ಬೆಂಗಳೂರು:ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ವೇಳೆ ರಾಜಕೀಯ ಕಾರ್ಯದರ್ಶಿಯಾಗಿ ಎನ್.ಆರ್. ಸಂತೋಷ್ ನೇಮಕ ಮಾಡಿ ಹೊರಡಿಸಿದ್ದ ಆದೇಶವನ್ನು ಹಿಂಪಡೆಯಲಾಗಿದೆ ಎಂದು ಸರ್ಕಾರ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಹೈಕೋರ್ಟ್ ಪ್ರಕರಣ ಇತ್ಯರ್ಥಪಡಿಸಿದೆ.
ಬಿಎಸ್ವೈ ಅವರ ಆಪ್ತ ಸಹಾಯಕ ಸಂತೋಷ್ ಅವರನ್ನು ಕಾನೂನು ಬಾಹಿರವಾಗಿ ಸಿಎಂ ರಾಜಕೀಯ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ ಎಂದು ಆಕ್ಷೇಪಿಸಿ ನಗರದ ವಕೀಲ ಎಸ್. ಉಮಾಪತಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಇಂದು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ, ಸರ್ಕಾರದ ಪರ ವಕೀಲರು ಹಾಜರಾಗಿ ಎನ್ಆರ್ ಸಂತೋಷ್ ಅವರ ನೇಮಕಾತಿ ಆದೇಶವನ್ನು ಆ.02ರಂದು ಸರ್ಕಾರ ಹಿಂಪಡೆದಿದೆ ಎಂದು ತಿಳಿಸಿದರು. ಹೇಳಿಕೆ ದಾಖಲಿಸಿಕೊಂಡ ಪೀಠ, ಅರ್ಜಿಯ ಹೆಚ್ಚಿನ ವಿಚಾರಣೆ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟು ಅರ್ಜಿ ಇತ್ಯರ್ಥಪಡಿಸಿ ಆದೇಶಿಸಿತು.
ಪ್ರಕರಣ ಹಿನ್ನೆಲೆ :
ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ವೇಳೆ ಅವರ ಆಪ್ತ ಸಹಾಯಕ ಎನ್ಆರ್ ಸಂತೋಷ್ ಅವರನ್ನು ರಾಜಕೀಯ ಕಾರ್ಯದರ್ಶಿಯಾಗಿ 2020ರ ಜೂನ್ .22 ರಂದು ನೇಮಕ ಮಾಡಿದ್ದರು. ಈ ಆದೇಶವನ್ನು ಪ್ರಶ್ನಿಸಿದ್ದ ಅರ್ಜಿದಾರರು, ಶಾಸಕರೂ ಆಗಿರದ ಖಾಸಗಿ ವ್ಯಕ್ತಿಗೆ ಕ್ಯಾಬಿನೆಟ್ ಸ್ಥಾನಮಾನ ನೀಡಲಾಗಿದೆ. ಕೇವಲ ಯಡಿಯೂರಪ್ಪ ಅವರ ಲಿಖಿತ ಸೂಚನೆ ಮೇರೆಗೆ ಸಂತೋಷ್ ಅವರನ್ನು ರಾಜಕೀಯ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ. ಇದು ಕಾನೂನುಬಾಹಿರ, ಇಂತಹ ಹುದ್ದೆಗೆ ನೇಮಿಸುವ ಕುರಿತು ಸಂವಿಧಾನದಲ್ಲಿ ಯಾವ ಮಾಹಿತಿಯೂ ಇಲ್ಲ. ಯಾವುದೇ ಶಾಸನ ಅಥವಾ ನಿಯಮಗಳ ಆಧಾರವಿಲ್ಲದೇ ಓರ್ವ ವ್ಯಕ್ತಿಗೆ ಹೀಗೆ ನೀಡಿರುವ ಹುದ್ದೆಯನ್ನು ರದ್ದುಪಡಿಸಬೇಕು ಎಂದು ಕೋರಿದ್ದರು.
ಓದಿ: ಜಾರಕಿಹೊಳಿ ಮನೆಯಲ್ಲಿ ಕೆಲ ಶಾಸಕರು ಸೇರಿದ್ದಕ್ಕೆ ಅಪಾರ್ಥ ಕಲ್ಪಿಸುವುದು ಬೇಡ ; ಸಚಿವ ಬಿ ಸಿ ಪಾಟೀಲ್
ಸಂತೋಷ್ ನೇಮಕಕ್ಕೆ ಸಂಬಂಧಿಸಿದಂತೆ ಮೊದಲಿಗೆ ಸಿಎಂ ಸೂಚನೆ ಮೇರೆಗೆ ಹೊರಡಿಸಿದ್ದ ಆದೇಶವನ್ನು ಹಿಂಪಡೆಯಲಾಗಿತ್ತು. ಸಿಎಂ ಆಪ್ತ ಸಹಾಯಕ ಎಂಬ ಕಾರಣಕ್ಕೆ ಚಿಕ್ಕ ವಯಸ್ಸಿನ ಸಂತೋಷ್ಗೆ ಕ್ಯಾಬಿನೆಟ್ ಸ್ಥಾನಮಾನದ ಹುದ್ದೆ ನೀಡಿದ್ದು, ಖುದ್ದು ಪಕ್ಷದ ನಾಯಕರಲ್ಲೂ ಅಸಮಾಧಾನ ವ್ಯಕ್ತವಾಗುವಂತೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ಮೊದಲು ಹೊರಡಿಸಿದ್ದ ಆದೇಶನವನ್ನು ಸರ್ಕಾರ ಹಿಂಪಡೆದಿತ್ತು. ಆದರೆ, ಎರಡನೇ ಬಾರಿ ಹುದ್ದೆ ಪಡೆಯುವಲ್ಲಿ ಸಂತೋಷ್ ಯಶಸ್ವಿಯಾಗಿದ್ದರು. ಆ ಬಳಿಕ ಹೈಕೋರ್ಟ್ಗೆ ಪಿಐಎಲ್ ಸಲ್ಲಿಸಲಾಗಿತ್ತು.