ಬೆಂಗಳೂರು :ವಿಪತ್ತು ನಿರ್ವಹಣಾ ಕಾಯ್ದೆ ಜಾರಿಗೆ ಬಂದು 15 ವರ್ಷ ಕಳೆದಿದ್ರೂ ಈವರೆಗೆ ರಾಜ್ಯ ಮತ್ತು ಜಿಲ್ಲಾಮಟ್ಟಗಳಲ್ಲಿ ವಿಪತ್ತು ಪರಿಹಾರ ನಿಧಿ ಸ್ಥಾಪಿಸದ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿರುವ ಹೈಕೋರ್ಟ್, ಕೂಡಲೇ ನಿಧಿ ಸ್ಥಾಪಿಸಬೇಕು ಎಂದು ತಾಕೀತು ಮಾಡಿದೆ.
ಕಾಯ್ದೆಯನ್ನು ರಾಜ್ಯದಲ್ಲಿ ಸಮರ್ಪಕವಾಗಿ ಜಾರಿಗೊಳಿಸುವಂತೆ ಕೋರಿ ಹೈಕೋರ್ಟ್ ಕಾನೂನು ಸೇವಾ ಪ್ರಾಧಿಕಾರ ಹಾಗೂ ತುಮಕೂರಿನ ಮಲ್ಲಿಕಾರ್ಜುನ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಸಲ್ಲಿಸಿದ್ದ ಲಿಖಿತ ಮಾಹಿತಿ ಪರಿಶೀಲಿಸಿದ ಪೀಠ, ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿತು. ಕಾಯ್ದೆಯನ್ನ ಸಮರ್ಥವಾಗಿ ಜಾರಿಗೊಳಿಸಿರುವುದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಕಳೆದ ಒಂದೂವರೆ ವರ್ಷದಿಂದ ಹಲವು ನಿರ್ದೇಶನಗಳನ್ನು ನೀಡಿದೆ. ವಿಪತ್ತು ನಿರ್ವಹಣಾ ಕಾಯ್ದೆ ಜಾರಿಗೆ, ಹಾಗಿದ್ದರೂ ಸರ್ಕಾರ ಸರಿಯಾದ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ.
ಸಾಮಾನ್ಯವಾಗಿ ಸಿಎಸ್ಗಳನ್ನು ನ್ಯಾಯಾಲಯಕ್ಕೆ ಕರೆಸುವುದಿಲ್ಲ. ಆದರೆ, ಸರ್ಕಾರ ಇದೇ ರೀತಿ ನಡೆದುಕೊಂಡರೆ ಮುಖ್ಯ ಕಾರ್ಯದರ್ಶಿ ನ್ಯಾಯಾಲಯಕ್ಕೆ ಬಂದು ವಿವರಣೆ ನೀಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿತು.
ಪೀಠದ ಅಸಮಾಧಾನಕ್ಕೆ ಕಾರಣ: ಕಾಯ್ದೆಯು ಸೆಕ್ಷನ್ 48ರ ಪ್ರಕಾರ ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ವಿಪತ್ತು ಪರಿಹಾರ ನಿಧಿ ಸ್ಥಾಪಿಸುವಂತೆ ಹೈಕೋರ್ಟ್ ಹಿಂದಿನ ಎರಡು ವಿಚಾರಣೆ ಸಂದರ್ಭದಲ್ಲಿಯೂ ಸರ್ಕಾರಕ್ಕೆ ಆದೇಶ ನೀಡಿ ಪ್ರಮಾಣ ಪತ್ರ ಸಲ್ಲಿಸುವಂತೆ ನಿರ್ದೇಶಿಸಿತ್ತು.
ಆದರೆ, ಸಿಎಸ್ ರವಿಕುಮಾರ್ ಸಲ್ಲಿಸಿದ್ದ ಪ್ರಮಾಣ ಪತ್ರದಲ್ಲಿ ವಿಪತ್ತು ನಿಧಿಯನ್ನು ಮುಂದಿನ ಹಣಕಾಸು ವರ್ಷದಲ್ಲಿ ಸ್ಥಾಪಿಸುವುದಾಗಿ ತಿಳಿಸಿದ್ದರು. ಜತೆಗೆ, ಕೇಂದ್ರ ಸರ್ಕಾರ ಕಾಯ್ದೆ ಜಾರಿ ಕುರಿತು ನಿಯಮಗಳನ್ನು ಪ್ರಕಟಿಸಿಲ್ಲ. ಹೀಗಾಗಿಯೇ, ಈವರೆಗೆ ನಿಧಿ ಸ್ಥಾಪಿಸಿಲ್ಲ ಎಂದು ಸಬೂಬು ಹೇಳಿತ್ತು.
ಈ ವಾದ ತಿರಸ್ಕಿರಿಸಿರುವ ಪೀಠ, ಸೆಕ್ಷನ್ 48ರ ಪ್ರಕಾರ ಕೂಡಲೇ ನಿಧಿ ಸ್ಥಾಪಿಸಬೇಕು. ಪ್ರತ್ಯೇಕ ನಿಧಿ ಸ್ಥಾಪಿಸದಿರುವುದರಿಂದ ಈ ಮೊದಲು ತೆಗೆದಿರಿಸಿರುವ ₹210 ಕೋಟಿ ಮತ್ತು ಈಗ ಕಾಯ್ದಿರಿಸಿರುವ 120 ಕೋಟಿ ರೂ. ಖುರ್ಚು ಮಾಡುವಂತಿಲ್ಲ ಎಂದು ಸೂಚಿಸಿದೆ.