ಬೆಂಗಳೂರು: ಸಾರ್ವಜನಿಕ ಸೇವೆ ಒದಗಿಸದ ಖಾಸಗಿ ವಾಹನಗಳಲ್ಲಿ ಪ್ರಯಾಣಿಸುವ ಸಹ ಪ್ರಯಾಣಿಕರು ಅಥವಾ ಹಿಂಬದಿ ಸವಾರರು ಥರ್ಡ್ ಪಾರ್ಟಿ ವಿಮೆ ಪರಿಹಾರ ವ್ಯಾಪ್ತಿಗೆ ಬರುವುದಿಲ್ಲ ಎಂದಿರುವ ಹೈಕೋರ್ಟ್, ವಾಹನದ ಮಾಲಿಕರೇ ಪರಿಹಾರ ಪಾವತಿಸಬೇಕು ಎಂದು ಮಹತ್ವದ ಆದೇಶ ಹೊರಡಿಸಿದೆ.
ಖಾಸಗಿ ವಾಹನಗಳಲ್ಲಿ ಪ್ರಯಾಣಿಸುವ ವೇಳೆ ಸಂಭವಿಸಿದ ಅಪಘಾತಗಳಲ್ಲಿ ಮೃತಪಟ್ಟ ವ್ಯಕ್ತಿಗಳ ಕುಟುಂಬಗಳಿಗೆ ಪರಿಹಾರ ನೀಡಿದ್ದನ್ನು ಪ್ರಶ್ನಿಸಿ ವಿಮಾ ಕಂಪನಿಗಳು, ಕೆಲ ಪ್ರಕರಣಗಳಲ್ಲಿ ಪರಿಹಾರ ಕೋರಿ ಮೃತರ ಕುಟುಂಬ ಸದಸ್ಯರು, ಮತ್ತೆ ಕೆಲ ಪ್ರಕರಣಗಳಲ್ಲಿ ಪರಿಹಾರ ಮೊತ್ತ ಭರಿಸುವ ಹೊಣೆ ಪ್ರಶ್ನಿಸಿ ವಾಹನಗಳ ಮಾಲೀಕರು ಸೇರಿ ಒಟ್ಟು 21 ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿದ್ದವು. ಈ ಎಲ್ಲಾ ಅರ್ಜಿಗಳನ್ನು ವಿಚಾರಣೆ ನಡೆಸಿರುವ ನ್ಯಾ. ಸಂಜೀವ್ ಕುಮಾರ್ ಹಂಚಾಟೆ ಅವರಿದ್ದ ಏಕಸದಸ್ಯ ಪೀಠ ಈ ತೀರ್ಪು ನೀಡಿದೆ.
ಪೀಠ ತನ್ನ ತೀರ್ಪಿನಲ್ಲಿ, ಕಾರು, ಜೀಪು ಸೇರಿದಂತೆ ಖಾಸಗಿ ವಾಹನಗಳಲ್ಲಿ ಪ್ರಯಾಣಿಸುವ ಸಹ ಪ್ರಯಾಣಿಕರು ಅಥವಾ ದ್ವಿಚಕ್ರ ವಾಹನಗಳ ಹಿಂಬದಿ ಸವಾರರನ್ನು ಥರ್ಡ್ ಪಾರ್ಟಿ ಎಂದು ಪರಿಗಣಿಸಲು ಬರುವುದಿಲ್ಲ. ಹೀಗಾಗಿ ಅವರಿಗೆ ಥರ್ಡ್ ಪಾರ್ಟಿ ವಿಮೆ ಅಡಿಯಲ್ಲಿ ಪರಿಹಾರ ನೀಡಲು ಬರುವುದಿಲ್ಲ. ಆದರಂತೆ ಥರ್ಡ್ ಪಾರ್ಟಿ ವಿಮೆ ಹೊಂದಿರುವ ವಾಹನ ಅಪಘಾತಕ್ಕೆ ಒಳಗಾದಾಗ, ಅಪಘಾತದಲ್ಲಿ ಗಾಯಗೊಂಡ ಅಥವಾ ಸಾವನ್ನಪ್ಪಿದವರಿಗೆ ವಿಮಾ ಸಂಸ್ಥೆಗಳು ಪರಿಹಾರ ನೀಡುವ ಬಾಧ್ಯತೆ ಹೊಂದಿರುವುದಿಲ್ಲ.
ಓದಿ: ಇಂದಿನಿಂದ ಹೊಸ ವಾಹನ ವಿಮೆ ಜಾರಿ: ಬೈಕ್-5,000, ಕಾರು-15,000 ರೂ.ಯಷ್ಟು ಅಗ್ಗ, ಹೇಗೆ ಗೊತ್ತೇ?
ಖಾಸಗಿ ವಾಹನಗಳ ವಿಚಾರದಲ್ಲಿ ವಿಮಾ ಸಂಸ್ಥೆಯ ನಿಯಮಗಳು ಭಿನ್ನವಾಗಿರುತ್ತವೆ. ಥರ್ಡ್ ಪಾರ್ಟಿ ವಿಮೆ ಪಾಲಿಸಿ ಹೊಂದಿರುವ ವಾಹನ ಅಪಘಾತಕ್ಕೆ ಕಾರಣವಾದಾಗ ಅದರಿಂದ ಹಾನಿಗೆ ಒಳಗಾದವರು ಮಾತ್ರ ವಿಮಾ ಪರಿಹಾರಕ್ಕೆ ಅರ್ಹರಿರುತ್ತಾರೆ. ವಾಹನದ ಚಾಲಕ ಅಥವಾ ಸಹ ಪ್ರಯಾಣಿಕ ಅಥವಾ ಹಿಂಬದಿ ಸವಾರನಿಗೆ ಇದು ಅನ್ವಯಿಸುವುದಿಲ್ಲ. ಇಂತಹ ಸಂದರ್ಭದಲ್ಲಿ ವಾಹನದ ಮಾಲಿಕನೇ ಪರಿಹಾರಕ್ಕೆ ಬಾಧ್ಯನಾಗಿರುತ್ತಾನೆ.
ಥರ್ಡ್ ಪಾರ್ಟಿ ವಿಮೆ ಅಡಿಯಲ್ಲಿ ಚಾಲಕ, ಸಹ ಪ್ರಯಾಣಿಕ ಅಥವಾ ಹಿಂಬದಿ ಸವಾರನಿಗೆ ವಿಮೆ ಅನ್ವಯಿಸಬೇಕಿದ್ದರೆ ಹೆಚ್ಚುವರಿ ಪ್ರೀಮಿಯಂ ಪಾವತಿಸಬೇಕು. ಹೀಗೆ ಹೆಚ್ಚುವರಿ ವಿಮೆ ಪಡೆದುಕೊಳ್ಳುವುದು ಐಚ್ಛಿಕವಾಗಿರುತ್ತದೆ. ಹೀಗೆ ಹೆಚ್ಚುವರಿ ಪ್ರೀಮಿಯಂ ಪಾವತಿಸದೆ ಇದ್ದರೆ ಚಾಲಕ ಅಥವಾ ಸಹ ಪ್ರಯಾಣಿಕನಿಗೆ ಅಥವಾ ಹಿಂಬದಿ ಸವಾರನಿಗೆ ಥರ್ಡ್ ಪಾರ್ಟಿ ಅಡಿ ವಿಮಾ ಪರಿಹಾರ ಪಡೆಯಲು ಬರುವುದಿಲ್ಲ.
ಓದಿ: ವಾಹನ ಮಾಲೀಕರ ಜೇಬಿಗೆ ಕತ್ತರಿ... ಏರಿಕೆಯಾಗಲಿದೆ ಥರ್ಡ್ ಪಾರ್ಟಿ ವಿಮೆ ಕಂತು?
ಸಾರ್ವಜನಿಕ ಸೇವೆ ಕಲ್ಪಿಸುವ ಖಾಸಗಿ ವಾಹನಗಳಲ್ಲಿ ಟಿಕೆಟ್ ನೀಡಿ ಹಣ ಪಡೆದು ಅಥವಾ ಬಾಡಿಗೆ ಆಧಾರದಲ್ಲಿ ಪ್ರಯಾಣಿಕರನ್ನು ಕರೆದೊಯ್ಯಲಾಗುತ್ತದೆ. ಆದರೆ ಸಾರ್ವಜನಿಕ ಸೇವೆಗೆ ಒಳಪಡದ ಖಾಸಗಿ ವ್ಯಕ್ತಿಗಳ ವಾಹನಗಳಲ್ಲಿ ಪ್ರಯಾಣಿಕರು ಟಿಕೆಟ್ ಪಡೆಯುವುದಿಲ್ಲ ಅಥವಾ ಬಾಡಿಗೆ ನೀಡಿ ಪ್ರಯಾಣಿಸುವುದಿಲ್ಲ. ಹಾಗೊಂದು ವೇಳೆ ನೀಡಿದರೂ ಅಥವಾ ಪಡೆದರೂ ಅದು ಕಾನೂನು ಬಾಹಿರವಾಗಿರುವುದರಿಂದ ವಾಹನದ ಮಾಲೀಕನೇ ಪರಿಹಾರ ನೀಡುವ ಜವಾಬ್ದಾರಿ ಹೊಂದಿರುತ್ತಾನೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಥರ್ಡ್ ಪಾರ್ಟಿ ವಿಮೆ ಪರಿಹಾರಕ್ಕೆ ಸಂಬಂಧಿಸಿದ ಕೆಲವೊಂದು ಪ್ರಕರಣಗಳಲ್ಲಿ ವಿಚಾರಣಾ ನ್ಯಾಯಾಲಯಗಳು ಪರಿಹಾರ ಪಾವತಿಸುವ ಹೊಣೆಯನ್ನು ವಿಮಾ ಕಂಪನಿಗಳ ಮೇಲೆ ಹೊರಿಸಿದ್ದವು. ಮತ್ತೆ ಕೆಲವು ಪ್ರಕರಣಗಳಲ್ಲಿ ವಾಹನಗಳ ಮಾಲೀಕರ ಮೇಲೆ ಹೊರಿಸಲಾಗಿತ್ತು. ಇನ್ನು ಕೆಲ ಪ್ರಕರಣಗಳಲ್ಲಿ ಪರಿಹಾರ ನಿರಾಕರಿಸಲಾಗಿತ್ತು.