ಬೆಂಗಳೂರು: ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ 2ನೇ ಹಂತದ ವಾಣಿಜ್ಯ ಬಂದರು ಅಭಿವೃದ್ಧಿ ಯೋಜನೆಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನೀಡಿರುವ ಸಮ್ಮತಿ ಕಾನೂನು ಬಾಹಿರ ಹಾಗೂ ಅಕ್ರಮ ಎಂದು ಹೈಕೋರ್ಟ್ ಆದೇಶಿಸಿದೆ.
ಉತ್ತರ ಕನ್ನಡ ಜಿಲ್ಲೆಯ ಬೈತಕುಳ ಬಂದರು ನಿರಾಶ್ರಿತರ ಯಾಂತ್ರಿಕೃತ ದೋಣಿ ಮೀನುಗಾರರ ಸಹಕಾರ ಸಂಘ ನಿಯಮಿತ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ತೀರ್ಪು ಪ್ರಕಟಿಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ನೀಡಿದೆ. ಸಾಗರ ಮಾಲಾ ಯೋಜನೆಯಡಿ 2ನೇ ಹಂತದ ಬಂದರು ಅಭಿವೃದ್ದಿ ಯೋಜನೆಗೆ ಮಾಲಿನ್ಯ ನಿಯಂತ್ರಣ ಮಂಡಳಿ ನೀಡಿರುವ ಅನುಮತಿ ಅಕ್ರಮ ಎಂದು ಆದೇಶಿಸಿರುವ ಪೀಠ, ಪರಿಸರ ನಿಯಮಗಳಿಗೆ ಅನುಗುಣವಾಗಿ ಹೊಸದಾಗಿ ಕೆಎಸ್ಪಿಸಿಬಿಯಿಂದ ಅನುಮತಿ ಪಡೆಯುವವರೆಗೆ ಕಾಮಗಾರಿ ಪ್ರಾರಂಭಿಸುವಂತಿಲ್ಲ ಎಂದು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.