ಕರ್ನಾಟಕ

karnataka

ETV Bharat / state

ಕಾಯಿದೆ ಜಾರಿಗೂ ಮುನ್ನ ಓಸಿ ಪಡೆದ ವಸತಿ ಯೋಜನೆ ಮೇಲೆ ರೇರಾ ಪ್ರಾಧಿಕಾರಕ್ಕೆ ಅಧಿಕಾರವಿಲ್ಲ - ಬೆಂಗಳೂರು ರಿಯಲ್ ಎಸ್ಟೇಟ್

ಮೆಸರ್ಸ್ ಪ್ರಾವಿಡೆಂಟ್ ಹೌಸಿಂಗ್ ಲಿಮಿಟೆಡ್‌ ಎಂಬ ಬಿಲ್ಡರ್ ಸಂಸ್ಥೆಯ ಅರ್ಜಿಯನ್ನು ಹೈಕೋರ್ಟ್ ಮಾನ್ಯ ಮಾಡಿ, ರೇರಾ ನೀಡಿದ್ದ ಆದೇಶ ರದ್ದುಗೊಳಿಸಿದೆ.

ಹೈಕೋರ್ಟ್
ಹೈಕೋರ್ಟ್

By

Published : Jan 6, 2023, 7:22 AM IST

ಬೆಂಗಳೂರು:ರಿಯಲ್ ಎಸ್ಟೇಟ್ ಅಭಿವೃದ್ಧಿ ಮತ್ತು ನಿಯಂತ್ರಣ ಕಾಯಿದೆ(ರೇರಾ) ಜಾರಿಗೂ ಮುನ್ನ ಭಾಗಶಃ ಸ್ವಾಧೀನಾನುಭವ ಪತ್ರ (ಓಸಿ) ಪಡೆದಿದ್ದ ವಸತಿ ಯೋಜನೆಗಳ ಮೇಲೆ ರೇರಾ ಪ್ರಾಧಿಕಾರಕ್ಕೆ ಅಧಿಕಾರವಿಲ್ಲ ಎಂದು ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ರೇರಾ ಆದೇಶ ಪ್ರಶ್ನಿಸಿ ಮೆಸರ್ಸ್ ಪ್ರಾವಿಡೆಂಟ್ ಹೌಸಿಂಗ್ ಲಿಮಿಟೆಡ್ ಸಲ್ಲಿಸಿದ್ದ ಅರ್ಜಿ ಮಾನ್ಯ ಮಾಡಿರುವ ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠದಿಂದ ಈ ಆದೇಶ ಹೊರಬಿದ್ದಿದೆ.

ಅಲ್ಲದೇ, ಪ್ರಾಧಿಕಾರ ಗೃಹ ಖರೀದಿದಾರರೊಬ್ಬರಿಗೆ ಹಣವನ್ನು ಮರುಪಾವತಿ ಮಾಡುವಂತೆ ಮೆಸರ್ಸ್ ಪ್ರಾವಿಡೆಂಟ್ ಹೌಸಿಂಗ್ ಲಿಮಿಟೆಡ್‌ಗೆ ನಿರ್ದೇಶನ ನೀಡಿ ಹೊರಡಿಸಿದ್ದ ಆದೇಶವನ್ನೂ ಕೋರ್ಟ್‌ ರದ್ದುಗೊಳಿಸಿತು. ವಿಚಾರಣೆ ವೇಳೆ ಅರ್ಜಿದಾರರ ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಕಾಯಿದೆ ಜಾರಿಗೆ ಬರುವ ಮುನ್ನ ಅಂದರೆ 2016ರಲ್ಲಿಯೇ ಸ್ವಾಧೀನಾನುಭವ ಪತ್ರ ಪಡೆದಿರುವುದು ಸರಿಯಷ್ಟೇ, ಆ ಬಗ್ಗೆ ಯಾವುದೇ ತಕರಾರು ಇಲ್ಲ. ಆದ್ದರಿಂದ ಕೆ-ರೇರಾ ನಿಯಮಾವಳಿಯ ನಿಯಮ-4ರ ಪ್ರಕಾರ ಆ ವಸತಿ ಯೋಜನೆ ಕಾಮಗಾರಿ ಪ್ರಗತಿಯಲ್ಲಿರುವ ಯೋಜನೆಯ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ಸ್ಪಷ್ಟಪಡಿಸಿತು.

ರೇರಾ ತನ್ನ ವ್ಯಾಪ್ತಿಯನ್ನು ಮೀರಿ ಆದೇಶ ನೀಡಿದೆ. ಕಾನೂನಿನಲ್ಲಿ ಅದಕ್ಕೆ ಮಾನ್ಯತೆ ಇಲ್ಲ. ಹಾಗೆ ಕಾನೂನಿನ ಮನ್ನಣೆ ಇಲ್ಲವಾದರೆ ಅದು ಊರ್ಜಿತವಾಗುವುದಿಲ್ಲ. ಹೀಗಾಗಿ ಈ ರೀತಿಯ ಆದೇಶಗಳನ್ನು ರದ್ದುಪಡಿಸಬೇಕಾಗುತ್ತದೆ ಎಂದು ನ್ಯಾಯಪೀಠ ತಿಳಿಸಿತು.

ಇದನ್ನೂ ಓದಿ:ಮಂತ್ರಿ ಡೆವಲಪರ್ಸ್​ನಿಂದ ಮನೆ ಖರೀದಿಗೆ ಸಾಲ ಪಡೆದವರ ಸಿಬಿಲ್​ ಸ್ಕೋರ್ ಮರು ಸ್ಥಾಪಿಸಲು ಹೈಕೋರ್ಟ್​ ಸೂಚನೆ

ಪ್ರಕರಣದ ಹಿನ್ನೆಲೆ ಏನು?:ಮಂಗಳೂರು ಮೂಲದ ಶ್ಯಾಮ್ ಶೆಟ್ಟಿ ಎಂಬುವರು ಮೆಸರ್ಸ್ ಪ್ರಾವಿಡೆಂಟ್ ಹೌಸಿಂಗ್ ಲಿಮಿಟೆಡ್‌ನೊಂದಿಗೆ 2014ರಲ್ಲಿ ಫ್ಲಾಟ್ ಖರೀದಿ ಒಪ್ಪಂದ ಮಾಡಿಕೊಂಡಿದ್ದರು. ಬಿಡಿಎ ನೀಡಿದ್ದ ಕಮೆನ್ಸ್​​ಮೆಂಟ್ ಸರ್ಟಿಫಿಕೇಟ್ ಆಧರಿಸಿ ಅರ್ಜಿದಾರರು ಫ್ಲಾಟ್ ಖರೀದಿಗೆ ಮುಂದಾಗಿದ್ದರು. ಬಿಲ್ಡರ್ 2015ರಲ್ಲಿ ಬಿಡಿಎಗೆ ಭಾಗಶಃ ಓಸಿ ನೀಡುವಂತೆ ಮನವಿ ಸಲ್ಲಿಸಿತ್ತು ಮತ್ತು ಬಿಡಿಎ 2015ರ ನ.18ರಂದು ಪಾರ್ಶಿಯಲ್ ಓಸಿಯನ್ನು ನೀಡಿತ್ತು.

2017ರಲ್ಲಿ ಬಿಡಿಎ ಎರಡನೇ ಒಸಿಯನ್ನೂ ಸಹ ಮಂಜೂರು ಮಾಡಿತ್ತು. ಆದರೆ ಶೆಟ್ಟಿ ಅವರಿಗೆ ಅಪಾರ್ಟ್‌ಮೆಂಟ್ ನಿರ್ಮಾಣವಾಗುತ್ತಿರುವ ಜಾಗದ ಮಾಲೀಕತ್ವವನ್ನು ಬಿಲ್ಡರ್ ಕಂಪನಿ ಹೊಂದಿಲ್ಲವೆಂಬ ಮಾಹಿತಿ ಮೇರೆಗೆ ಫ್ಲಾಟ್ ಖರೀದಿ ಕರಾರು ರದ್ದುಪಡಿಸಿಕೊಂಡರು. ಅದರಂತೆ ಬಿಲ್ಡರ್ ಕಂಪನಿ 2017ರಲ್ಲಿ ಒಪ್ಪಂದ ರದ್ದುಗೊಳಿಸಿ 17.85 ಲಕ್ಷ ರು.ಗಳನ್ನು ಹಿಂತಿರುಗಿಸಿತ್ತು. ನಂತರ ರೇರಾ ಮೊರೆ ಹೋದ ಅರ್ಜಿದಾರರು ತಮಗೆ ಇನ್ನೂ 6.84 ಲಕ್ಷ ರು. ಬಡ್ಡಿ ಸಮೇತ ಹಣವನ್ನು ನೀಡುವಂತೆ ಬಿಲ್ಡರ್ ಆದೇಶಿಸಬೇಕೆಂದು ಕೋರಿದ್ದರು. ರೇರಾ ಪ್ರಾಧಿಕಾರ 2020ರ ಸೆ.30ರಂದು ಶೆಟ್ಟಿ ಅವರಿಗೆ 6.84 ಲಕ್ಷ ರು.ಹಣ ಮರುಪಾವತಿಗೆ ಆದೇಶಿಸಿತ್ತು. ಅದನ್ನು ಬಿಲ್ಡರ್ ಕಂಪನಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. ಇದೀಗ ಹೈಕೋರ್ಟ್, ಬಿಲ್ಡರ್ ಕಂಪನಿಯ ಅರ್ಜಿಯನ್ನು ಮಾನ್ಯ ಮಾಡಿ ರೇರಾ ಪ್ರಾಧಿಕಾರ ಹೊರಡಿಸಿದ್ದ ನಿರ್ದೇಶನವನ್ನು ರದ್ದುಗೊಳಿಸಿದೆ. ರೇರಾ ಕಾಯ್ದೆ ಜಾರಿ ಮುನ್ನ ಓಸಿ ಪಡೆದಿದ್ದ ವಸತಿ ಯೋಜನೆಗಳ ಮೇಲೆ ರೇರಾ ಪ್ರಾಧಿಕಾರಕ್ಕೆ ಅಧಿಕಾರವಿಲ್ಲ ಎಂದು ಹೈಕೋರ್ಟ್​ ಆದೇಶಿಸಿದೆ.

ಇದನ್ನೂ ಓದಿ: ರೆಡ್ಡಿ ಅಕ್ರಮ ಆಸ್ತಿ ಮುಟ್ಟುಗೋಲು : ಅನುಮೋದನೆ ನೀಡುವಂತೆ ಸರ್ಕಾರಕ್ಕೆ ನಿರ್ದೇಶಿಸಲು ಸಿಬಿಐ ಹೈಕೋರ್ಟ್ ಮೊರೆ

ABOUT THE AUTHOR

...view details