ಬೆಂಗಳೂರು :ವಿಜಯಪುರಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧದ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪ ಪ್ರಕರಣಕ್ಕೆ ಹೈಕೋರ್ಟ್ ತಡೆ ನೀಡಿದೆ. ಯತ್ನಾಳ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಶಾಸಕರು ಮತ್ತು ಸಂಸದರ ವಿಶೇಷ ನ್ಯಾಯಪೀಠದ ನ್ಯಾಯಾಧೀಶರಾದ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.
ಅಲ್ಲದೇ, ಪ್ರಕರಣ ಸಂಬಂಧ ಗದಗದ 1ನೇ ಹೆಚ್ಚುವರಿ ಜೆಎಂಎಫ್ಸಿ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ವಿಚಾರಣೆಗೆ ತಡೆ ನೀಡಿದೆ. ಜೊತೆಗೆ, ಮೂಲ ದೂರುದಾರರಾದ ಮಂಜುನಾಥ್ ಕಲಬುರಗಿ ಅವರಿಗೆ ನೋಟಿಸ್ ಜಾರಿ ಮಾಡಿ, ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿರುವ ಕೋರ್ಟ್ ವಿಚಾರಣೆ ಮುಂದೂಡಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಪ್ರಕರಣದ ಮೂಲ ದೂರುದಾರರು ಅರ್ಜಿದಾರರ ರಾಜಕೀಯ ವರ್ಚಸ್ಸಿಗೆ ಧಕ್ಕೆ ತರುವ ಉದ್ದೇಶದಿಂದ ದೂರು ನೀಡಿದ್ದಾರೆ. ಅರ್ಜಿದಾರರ ಎದುರಾಳಿಗಳ ಜೊತೆ ಸೇರಿ ರಾಜಕೀಯ ಪಿತೂರಿ ನಡೆಸಿ ದೂರು ನೀಡಲಾಗಿದೆ. ದೂರಿನಲ್ಲಿ ಉಲ್ಲೇಖವಾದ ಅಂಶಗಳನ್ನು ಸೇರಿಸಿ ಗದಗ ಜಿಲ್ಲಾ ನ್ಯಾಯಾಲಯ ಕಾಗ್ನಿಜೆನ್ಸ್ ಪಡೆದು ಸಮನ್ಸ್ ಜಾರಿ ಮಾಡಿದೆ. ಹಾಗಾಗಿ ಮಧ್ಯಂತರ ತಡೆ ನೀಡಬೇಕು ಎಂದು ಕೋರಿದರು. ಇದನ್ನು ನ್ಯಾಯಪೀಠ ಮಾನ್ಯ ಮಾಡಿದ್ದು, ವಿಚಾರಣೆಗೆ ತಡೆ ನೀಡಿದೆ.