ಬೆಂಗಳೂರು :ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆರೋಪಿ ಹಾಗೂ ಕೇರಳದ ಸಿಪಿಎಂ ನಾಯಕ ಕೊಡಿಯೇರಿ ಬಾಲಕೃಷ್ಣನ್ ಪುತ್ರ ಬಿನೇಶ್ ಕೊಡಿಯೇರಿ ಅವರ ವಿರುದ್ಧ ಜಾರಿ ನಿರ್ದೇಶನಾಲಯದ ಪ್ರಕ್ರಿಯೆಗೆ ಹೈಕೋರ್ಟ್ ಇಂದು ಮಧ್ಯಂತರ ತಡೆಯಾಜ್ಞೆ ನೀಡಿದೆ.
ಬಿನೇಶ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್ ಚಂದನ್‌ಗೌಡರ್ ಅವರಿದ್ದ ನ್ಯಾಯಪೀಠ ಈ ಆದೇಶ ಮಾಡಿತು. ಆರೋಪ ನಿಗದಿ ಮಾಡುವ ಪ್ರಕ್ರಿಯೆ ವಿಚಾರಣಾಧೀನ ನ್ಯಾಯಾಲಯದಲ್ಲಿ ಆಗಸ್ಟ್ 18ರಂದು ನಿಗದಿಯಾಗಿದ್ದು, ಮುಂದಿನ ವಿಚಾರಣೆವರೆಗೆ ತಡೆ ನೀಡಲಾಗಿದೆ.
ವಿಚಾರಣೆಯಲ್ಲಿ ಅರ್ಜಿದಾರರ ಪರ ವಕೀಲರು, ಎನ್‌ಡಿಪಿಸಿ ಕಾಯಿದೆಯಡಿ ಬಿನೇಶ್ ವಿಧೇಯ ಅಪರಾಧದ (ವಿಸ್ತೃತದ ಅಪರಾಧದ ಭಾಗ) ಆರೋಪಿಯಲ್ಲ. ಈಚೆಗೆ ವಿಜಯ್ ಮದನ್‌ಲಾಲ್ ಪ್ರಕರಣದಲ್ಲಿ, ಸುಪ್ರೀಂ ಕೋರ್ಟ್ ತೀರ್ಪಿನನ್ವಯ ಅಕ್ರಮ ಹಣ ವರ್ಗಾವಣೆ ಕಾಯಿದೆಯಡಿ ಪ್ರಕರಣ ಮುಂದುವರಿಸಲಾಗದು ಎಂದು ವಾದ ಮಂಡಿಸಿದರು.