ಬೆಂಗಳೂರು :ಸ್ವಾತಂತ್ರ್ಯ ಹೋರಾಟಗಾರರಿಗೆ ಪಿಂಚಣಿ ನೀಡಲು ಅಸಾಧ್ಯವಾದ ದಾಖಲೆಗಳನ್ನು ಕೇಳಬಾರದು. ಅವರಿಗೆ ಪಿಂಚಣಿ ನೀಡುವುದು ಗೌರವಪೂರ್ವಕವಾಗಿ. ಹೀಗಾಗಿ, ದಾಖಲೆಗಳನ್ನು ಕೇಳುವಾಗ ಅಧಿಕಾರಿಗಳು ಅಥವಾ ಸರ್ಕಾರ ಸೌಮ್ಯವಾಗಿ ವರ್ತಿಸಬೇಕು ಎಂದು ಹೈಕೋರ್ಟ್ ಸೂಚಿಸಿದೆ.
ಕಳೆದ ಎರಡು ದಶಕಗಳಿಂದ ಪಿಂಚಣಿ ನೀಡಿಲ್ಲ ಎಂದು ಬಳ್ಳಾರಿ ಜಿಲ್ಲೆಯ ಕಮಲಾಪುರ ನಿವಾಸಿ ಗುಂಡುರಾವ್ ದೇಸಾಯಿ (94) ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯಲ್ಲಿ ತಾವು ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಎರಡು ಬಾರಿ ಜೈಲಿಗೆ ಹೋಗಿದ್ದೇನೆ.
ಈ ಹಿನ್ನೆಲೆಯಲ್ಲಿ 1998ರಲ್ಲಿ ಪಿಂಚಣಿ ಕೋರಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದು, ಅರ್ಜಿಯನ್ನು ಈವರೆಗೆ ಪರಿಗಣಿಸಿಲ್ಲ. ಬದಲಿಗೆ ಸರ್ಕಾರದ ನಿಯಮದಂತೆ ಸಹ ಕೈದಿಯಾಗಿ ಜೈಲು ಶಿಕ್ಷೆ ಅನುಭವಿಸಿರುವ ಇಬ್ಬರು ಸಹಕೈದಿಗಳ ಪ್ರಮಾಣ ಪತ್ರಗಳನ್ನು ಕೇಳಿದ್ದಾರೆ. ಒಬ್ಬರ ಸಹಬಂಧಿ ಪ್ರಮಾಣ ಪತ್ರ ಸಲ್ಲಿಸಿದ್ದರೂ ಪರಿಗಣಿಸಿಲ್ಲ ಎಂದು ವಿವರಿಸಿದ್ದರು.
ಅರ್ಜಿ ವಿಚಾರಣೆ ವೇಳೆ ಸರ್ಕಾರ ಹಾಗೂ ಬಳ್ಳಾರಿ ಜಿಲ್ಲಾಧಿಕಾರಿ ವಿರುದ್ಧ ಬೇಸರ ವ್ಯಕ್ತಪಡಿಸಿರುವ ನ್ಯಾ. ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ಪೀಠ, ಸ್ವಾತಂತ್ರ್ಯ ಹೋರಾಟಗಾರರ ವಿಚಾರದಲ್ಲಿ ಈ ರೀತಿ ನಡೆದುಕೊಂಡಿರುವುದು ಸರಿಯಾದ ಕ್ರಮವಲ್ಲ.
ಈಗ ಎರಡು ಬಾರಿ ಸಹಕೈದಿಯಾಗಿರುವ ಕುರಿತು ದಾಖಲೆ ಕೇಳಿದರೆ ಎಲ್ಲಿಂದ ತಂದು ಒದಗಿಸಲು ಸಾಧ್ಯ. ಹೋರಾಟಗಾರರ ವಿಚಾರದಲ್ಲಿ ಹೀಗೆ ನಡೆದುಕೊಳ್ಳುವುದು ಸರ್ಕಾರಕ್ಕೆ ಗೌರವ ತಂದುಕೊಡುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದೆ.
ಅಲ್ಲದೇ, ಲಭ್ಯವಿರುವ ದಾಖಲೆಗಳನ್ನು ಆಧರಿಸಿ ಸ್ವಾತಂತ್ರ್ಯ ಹೋರಾಟಗಾರರಾದ ಗುಂಡೂರಾವ್ ದೇಸಾಯಿ ಅವರಿಗೆ ಕೂಡಲೇ ಪಿಂಚಣಿ ಮಂಜೂರು ಮಾಡಬೇಕು. ಆರು ವಾರಗಳಲ್ಲಿ ಪಿಂಚಣಿ ಮಂಜೂರು ಮಾಡದಿದ್ದರೆ ಬಳ್ಳಾರಿ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಹಾಗೂ ತಹಶೀಲ್ದಾರ್ ದಿನಕ್ಕೆ 1 ಸಾವಿರದಂತೆ ಪಾವತಿಸಬೇಕು ಎಂದು ಎಚ್ಚರಿಕೆ ನೀಡಿದೆ.
ಓದಿ: ಕಲಬುರಗಿ ಪಾಲಿಕೆ ಮೈತ್ರಿ ಕಸರತ್ತು: ಹೆಚ್ಡಿಕೆ ಭೇಟಿಗೆ ಬಿಡದಿಗೆ ತೆರಳಿದ ಆರ್. ಅಶೋಕ್!