಾಗಿದ್ದ. ವಾಸ್ತವವಾಗಿ, ಸೈಲೆಂಟ್ ಸುನೀಲ್ ವಿರುದ್ಧ 1996ರಿಂದ ಇಲ್ಲಿಯವರೆಗೆ 4 ಕೊಲೆ ಯತ್ನ, 6 ಕೊಲೆ, 2 ಜೋಡಿ ಕೊಲೆ ಸೇರಿದಂತೆ ಒಟ್ಟು 17 ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 16 ಪ್ರಕರಣಗಳು ನ್ಯಾಯಾಲಯದಲ್ಲಿ ಖುಲಾಸೆಗೊಂಡಿವೆ. ನ್ಯಾಯಾಲಯದಲ್ಲಿ ಒಂದು ಪ್ರಕರಣ ಮಾತ್ರ ಬಾಕಿ ಇದೆ. ಅದಕ್ಕೂ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಇದೀಗ ವಿಲ್ಸನ್ ಗಾರ್ಡನ್ ರೌಡಿ ನಾಗನ ಕೊಲೆಗೆ ಸಂಚು ರೂಪಿಸಿದ ಪ್ರಕರಣದಲ್ಲಿ ಸೈಲೆಂಟ್ ಸುನೀಲನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದರು.
ವಕೀಲರಿಂದ ಬೆಂಗಳೂರಿಗೆ ಪಾದಯಾತ್ರೆ:ವಕೀಲರ ರಕ್ಷಣಾ ಕಾಯ್ದೆಯನ್ನು ಜಾರಿಗೆ ತರಲು ಒತ್ತಾಯಿಸಿ ಕರ್ನಾಟಕ ರಾಜ್ಯ ವಕೀಲರ ಸಹಯೋಗದೊಂದಿಗೆ ಬಳ್ಳಾರಿಯಿಂದ ಬೆಂಗಳೂರಿಗೆ ವಕೀಲರ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಬಳ್ಳಾರಿ ಜಿಲ್ಲಾ ನ್ಯಾಯಾಲಯದ ಆವರಣದಿಂದ ಜ.26ರಂದು ಹೊರಡಲಿರುವ ಪಾದಯಾತ್ರೆ ಅನಂತಪುರ (ಆಂಧ್ರಪ್ರದೇಶ)-ಚಿತ್ರದುರ್ಗ-ತುಮಕೂರು-ಬೆಂಗಳೂರು ಗ್ರಾಮಾಂತರ-ಬೆಂಗಳೂರು ನಗರ ಜಿಲ್ಲೆಗಳಲ್ಲಿ ಸಾಗಲಿದೆ. ಮಾರ್ಗದುದ್ದಕ್ಕೂ ವಿವಿಧ ಜಿಲ್ಲೆಗಳ ವಕೀಲರು ಪಾದಯಾತ್ರೆಯಲ್ಲಿ ಪಾಲ್ಗೊಂಡು ಬೆಂಬಲ ಸೂಚಿಸಲಿದ್ದಾರೆ. ಫೆ.8ರ ಸಂಜೆ ಪಾದಯಾತ್ರೆ ಬೆಂಗಳೂರಿನ ಫ್ರೀಡಂ ಪಾರ್ಕ್ ತಲುಪಲಿದ್ದು, ಫೆ.9ರ ಮಧ್ಯಾಹ್ನ 12 ಗಂಟೆಗೆ ರಾಜಭವನಕ್ಕೆ ತೆರಳಿ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಕೆಲಸವಿಲ್ಲದೆ ವಿನಾಕಾರಣ ಕೋರ್ಟ್ಗೆ ಬಂದರೆ ಜೈಲಿಗೆ ಕಳುಹಿಸಲಾಗುವುದು : ಹೈಕೋರ್ಟ್ ಎಚ್ಚರಿಕೆ