ಬೆಂಗಳೂರು: ಲಾಲ್ ಬಾಗ್ನಲ್ಲಿದ್ದ ನರ್ಸರಿಮೆನ್ ಕೋ ಆಪರೇಟಿವ್ ಸೊಸೈಟಿ ಲಿಮಿಟೆಡ್‌ನ ನರ್ಸರಿ ನಡೆಸಲು ನೀಡಿದ್ದ ಗುತ್ತಿಗೆ ರದ್ದುಗೊಳಿಸಿದ್ದ ಸರ್ಕಾರದ ನಿರ್ಧಾರಕ್ಕೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.
ನರ್ಸರಿಗೆ ಏಕಾಏಕಿ ಬೀಗ ಹಾಕಿರುವುದರಿಂದ ಅಕ್ಟೋಬರ್ 21ರಿಂದ ರೂ.1 ಕೋಟಿಯಿಂದ 1.5 ಕೋಟಿಯಷ್ಟು ಗಿಡಗಳಿಗೆ ನೀರುಣಿಸಲಾಗದೇ ಸೊಸೈಟಿಯ ಆದಾಯಕ್ಕೆ ನಷ್ಟ ಉಂಟಾಗಿದೆ. ಹೀಗಾಗಿ ತಕ್ಷಣವೇ ನ್ಯಾಯಾಲಯ ಮಧ್ಯಪ್ರವೇಶ ಮಾಡಬೇಕು ಎಂದು ನರ್ಸರಿಮೆನ್ ಕೋ ಆಪರೇಟಿವ್ ಸೊಸೈಟಿಯ ಉಪಾಧ್ಯಕ್ಷ ಗೋವಿಂದ್ ಮತ್ತು ಸದಸ್ಯ ನಿರ್ದೇಶಕ ಆರ್ ರವಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರು ಈ ಮಧ್ಯಂತರ ಆದೇಶ ನೀಡಿದ್ದಾರೆ.
ಸರ್ಕಾರವು 1991ರ ಫೆಬ್ರವರಿಯಿಂದ ಜಾರಿಗೆ ಬರುವಂತೆ ಲಾಲ್‌ಬಾಗ್‌ನಲ್ಲಿ ಒಂದು ಎಕರೆ 29 ಗುಂಟೆ ಭೂಮಿಯನ್ನು 25 ವರ್ಷಗಳ ಅವಧಿಗೆ ನರ್ಸರಿ ಸೇವೆಗಳನ್ನು ನಡೆಸಲು ಗುತ್ತಿಗೆ ರೂಪದಲ್ಲಿ ಪರವಾನಗಿ ನೀಡಿತ್ತು. ಗುತ್ತಿಗೆ ಅವಧಿಯು 2016ರಲ್ಲಿ ಪೂರ್ಣಗೊಂಡಿತ್ತು.
ಇದಕ್ಕೂ ಮುನ್ನ ಸೊಸೈಟಿ ಸರ್ಕಾರಕ್ಕೆ ಪತ್ರ ಬರೆದು ಮತ್ತೆ 25 ವರ್ಷಗಳವರೆಗೆ ಗುತ್ತಿಗೆ ನವೀಕರಿಸಲು ಮನವಿ ಮಾಡಿದೆ. ಆದರೆ, ಸರ್ಕಾರವು ಯಾವುದೇ ನಿರ್ಧಾರ ತೆಗೆದುಕೊಳ್ಳಲಿಲ್ಲ. ಆದರೆ, 2016 ಮತ್ತು 2022ರ ನಡುವೆ ಸರ್ಕಾರಕ್ಕೆ ಅಗತ್ಯ ತೆರಿಗೆಗಳನ್ನು ಪಾವತಿಸಲಾಗಿದೆ. ಆದರೆ, ಸರ್ಕಾರ ಏಕಾಏಕಿ ಈ ನಿರ್ಧಾರ ತೆಗೆದುಕೊಂಡಿದೆ ಎಂದು ಅರ್ಜಿಯಲ್ಲಿ ಕೋರಲಾಗಿದೆ.
ಇದನ್ನೂ ಓದಿ:ಡ್ರಗ್ಸ್ ಮಾರಾಟ ಮಾಡುತ್ತಿದ್ದ ವಿದ್ಯಾರ್ಥಿಗೆ ಜಾಮೀನು ನಿರಾಕರಿಸಿದ ಹೈಕೋರ್ಟ್