ಕರ್ನಾಟಕ

karnataka

ETV Bharat / state

ಬೆಂಗಳೂರಿನ ಶೌಚಾಲಯಗಳ ನಿರ್ವಹಣೆ ಕುರಿತು ಸರ್ಕಾರದ ಮೌನ : ಹೈಕೋರ್ಟ್​​ ತರಾಟೆ - High court slams BBMP

ಬೆಂಗಳೂರಿನ ಸಾರ್ವಜನಿಕ ಶೌಚಾಲಯಗಳ ನಿರ್ವಹಣೆ ಬಗ್ಗೆ ಮೂರು ವಾರಗಳಲ್ಲಿ ಪರಿಷ್ಕೃತ ವರದಿ ಸಲ್ಲಿಕೆ ಮಾಡುವಂತೆ ಬಿಬಿಎಂಪಿಗೆ ಹೈಕೋರ್ಟ್​ ನಿರ್ದೇಶನ ನೀಡಿದೆ.

High court slams BBMP and government on Maintenance of toilets in Bengaluru
ನಗರದ ಶೌಚಾಲಯಗಳ ನಿರ್ವಹಣೆ ಕುರಿತು ಸರ್ಕಾರ ಮೌನ

By

Published : Aug 9, 2023, 7:01 AM IST

ಬೆಂಗಳೂರು :ನಗರದಲ್ಲಿನ ಸಾರ್ವಜನಿಕ ಶೌಚಾಲಯಗಳ ನಿರ್ವಹಣೆ ವಿಚಾರದಲ್ಲಿ ಬಿಬಿಎಂಪಿ ನಿರ್ಲಕ್ಷ್ಯ ಹಾಗೂ ರಾಜ್ಯ ಸರ್ಕಾರದ ಮೌನವನ್ನು ಹೈಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ. ಅಲ್ಲದೇ, ಈ ಸಂಬಂಧ ಯಾವ ಕ್ರಮ ಕೈಗೊಳ್ಳಲಿದ್ದಾರೆ ಎಂಬುದರ ಸಂಬಂಧ ಮುಂದಿನ ಮೂರು ವಾರಗಳಲ್ಲಿ ಹೊಸದಾಗಿ ಪರಿಷ್ಕೃತ ವರದಿ ಸಲ್ಲಿಸುವಂತೆ ಕೋರ್ಟ್​ ನಿರ್ದೇಶನ ನೀಡಿದೆ.

ನಗರದಲ್ಲಿನ ಸಾರ್ವಜನಿಕ ಶೌಚಾಲಯಗಳ ಸ್ಥಿತಿಗತಿ ಮತ್ತು ನಿರ್ವಹಣೆಗೆ ಸಂಬಂಧಿಸಿದಂತೆ ಲೆಟ್ಜ್‌ಕಿಟ್ ಫೌಂಡೇಷನ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ಹಾಗೂ ನ್ಯಾಯಮೂರ್ತಿ ಎಂ.ಜಿ.ಎಸ್ ಕಮಾಲ್ ಅವರಿದ್ದ ವಿಭಾಗೀಯ ಪೀಠವು ಈ ಸೂಚನೆ ನೀಡಿ ವಿಚಾರಣೆ ಮುಂದೂಡಿದೆ.

ವಿಚಾರಣೆ ವೇಳೆ ನಗರದಲ್ಲಿನ ಶೌಚಾಲಯಗಳ ನಿರ್ವಹಣೆಗೆ ಸಂಬಂಧಿಸಿದಂತೆ ಬಿಬಿಎಂಪಿ ಸಲ್ಲಿಸಿದ ವರದಿಯ ನ್ಯೂನತೆಗಳನ್ನು ಅರ್ಜಿದಾರರ ಪರ ವಕೀಲ ಪುತ್ತಿಗೆ ರಮೇಶ್ ಅವರು ನ್ಯಾಯಪೀಠದ ಗಮನಕ್ಕೆ ತಂದರು. ಇದನ್ನು ಪರಿಶೀಲಿಸಿದ ನ್ಯಾಯಪೀಠ ವರದಿಯಲ್ಲಿ ಆಗಿರುವುದಕ್ಕಿಂತ ಆಗದಿರುವುದೇ ಹೆಚ್ಚಿದೆ. ಅದನ್ನೂ ಬಿಬಿಎಂಪಿ ಒಪ್ಪಿಕೊಂಡಿದೆ. ಆದರೆ, ಮಾಡಬೇಕಾಗಿದ್ದರ ಬಗ್ಗೆ ಏನೂ ಹೇಳಿಲ್ಲ. ಸಾಕಷ್ಟು ಕೆಲಸ ಆಗಿದೆ ಎಂದು ಬಿಬಿಎಂಪಿ ಹೇಳುತ್ತಿದೆ. ಆದರೆ, ವರದಿಯಲ್ಲಿ ಅದಕ್ಕೆ ವ್ಯತಿರಿಕ್ತವಾದ ಅಂಶಗಳು ಕಾಣುತ್ತಿವೆ ಎಂದು ಬೇಸರ ವ್ಯಕ್ತ ವ್ಯಕ್ತಪಡಿಸಿತು.

ಅಲ್ಲದೆ, ಶೌಚಾಲಯಗಳು ಶುಚಿತ್ವದಿಂದ ಕೂಡಿವೆ ಎಂಬ ಸಿದ್ಧ ಉತ್ತರವಿದೆ. ಒಂದೊಮ್ಮೆ ಒಳ್ಳೆಯ ಕೆಲಸ ಮಾಡಿದ್ದರೆ ಅದನ್ನು ಹೇಳಲು ಬಿಬಿಎಂಪಿಯನ್ನು ತಡೆದವರು ಯಾರು. ಯಾರು ಅಧಿಕಾರಿಗಳ ಕೈ ಕಟ್ಟಿ ಹಾಕಿದ್ದಾರೆ ಎಂದು ಬಿಬಿಎಂಪಿಯನ್ನು ತರಾಟೆಗೆ ತೆಗೆದುಕೊಂಡಿತು.

ಎಲ್ಲವೂ ಸರಿ ಇಲ್ಲ:ಬಿಬಿಎಂಪಿ ಸಲ್ಲಿಸಿದ ವರದಿ ಪರಿಶೀಲಿಸಿದರೆ ಯಾವುದೂ ಸರಿ ಇಲ್ಲ. ಆದ್ದರಿಂದ ಮೂರು ವಾರಗಳಲ್ಲಿ ಹೊಸದಾಗಿ ವಿವರವಾದ ವರದಿ ಸಲ್ಲಿಸಬೇಕು. ಅದರಲ್ಲಿ ಶೌಚಾಲಯ ನಿರ್ವಹಣೆಗೆ ಕೈಗೊಳ್ಳಬೇಕಾಗಿರುವ ಕ್ರಮಗಳೇನು, ಒಂದೊಮ್ಮೆ ಕ್ರಮ ರೂಪಿಸಿದ್ದರೆ ಅದಕ್ಕೆ ಕಾಲಮಿತಿ ಏನು? ಅಲ್ಲದೇ ನಗರದಲ್ಲಿನ ಸಾರ್ವಜನಿಕ ಶೌಚಾಲಯಗಳ ನಿರ್ವಹಣೆಗೆ ಬಿಬಿಎಂಪಿ ಬಳಿ ಸಲಹೆಗಳೇನಾದರೂ ಇದ್ದರೆ ಅದನ್ನು ವರದಿಯಲ್ಲಿ ಸೇರಿಸಬೇಕು ಎಂದು ಬಿಬಿಎಂಪಿಗೆ ನ್ಯಾಯಪೀಠ ನಿರ್ದೇಶನ ನೀಡಿ ವಿಚಾರಣೆ ಮುಂದೂಡಿದೆ.

ಸರ್ಕಾರದ ಮೌನಕ್ಕೆ ಪೀಠ ಬೇಸರ:ಈ ಪ್ರಕರಣವು 2018ರಿಂದ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಆದರೆ, ರಾಜ್ಯ ಸರ್ಕಾರ ಈವರೆಗೆ ಈ ವಿಚಾರವಾಗಿ ಒಂದೇ ಒಂದು ಪ್ರಮಾಣಪತ್ರ ಸಲ್ಲಿಸಿಲ್ಲ. ಬೆಂಗಳೂರು ನಿವಾಸಿಗಳಿಗೆ ಸಂಬಂಧಿಸಿದ ಸಾರ್ವಜನಿಕ ಮಹತ್ವದ ಇಂತಹ ವಿಷಯದಲ್ಲೂ ರಾಜ್ಯ ಸರ್ಕಾರ ಕಣ್ಣು ಮುಚ್ಚಿರುವುದು ಮೌನವಾಗಿರುವುದು ಅಚ್ಚರಿ ತರಿಸಿದೆ ಎಂದು ಹೇಳಿದ ನ್ಯಾಯಪೀಠ, ಮೂರು ವಾರಗಳಲ್ಲಿ ವರದಿ ಸಲ್ಲಿಸಲು ರಾಜ್ಯ ಸರ್ಕಾರಕ್ಕೂ ನಿರ್ದೇಶನ ನೀಡಿ ವಿಚಾರಣೆ ಮುಂದೂಡಿತು.

ಇದನ್ನೂ ಓದಿ:ಶೈಲೇಶ್ ಪ್ರಕರಣ: ಸೌದಿ ಅರೇಬಿಯಾದಿಂದ ಶಿಕ್ಷೆಯ ಪ್ರತಿ ಪಡೆದುಕೊಳ್ಳುವಂತೆ ಕೇಂದ್ರಕ್ಕೆ ಹೈಕೋರ್ಟ್ ಸೂಚನೆ

ABOUT THE AUTHOR

...view details