ಬೆಂಗಳೂರು :ಗಂಡ ತನ್ನನ್ನು ತ್ಯಜಿಸಿದ ನಂತರ ಎರಡು ಮದುವೆಯಾಗಿದ್ದು, ಅಪ್ರಾಪ್ತ ಮಗಳನ್ನು ನೋಡಲು ಒಮ್ಮೆಯೂ ಬರಲಿಲ್ಲ. ಅಂತಹವರಿಗೆ ಮಗಳನ್ನು ಭೇಟಿ ಮಾಡುವ ಹಕ್ಕು ನೀಡಬಾರದು ಎಂಬ ಮಹಿಳೆಯ ವಾದವನ್ನು ಒಪ್ಪದ ಹೈಕೋರ್ಟ್, ಮಗಳನ್ನು ಭೇಟಿ ಮಾಡಲು ತಂದೆಗೆ ಅನುಮತಿ ನೀಡಿ ಕೌಟುಂಬಿಕ ನ್ಯಾಯಾಲಯ ಹೊರಡಿಸಿದ್ದ ಆದೇಶವನ್ನು ಎತ್ತಿಹಿಡಿದಿದೆ. ಕೌಟುಂಬಿಕ ನ್ಯಾಯಾಲಯದ ಆದೇಶ ರದ್ದು ಕೋರಿ ಮಹಿಳೆಯೊಬ್ಬರು ಸಲ್ಲಿಸಿದ್ದ ಮೇಲ್ಮನವಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅಲೋಕ್ ಆರಾಧೆ ಮತ್ತು ವಿಜಯಕುಮಾರ್ ಎ. ಪಾಟೀಲ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ಮಾಡಿತು.
ಮೇಲ್ಮನವಿದಾರೆಯ ಪತಿ ಆಕೆಯಿಂದ ವಿಚ್ಛೇದನ ಪಡೆದ ನಂತರ ಎರಡು ಮದುವೆಯಾಗಿದ್ದಾರೆ. ವಿಚ್ಛೇದಿತ ಪತಿಯ ಎರಡನೇ ಪತ್ನಿಯು ತನ್ನ ಮೊದಲನೇ ಪತಿಯಿಂದ ಒಂದು ಮಗುವನ್ನು ಹೊಂದಿದ್ದಾರೆ. ಆಕೆಯ ಮಗ ಸಹ ವಿಚ್ಛೇದಿತ ಪತಿಯ ಸುಪರ್ದಿಯಲ್ಲಿದ್ದಾನೆ. ಮೇಲ್ಮನವಿದಾರೆಯ ಅಪ್ರಾಪ್ತ ಮಗಳ ಭೇಟಿಯ ಹಕ್ಕನ್ನು ವಿಚ್ಛೇದಿತ ಪತಿಗೆ ದಯಪಾಲಿಸಿದರೆ, ಕ್ಷೇಮವಾಗಿರುವ ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಈ ಆತಂಕವನ್ನು ಪರಿಗಣಿಸಿಯೇ ಕೌಟುಂಬಿಕ ನ್ಯಾಯಾಲಯವು ಅಪ್ರಾಪ್ತ ಮಗಳ ಶಾಶ್ವತ ಸುಪರ್ದಿಯನ್ನು ತಾಯಿಗೆ ನೀಡಿ, ಕೇವಲ ಭೇಟಿಯ ಹಕ್ಕನ್ನು ತಂದೆಗೆ ನೀಡಿದೆ ಎಂದು ಅಭಿಪ್ರಾಯಪಟ್ಟ ಹೈಕೋರ್ಟ್, ಅಪ್ರಾಪ್ತ ಮಗಳ ಭೇಟಿಯ ಹಕ್ಕನ್ನು ಮೇಲ್ಮನವಿದಾರಳ ವಿಚ್ಛೇದಿತ ಪತಿಗೆ ಅನುಮತಿ ನೀಡಿದೆ.
ಜೊತೆಗೆ, ತಿಂಗಳಲ್ಲಿ ಎರಡು ಭಾನುವಾರದಂದು ಮಗಳನ್ನು ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಭೇಟಿ ಮಾಡಬಹುದು. ಮೇಲ್ಮನವಿದಾರೆಯ ಮನೆಯಿಂದ ಮಗಳನ್ನು ಕರೆದುಕೊಂಡು ಹೋಗಬೇಕು ಮತ್ತು ವಾಪಸ್ ತಂದು ಬಿಡಬೇಕು. ಅಪ್ರಾಪ್ತ ಮಗಳನ್ನು ಕರೆದುಕೊಂಡು ಹೋಗುವಾಗ ಮೊದಲ ಮಗ ಜೊತೆಗಿರಬೇಕು. ಎಲ್ಲಾ ಖರ್ಚು ವೆಚ್ಚ ಮತ್ತು ಶಿಕ್ಷಣದ ಖರ್ಚುಗಳನ್ನು ಮೇಲ್ಮನವಿದಾರೆಗೆ ವರ್ಗಾವಣೆ ಮಾಡಬೇಕು. ಮಗಳನ್ನು ಸುರಕ್ಷತೆಯಿಂದ ನೋಡಿಕೊಳ್ಳಬೇಕು. ಸುಪರ್ದಿಯಲ್ಲಿರುವ ಸಂದರ್ಭದಲ್ಲಿ ಮಗಳನ್ನು ಬೇರೊಬ್ಬ ವ್ಯಕ್ತಿಯ ಜೊತೆಗೆ ಬಿಡಬಾರದು ಎಂದು ಷರತ್ತು ವಿಧಿಸಿ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಮಾರ್ಪಡಿಸಿದೆ.